Sameer Wankhede  Image source: X
ಸುದ್ದಿಗಳು

ಆರ್ಯನ್ ಖಾನ್ ಮಾದಕವಸ್ತು ಪ್ರಕರಣ: ಸಮೀರ್ ವಾಂಖೆಡೆ ವಿರುದ್ಧದ ಇಲಾಖಾ ತನಿಖೆಗೆ ಸಿಎಟಿ ತಡೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಆಗಸ್ಟ್ 18ರಂದು ವಾಂಖೆಡೆ ಅವರ ವಿರುದ್ಧ ಎರಡು ಹೊಸ ಆರೋಪ ಮಾಡಿತ್ತು.

Bar & Bench

ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಪ್ರಮುಖ ಆರೋಪಿಯಾಗಿದ್ದ 2021ರ ವಿಲಾಸಿ ಹಡಗಿನಲ್ಲಿ ಮಾದಕ ವಸ್ತುಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ತನಿಖಾಧಿಕಾರಿಯಾಗಿದ್ದ ಮಾದಕ ವಸ್ತುಗಳ ನಿಯಂತ್ರಣ ಸಂಸ್ಥೆಯ (ಎನ್‌ಸಿಬಿ) ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ವಿರುದ್ಧ ಕಂದಾಯ ಇಲಾಖೆಯ ಹೆಚ್ಚಿನ ತನಿಖೆಗೆ ತಾತ್ಕಾಲಿಕ ತಡೆ ನೀಡಿ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಬುಧವಾರ ಆದೇಶ ಹೊರಡಿಸಿದೆ [ಸಮೀರ್ ವಾಂಖೆಡೆ ಮತ್ತು ಕಂದಾಯ ಇಲಾಖೆ ನಡುವಣ ಪ್ರಕರಣ].

ಆಗಸ್ಟ್ 18ರಂದು ವಾಂಖೆಡೆ ವಿರುದ್ಧ ಸಲ್ಲಿಸಲಾದ  ಚಾರ್ಜ್‌ ಮೆಮೋದಲ್ಲಿ ಸಾಕ್ಷ್ಯಗಳಿಗೆ ಸಂಬಂಧಿಸಿದಂತೆ ಈಗಾಗಲೇ ಬಾಂಬೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಮುಂದೆ ಇಲಾಖಾ ತನಿಖೆ ಮುಂದುವರಿಯಲು ಅವಕಾಶವಿಲ್ಲ ಎಂದು ನ್ಯಾಯಮೂರ್ತಿ ರಂಜಿತ್ ಮೋರೆ ಹಾಗೂ ಆಡಳಿತಾತ್ಮಕ ಸದಸ್ಯ ರಾಜೀಂದರ್ ಕಶ್ಯಪ್ ಅವರಿದ್ದ ಸಿಎಟಿ ಪೀಠ ತಿಳಿಸಿದೆ.

ಇಲಾಖಾ ತನಿಖೆ ಸ್ಥಗಿತಗೊಳಿಸುವುದು ಮಾತ್ರವಲ್ಲದೆ ತನ್ನ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಪ್ರಶ್ನಿಸಿ ವಾಂಖೆಡೆ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಸಿಎಟಿ, ಕಂದಾಯ ಇಲಾಖೆಯ ಪ್ರತಿಕ್ರಿಯೆ ಕೇಳಿದೆ.

ಚಾರ್ಜ್‌ ಮೆಮೋದಲ್ಲಿ ಇರುವ ಎರಡು ಆರೋಪಗಳು

  • ಪ್ರಸ್ತುತ ಎನ್‌ಸಿಬಿಯ ಅಧಿಕಾರಿ ಅಲ್ಲದೇ ಹೋದರೂ ಎನ್‌ಸಿಬಿ ಇಲಾಖಾ ವಕೀಲರಿಂದ ಸೂಕ್ಷ್ಮ ಮತ್ತು ಗೌಪ್ಯ ಮಾಹಿತಿಯನ್ನು ವಾಂಖೆಡೆ ಅವರು ಜೂನ್ 2022ರಲ್ಲಿ ಉದ್ದೇಶಪೂರ್ವಕವಾಗಿ ಪಡೆಯಲು ಪ್ರಯತ್ನಿಸಿದರು.

  • ಆರ್ಯನ್ ಖಾನ್ ಮಾದಕವಸ್ತು ಪ್ರಕರಣದ ತನಿಖೆಯನ್ನು "ಗುಪ್ತ ಉದ್ದೇಶಕ್ಕಾಗಿ ಪೂರ್ವನಿರ್ಧರಿತ ಫಲಿತಾಂಶದ ಕಡೆಗೆ" ತಿರುಗಿಸಲು ವಾಂಖೆಡೆ ಅವರು ವಕೀಲರಿಂದ "ಆಶ್ವಾಸನೆ" ಪಡೆದರು ಎಂದು ಹೇಳಲಾಗಿದೆ.  ಈ ಆರೋಪಕ್ಕೆ ಆಧಾರವಾಗಿ ಸಂಭಾಷಣೆಯ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಈಗಾಗಲೇ ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂಬುದನ್ನು ನ್ಯಾಯಮಂಡಳಿ ದಾಖಲಿಸಿಕೊಂಡಿದ್ದು ಕಂದಾಯ ಇಲಾಖೆ ನಡೆಸುವ ತನಿಖೆಗೆ ತಡೆ ನೀಡಿತು.

ಇದನ್ನು ಗಣನೆಗೆ ತೆಗೆದುಕೊಂಡು, ಕಂದಾಯ ಇಲಾಖೆಗೆ ನೋಟಿಸ್ ಜಾರಿ ಮಾಡಿ, ಮುಂದಿನ ಯಾವುದೇ ಪ್ರಕ್ರಿಯೆಗಳಿಗೆ ತಡೆ ನೀಡಿತು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 14, 2025ರಂದು ನಡೆಯಲಿದೆ.

ವಾಂಖೆಡೆ ಪರ ವಕೀಲರಾದ ಜತಿನ್ ಪರಾಶರ್, ಅಜೇಶ್ ಲೂತ್ರಾ ಹಾಗೂ ಕಂದಾಯ ಇಲಾಖೆಯ ಪರವಾಗಿ ವಕೀಲ ಹನು ಭಾಸ್ಕರ್ ವಾದ ಮಂಡಿಸಿದರು.