Yogesh Gowda Facebook
ಸುದ್ದಿಗಳು

[ಯೋಗೀಶ್‌ ಗೌಡ ಕೊಲೆ ಪ್ರಕರಣ] ಸಿಬಿಐನಿಂದ ಆರೋಪಿ ಪರ ವಕೀಲರ ಸಿಡಿಆರ್‌ ಸಂಗ್ರಹ: ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಕೆ

ವಿನಯ ಕುಲಕರ್ಣಿ ಪರ ಹಿರಿಯ ವಕೀಲರಾದ ಸಿ ವಿ ನಾಗೇಶ್‌ ಮತ್ತು ಎಂ ಎಸ್‌ ಶ್ಯಾಮಸುಂದರ್‌ ಅವರು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರಿಗೆ ಗುರುವಾರ ದೂರಿನ ಅರ್ಜಿ ಸಲ್ಲಿಸಿದರು.

Bar & Bench

ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಬಿಐ ತನಿಖಾಧಿಕಾರಿಗಳು ಆರೋಪಿ ಪರ ವಕೀಲರ ದೂರವಾಣಿ ಕರೆಗಳ ಸಿಡಿಆರ್‌ ಸಂಗ್ರಹಿಸಿದ್ದಾರೆ ಎಂದು ಪ್ರಕರಣದ ಆರೋಪಿಯಾಗಿರುವ ಶಾಸಕ ವಿನಯ ಕುಲಕರ್ಣಿ ಪರ ವಕೀಲರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರಿದರು.

ವಿನಯ ಕುಲಕರ್ಣಿ ಪರ ಹಿರಿಯ ವಕೀಲರಾದ ಸಿ ವಿ ನಾಗೇಶ್‌ ಮತ್ತು ಎಂ ಎಸ್‌ ಶ್ಯಾಮಸುಂದರ್‌ ಅವರು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರಿಗೆ ಗುರುವಾರ ದೂರಿನ ಅರ್ಜಿ ಸಲ್ಲಿಸಿದರು.

ಸಿಬಿಐ ನಡೆ ವಿರೋಧಿಸಿ ಸುದೀರ್ಘ ವಾದ ಮಂಡಿಸಿದ ಶ್ಯಾಮಸುಂದರ್‌ ಅವರು “ಆರೋಪಿ ಪರ ವಕೀಲರ ಮೊಬೈಲ್ ಕರೆಗಳನ್ನು ಗುಪ್ತವಾಗಿ ಆಲಿಸುವುದು ಮತ್ತು ಅವರ ಕಾರಿನ ಚಲನವಲನಗಳ ಮೇಲೆ ನಿಗಾ ಇರಿಸುವ ಮೂಲಕ ತನಿಖಾಧಿಕಾರಿ ದುರುದ್ದೇಶಪೂರಿತ ನಡವಳಿಕೆ ಹೊಂದಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಈ ಪ್ರಕರಣದ ತನಿಖೆಯಲ್ಲಿ ಸಿಬಿಐ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಿಲ್ಲ” ಎಂದು ಆರೋಪಿಸಿದರು.

“ತನಿಖೆ ಮುಗಿದ ಬಳಿಕವೂ ಮಾಹಿತಿ ಸಂಗ್ರಹ ಮಾಡುತ್ತಿರುವುದು ಕಾನೂನು ಬಾಹಿರ. ಆರೋಪಿಗಳ ಸಿಡಿಆರ್ ಹಾಗೂ ಕಾಲ್ ರೆಕಾರ್ಡ್ ಸಂಗ್ರಹಿಸಲು ಸಿಬಿಐಗೆ ಅಧಿಕಾರವೇ ಇಲ್ಲ. ಆದ್ದರಿಂದ, ಆರೋಪಿಗಳ ಜಾಮೀನು ರದ್ದು ಕೋರಿ ಸಿಬಿಐ ಸಲ್ಲಿಸಿರುವ ಅರ್ಜಿಯನ್ನು ಹಿಂದಕ್ಕೆ ಪಡೆಯಲು ನಿರ್ದೇಶಿಸಬೇಕು” ಎಂದು ಕೋರಿದರು.

ಆರೋಪಿಗಳ ಪರ ವಕೀಲರ ದೂರು ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸಿಬಿಐ ಪರ ವಕೀಲ ಗಂಗಾಧರ ಶೆಟ್ಟಿ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಏಪ್ರಿಲ್‌ 19ಕ್ಕೆ ಮುಂದೂಡಿತು.