Karnataka HC and Justice Sachin Shankar Magadum 
ಸುದ್ದಿಗಳು

ಕಾವೇರಿ ತಂತ್ರಾಂಶ: ಸಿವಿಲ್‌ ಕೋರ್ಟ್‌ ಡಿಕ್ರಿ ಕುರಿತ ಶೀರ್ಷಿಕೆ ಸೇರ್ಪಡೆ ಮಾಡಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಸದ್ಯ ಕಾವೇರಿ 2.0 ಮಾರಾಟ, ಗಿಫ್ಟ್‌ ಡೀಡ್‌, ಅಡಮಾನ, ಪಿತಾರ್ಜಿತ ಆಸ್ತಿ ಕುರಿತ ವಹಿವಾಟುಗಳನ್ನು ಆಧರಿಸಿದೆ. ಇದರಲ್ಲಿ ಆಸ್ತಿ ವಿವಾದಗಳ ಕುರಿತಂತೆ ಸಿವಿಲ್‌ ನ್ಯಾಯಾಲಯಗಳ ತೀರ್ಪು ಪರಿಶೀಲಿಸಲು ಯಾವುದೇ ಅವಕಾಶವಿಲ್ಲ ಎಂದು ನ್ಯಾಯಾಲಯ ಹೇಳಿದೆ.

Bar & Bench

ಚಾಲ್ತಿಯಲ್ಲಿರುವ ಕಾವೇರಿ 2.0 ತಂತ್ರಾಂಶದ ಕಾನೂನಿನಲ್ಲಿ, ‘ಮ್ಯುಟೇಷನ್‌ ಆಧಾರಿತ ಸಿವಿಲ್‌ ಕೋರ್ಟ್‌ ಡಿಕ್ರಿ’ ಎಂಬ ಹೊಸ ಕಾರ್ಯ ನಿರ್ವಹಣಾ ಶೀರ್ಷಿಕೆಯನ್ನೂ ಸೇರ್ಪಡೆ ಮಾಡಿ ಪರಿಷ್ಕರಿಸಬೇಕು ಎಂದು ನೋಂದಣಿ ಮತ್ತು ಮುದ್ರಾಂಕ ಹಾಗೂ ಕಂದಾಯ ಇಲಾಖೆಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ.

ಸಿವಿಲ್ ವ್ಯಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯ ಅಂಗೀಕರಿಸಿದ ರಾಜಿ ಡಿಕ್ರಿಯ ಅನುಸಾರ ನಮ್ಮ ಹೆಸರಿಗೆ ಖಾತಾ ವರ್ಗಾವಣೆ ಮಾಡಲು ನಿರ್ದೇಶಿಸಬೇಕು ಎಂದು ಕೋರಿ ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ಗಿಲ್ಬರ್ಟ್‌ ವಾಸ್‌ ಸೇರಿದಂತೆ ಐವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಸದ್ಯ ಕಾವೇರಿ 2.0 ಮಾರಾಟ, ಗಿಫ್ಟ್‌ ಡೀಡ್‌, ಅಡಮಾನ, ಪಿತಾರ್ಜಿತ ಆಸ್ತಿ ಕುರಿತ ವಹಿವಾಟುಗಳನ್ನು ಆಧರಿಸಿದೆ ಮತ್ತು ಇದರಲ್ಲಿ ಆಸ್ತಿ ವಿವಾದಗಳ ಕುರಿತಂತೆ ಸಿವಿಲ್‌ ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸಲು ಯಾವುದೇ ಅವಕಾಶವಿಲ್ಲ. ಇದರಿಂದಾಗಿ ನಾಗರಿಕರು, ನ್ಯಾಯಾಲಯಗಳು ನಿರ್ಣಾಯಕವಾಗಿ ನಿರ್ಧರಿಸಿದ ವಿಷಯಗಳಿಗೆ ಹಲವು ಅನುಮೋದನೆಗಳು, ಪರಿಶೀಲನೆಗಳು ಮತ್ತು ಪ್ರಮಾಣೀಕರಣಗಳನ್ನು ಪಡೆಯಬೇಕು ಎಂದು ಸೂಚಿಸುತ್ತದೆ. ಹಾಗಾಗಿ, ಹಾಲಿ ತಂತ್ರಾಂಶದಲ್ಲಿ ಗೊಂದಲ ಉಂಟು ಮಾಡುತ್ತಿರುವ ಕಾರಣ ಪರಿಷ್ಕರಣೆ ಅತ್ಯಗತ್ಯವಾಗಿದೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಕೋರ್ಟ್‌ ತೀರ್ಪುಗಳು ಮತ್ತು ಆಡಳಿತಾತ್ಮಕ ನಿರ್ಣಯಗಳನ್ನು ಜಾರಿಗೊಳಿಸುವ ಮಧ್ಯೆ ಸಮನ್ವಯ ಸ್ಥಾಪಿಸಲು ಮತ್ತು ಸಿವಿಲ್‌ ನ್ಯಾಯಾಲಯದ ತೀರ್ಪುಗಳು ರಾಜ್ಯದ ಡಿಜಿಟಲ್‌ ಕಂದಾಯ ಮೂಲಸೌಕರ್ಯದಲ್ಲಿ ಸ್ವಯಂಚಾಲಿತವಾಗಿ ಸೇರ್ಪಡೆಗೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸೆಂಟರ್‌ ಫಾರ್‌ ಸ್ಮಾರ್ಟ್‌ ಗವರ್ನೆನ್ಸ್‌ (ಸಿಎಸ್‌ಜಿ) ಸಹಯೋಗದೊಂದಿಗೆ ಕಾನೂನಿನ ಪರಿಷ್ಕರಣೆ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

Gilbert Vas Vs State of Karnataka.pdf
Preview