'2020 ದೆಹಲಿ' ಚಲನಚಿತ್ರ ಬಿಡುಗಡೆ ಮುಂದೂಡಲು ನಿರ್ದೇಶಿಸುವಂತೆ ಕೋರಿ ದೆಹಲಿ ಗಲಭೆ ಪ್ರಕರಣದ ಆರೋಪಿ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಶಾರ್ಜೀಲ್ ಇಮಾಮ್ ಅವರು ಮಾಡಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.
ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಇನ್ನಷ್ಟೇ ಚಿತ್ರಕ್ಕೆ ಪ್ರಮಾಣಪತ್ರ ನೀಡಬೇಕಿರುವುದರಿಂದ ಅರ್ಜಿಯ ವಿಚಾರಣೆ ಅಕಾಲಿಕವಾಗುತ್ತದೆ ಎಂದು ನ್ಯಾ. ಸಚಿನ್ ದತ್ತಾ ಜನವರಿ 31ರಂದು ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.
ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌ಗೆ ಸಂಬಂಧಿಸಿದಂತೆಯೂ ಶಾರ್ಜೀಲ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಟ್ರೇಲರ್ ಪ್ರಸಾರವಾಗುವ ಮೊದಲು ಸೂಕ್ತ ಹಕ್ಕು ತ್ಯಾಗ ಹೇಳಿಕೆ ಪ್ರಸಾರ ಮಾಡಲಾಗುವುದು ಎಂದು ಚಿತ್ರ ನಿರ್ಮಾಪಕರು ನೀಡಿದ ಭರವಸೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿತು.
ಸಿನಿಮಾ ಬಿಡುಗಡೆಯಾದರೆ ದೆಹಲಿ ಗಲಭೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ತನ್ನ ಪ್ರಕರಣಗಳ ವಿಚಾರಣೆ ಮತ್ತು ಜಾಮೀನು ಮನವಿ ಮೇಲೆ ಗಂಭೀರ ಪೂರ್ವಾಗ್ರಹ ಉಂಟಾಗುತ್ತದೆ ಎಂದು ಇಮಾಮ್ ಹೈಕೋರ್ಟ್‌ನಲ್ಲಿ ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣಗಳ ವಿಚಾರಣೆ ಪೂರ್ಣಗೊಳ್ಳುವವರೆಗೆ ಸಿನಿಮಾ ಬಿಡುಗಡೆಗೆ ತಡೆ ನೀಡುವಂತೆ ಅವರು ಕೋರಿದ್ದರು.
ಫೆಬ್ರವರಿ 2020ರ ದೆಹಲಿ ಗಲಭೆ ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳ ಸುತ್ತ ಚಿತ್ರದ ಕಥಾಹಂದರ ಇದೆ ಎನ್ನಲಾಗಿದೆ. ಚಿತ್ರವನ್ನು ದೇವೇಂದ್ರ ಮಾಳವೀಯ ನಿರ್ದೇಶಿಸಿದ್ದು ಬ್ರಿಜೇಂದ್ರ ಕಾಲಾ, ಚೇತನ್ ಶರ್ಮಾ, ಆಕಾಶದೀಪ್ ಅರೋರಾ ಮತ್ತು ಸಿದ್ಧಾರ್ಥ್ ಭಾರದ್ವಾಜ್ ಪ್ರಮುಖ ತಾರಾಗಣದಲ್ಲಿದ್ದಾರೆ.
ಇಮಾಮ್ ಪರವಾಗಿ ವಕೀಲೆ ವಾರಿಶಾ ಫರಾಸತ್, ಸಿನಿಮಾ ಬಿಡುಗಡೆ ಪ್ರಶ್ನಿಸಿರುವ ಇನ್ನೂ ಇಬ್ಬರು ಅರ್ಜಿದಾರರ ಪರವಾಗಿ ವಕೀಲ ಮೆಹಮೂದ್ ಪ್ರಾಚಾ ಹಾಗೂ ಡಾ ಅಮಿತ್ ಜಾರ್ಜ್, ಚಿತ್ರ ತಯಾರಕರ ಪರವಾಗಿ ಜಯಂತ್ ಮೆಹ್ತಾ, ಸಿಬಿಎಫ್‌ಸಿ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ವಾದ ಮಂಡಿಸಿದರು.