Justice BR Gavai, Justice PS Narasimha and Justice Prashant Kumar Mishra 
ಸುದ್ದಿಗಳು

ಕಾವೇರಿ ವಿವಾದ: ತಮಿಳುನಾಡು ಬೇಡಿಕೆಗಿಲ್ಲ ಪುರಸ್ಕಾರ; ಸೆ.1ರೊಳಗೆ ವರದಿ ಸಲ್ಲಿಸಲು ಪ್ರಾಧಿಕಾರಕ್ಕೆ ಸುಪ್ರೀಂ ಸೂಚನೆ

ನಿತ್ಯ 24,000 ಕ್ಯೂಸೆಕ್ಸ್‌ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ತಮಿಳುನಾಡು ಸಲ್ಲಿಸಿದ್ದ ಮನವಿ ಆಲಿಸಿದ ಸುಪ್ರೀಂ ತಕ್ಷಣಕ್ಕೆ ಈ ಕುರಿತು ಆದೇಶ ನೀಡಲು ಮುಂದಾಗಲಿಲ್ಲ. ಬದಲಿಗೆ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲು ಸೂಚಿಸಿತು.

Bar & Bench

ತಮಿಳುನಾಡಿಗೆ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ನೀಡಿದ್ದ ನಿರ್ದೇಶನಗಳನ್ನು ಕರ್ನಾಟಕ ಸರ್ಕಾರ ಪಾಲಿಸಿದೆಯೇ ಎಂಬ ಕುರಿತು ಮುಂದಿನ ಶುಕ್ರವಾರದೊಳಗಾಗಿ (ಸೆ.1) ವರದಿ ಸಲ್ಲಿಸುವಂತೆ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ.

ನಿತ್ಯ 24,000 ಕ್ಯೂಸೆಕ್ಸ್‌ ಕಾವೇರಿ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮನವಿ ಆಲಿಸಿದ ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ, ಪಿ ಎಸ್‌ ನರಸಿಂಹ ಹಾಗೂ ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ತಕ್ಷಣಕ್ಕೆ ಈ ಕುರಿತು ಯಾವುದೇ ಆದೇಶ ನೀಡಲು ಮುಂದಾಗಲಿಲ್ಲ. ಬದಲಿಗೆ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲು ಸೂಚಿಸಿತು.

“ತಮಿಳು ನಾಡು ರಾಜ್ಯದ ವಾದ ಏನೆಂದರೆ ಪ್ರಾಧಿಕಾರದ ಆದೇಶದ ಹೊರತಾಗಿಯೂ ತಮಿಳುನಾಡಿಗೆ ನೀಡಬೇಕಾದ ನೀರನ್ನು ಕರ್ನಾಟಕ ಪೂರೈಸುತ್ತಿಲ್ಲ. ಪ್ರಾಧಿಕಾರ ನಿಗದಿಪಡಿಸಿದ ನೀರನ್ನು ಬಿಡಲಾಗಿದೆ ಎಂದು ಕರ್ನಾಟಕ ಹೇಳುತ್ತಿದೆ. ಆದರೆ ಆ ನೀರು ತಮಿಳುನಾಡು ತಲುಪಲು 3 ದಿನ ಸಮಯ ತೆಗೆದುಕೊಳ್ಳುತ್ತದೆ ಎಂದಿದೆ. ನಾವು ಈ ವಿಷಯದಲ್ಲಿ ಪರಿಣತಿಯನ್ನು ಹೊಂದಿಲ್ಲ” ಎಂದು ನ್ಯಾ. ಗವಾಯಿ ತಿಳಿಸಿದರು.

“ಮುಂದಿನ ಹದಿನೈದು ದಿನಗಳ ಕಾಲ ನೀರು ಬಿಡುವ ಸಂಬಂಧ ನಿರ್ಧಾರ ಕೈಗೊಳ್ಳುವುದಕ್ಕಾಗಿ ಸೋಮವಾರ ಪ್ರಾಧಿಕಾರ ಸಭೆ ನಡೆಸುತ್ತಿದೆ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (ಐಶ್ವರ್ಯಾ ಭಾಟಿ) ಮಾಹಿತಿ ನೀಡಿದ್ದಾರೆ. ನೀರು ಬೀಡಲು ನೀಡಿರುವ ನಿರ್ದೇಶನಗಳನ್ನು ಕರ್ನಾಟಕ ಪಾಲಿಸಿದೆಯೇ ಇಲ್ಲವೇ ಎಂಬುದರ ಕುರಿತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಎಂಡಬ್ಲ್ಯೂಎ) ವರದಿ ನೀಡುವುದು ಸೂಕ್ತ ಎಂದು ನಮಗೆ ಅನ್ನಿಸಿದೆ… ಮುಂದಿನ ಶುಕ್ರವಾರದೊಳಗೆ ಪ್ರಾಧಿಕಾರ ವರದಿ ಸಲ್ಲಿಸಲಿ” ಎಂದು ನ್ಯಾಯಾಲಯ ನುಡಿಯಿತು.

ಅಧಿಕಾರಿಗಳ ಆದೇಶಗಳು ತನ್ನ ಹಿತಾಸಕ್ತಿಗೆ ವ್ಯತಿರಿಕ್ತವಾಗಿವೆ ಎಂದು ಕರ್ನಾಟಕ ಹೇಳುತ್ತಿದ್ದು ತಾನು ಬಿಡಬೇಕಿರುವ ನೀರಿನ ಪಾಲನ್ನು ಕಡಿಮೆ ಮಾಡಲು ಅದು ಅರ್ಜಿ ಸಲ್ಲಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ತಮಿಳುನಾಡು ನೀರಿನ ಪಾಲು ಹೆಚ್ಚಳ ಮಾಡುವಂತೆ ಕೋರಿದೆ. ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ತಜ್ಞತೆ ಇಲ್ಲ. ಅಧಿಕಾರಿಗಳು ಇದನ್ನು ನಿರ್ಧರಿಸಲಿ. ಬರುವ ಶುಕ್ರವಾರ ವಿಚಾರಣೆ ನಡೆಸಲಾಗುವುದು ಎಂದು ನ್ಯಾ. ಗವಾಯಿ ಅವರು ಹೇಳಿದರು.  

ತನ್ನ ಬೆಳೆಗಳಿಗೆ ನೀರು ಹರಿಸುವುದಕ್ಕಾಗಿ ಅಂತರರಾಜ್ಯ ಗಡಿಯಲ್ಲಿರುವ ಬಿಳಿಗುಂಡ್ಲುವಿನಲ್ಲಿ ನಿಗದಿತ ಪ್ರಮಾಣದ ನೀರು ಲಭ್ಯ ಇರುವಂತೆ ನೋಡಿಕೊಳ್ಳಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ವಿನಂತಿಸಿತ್ತು.

ಇಂದಿನ ವಿಚಾರಣೆ ವೇಳೆ ತಮಿಳನಾಡು ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ ಎಸ್‌ ವೈದ್ಯನಾಥನ್‌  ಅವರು “ನಾನು ತಮಿಳುನಾಡಿನ ನಿಲುವನ್ನು ಬೆಂಬಲಿಸುತ್ತೇನೆ. ನೀರಿನ ಕೊರತೆ ಇದೆ" ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಗವಾಯಿ “ಆದರೆ ನೀರು ಬಿಡುಗಡೆಯಾಗಿದೆ ಅದು ತಮಿಳುನಾಡನ್ನು ತಲುಪಲು ಮೂರು ದಿನ ಹಿಡಿಯುತ್ತದೆ ಎಂದು ಕರ್ನಾಟಕ ಸರ್ಕಾರದ ಪರ ವಕೀಲರು ಹೇಳುತ್ತಾರೆ” ಎಂದರು.

ಕರ್ನಾಟಕವನ್ನು ಪ್ರತಿನಿಧಿಸಿದ್ದ ಹಿರಿಯ ನ್ಯಾಯವಾದಿ ಶ್ಯಾಮ್‌ ದಿವಾನ್‌ “ಇದು ಕರ್ನಾಟಕಕ್ಕೆ ಸಂಕಷ್ಟದ ವರ್ಷವಾಗಿದ್ದು, ಮಳೆಯ ಕೊರತೆ ಎದುರಾಗಿದೆ” ಎಂದರು.

ಈ ಹಂತದಲ್ಲಿ ರೋಹಟ್ಗಿ ಅವರು “15 ದಿನಗಳ ಒಳಗಾಗಿ 15,000 ಕ್ಯೂಸೆಕ್ ನೀರು ಹರಿಸಬೇಕೆಂದು ಪ್ರಾಧಿಕಾರ ಹೇಳಿದ್ದು ಆ ಗಡುವು ಇಂದಿಗೆ ಮುಕ್ತಾಯವಾಗಲಿದೆ. ಎರಡನೇ ಪ್ರಾಧಿಕಾರ 10,000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕೆಂದು ಹೇಳಿದೆ. ನ್ಯಾಯಾಲಯ ಮುಂದಿನ ತೀರ್ಪು ನೀಡುವವರೆಗೆ ನೀರು ಬಿಡುಗಡೆಯಾಗುತ್ತಿರಲಿ" ಎಂದು ಕೋರಿದರು.

ಆಗ ಪೀಠವು, "ನೀವೇಕೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಾರದು. ನಮಗೆ ಇದರಲ್ಲಿ ಪರಿಣತಿ ಇಲ್ಲ" ಎಂದಿತು. ಈ ಸಂದರ್ಭದಲ್ಲಿ ನ್ಯಾ. ನರಸಿಂಹ ಅವರು ಪ್ರಾಧಿಕಾರದ ಆದೇಶ ಇದ್ದರೂ ಅದು ಪಾಲನೆಯಾಗುತ್ತಿಲ್ಲ ಎಂದು ಆಕ್ಷೇಪಿಸಿದರು.

ವಾದ ಮುಂದುವರೆಸಿದ ರೋಹಟ್ಗಿ ನ್ಯಾಯಾಲಯ ತೀರ್ಪು ನೀಡುವವರೆಗೆ ನೀರು ಬಿಡಲಿ, ನೀರಿನ ಭಾರೀ ಕೊರತೆ ಉಂಟಾಗಿದೆ ಎಂದು ಮತ್ತೆ ಹೇಳಿದರು. ಇದಕ್ಕೆ ಉತ್ತರಿಸಿದ ನ್ಯಾ. ಗವಾಯಿ ಅವರ ವಿರುದ್ಧ ನಿಮ್ಮ ಮಾತು ಬಿಟ್ಟರೆ ಬೇರೇನೂ ಇಲ್ಲ ಎಂದರು.

ರೋಹಟ್ಗಿ ಅವರು ಆಗ “ಪ್ರಸ್ತುತ ಸ್ಥಿತಿ ವಿವರಿಸಲು ಸೋಮವಾರದೊಳಗೆ ವರದಿ ಸಲ್ಲಿಸುವಂತೆ ನೀವು ಪ್ರಾಧಿಕಾರಕ್ಕೆ ಮನವಿ ಮಾಡಬಹುದು ಎಂದು ಹೇಳಿದರು.

ಈ ಮಧ್ಯೆ ಎಎಸ್ ಜಿ ಭಾಟಿ ಅವರು “ಇದು ಕೊರತೆಯ ವರ್ಷವಾಗಿದ್ದು, ಎಷ್ಟೇ ನೀರು ಇದ್ದರೂ ಹಂಚಿಕೊಳ್ಳಬೇಕಿದೆ. ಪ್ರಾಧಿಕಾರ ಸೋಮವಾರ ಸಭೆ ಸೇರುತ್ತಿದ್ದು, ವಿಚಾರಣೆಗೆ ಕಾಯಬಹುದು” ಎಂದರು.

ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಸಭೆ ನಡೆಸಿದ ಬಳಿಕ ಮುಂದಿನ ಶುಕ್ರವಾರ ವಿಚಾರಣೆ ನಡೆಯಲಿದೆ ಎಂದು ಸುಪ್ರೀಂ ಕೋರ್ಟ್‌ ತಿಳಿಸಿತು.