ಸುದ್ದಿಗಳು

ವಿಚಾರಣೆಯ ದಾಖಲೆ ಸೋರಿಕೆ: ಅನಿಲ್ ದೇಶಮುಖ್ ಪರ ವಕೀಲರೊಬ್ಬರನ್ನು ಬಂಧಿಸಿದ ಸಿಬಿಐ

Bar & Bench

ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಬುಧವಾರ ಮುಂಬೈ ವಕೀಲ ಆನಂದ್ ದಾಗಾ ಅವರನ್ನು ಬಂಧಿಸಿದೆ. ತನಿಖೆಗೆ ಸಂಬಂಧಿಸಿದಂತೆ ಕಿರಿಯ ಸಿಬಿಐ ಅಧಿಕಾರಿಯಿಂದ ಅಕ್ರಮವಾಗಿ ದಾಖಲೆ ಸಂಗ್ರಹಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.

ದೇಶಮುಖ್ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತು ಬಾಂಬೆ ಹೈಕೋರ್ಟ್ ಆದೇಶಿಸಿದ್ದ ಪ್ರಾಥಮಿಕ ವಿಚಾರಣೆಯ ಮೇಲೆ ಕೂಡ ಪ್ರಭಾವ ಬೀರಲು ಯತ್ನಿಸಿದ ಆರೋಪದ ಮೇಲೆ ಸಿಬಿಐ, ವಕೀಲ ದಾಗಾ ವಿರುದ್ಧ ಎಫ್ಐಆರ್ ದಾಖಲಿಸಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಸಿಬಿಐನ ಆಂತರಿಕ ದಾಖಲೆ ಪಡೆದುಕೊಳ್ಳುವ ಸಲುವಾಗಿ ಕೆಳ ದರ್ಜೆಯ ಅಧಿಕಾರಿಗೆ ಅಕ್ರಮವಾಗಿ ಲಾಭ ಮಾಡಿಕೊಡಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಶಂಕಿಸಿದ್ದಾರೆ.

ಸೋರಿಕೆಯಾಗಿದೆ ಎಂದು ಸಿಬಿಐ ಶನಿವಾರ ಆರೋಪಿಸಿರುವ ದಾಖಲೆ ಪ್ರಾಥಮಿಕ ವಿಚಾರಣೆಯ ವರದಿಯಲ್ಲಿ ದೇಶಮುಖ್‌ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದ್ದು, ಅವರ ವಿರುದ್ಧದ ತನಿಖೆಯನ್ನು ಮುಚ್ಚಿಹಾಕಲು ಶಿಫಾರಸು ಮಾಡಲಾಗಿತ್ತು ಎನ್ನಲಾಗಿದೆ. ಬುಧವಾರ ದೇಶಮುಖ್‌ ಅವರ ಅಳಿಯ ಗೌರವ್‌ ಚತುರ್ವೇದಿ ಮತ್ತು ದಾಗಾ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸುವ ಮುನ್ನ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ಪ್ರಕರಣದಲ್ಲಿ ಚತುರ್ವೇದಿ ಅವರು ಭಾಗಿಯಾಗಿರುವುದು ಖಚಿತವಾಗದ ಕಾರಣ ಅವರನ್ನು ಬಿಟ್ಟು ಕಳುಹಿಸಲಾಗಿತ್ತು. ದಾಗಾ ಜೊತೆ ಸಂಪರ್ಕದಲ್ಲಿದ್ದ ಕಿರಿಯ ಅಧಿಕಾರಿ, ಸಬ್ ಇನ್ಸ್‌ಪೆಕ್ಟರ್ ಅಭಿಷೇಕ್ ತಿವಾರಿಯನ್ನೂ ಸಿಬಿಐ ಬಂಧಿಸಿದೆ ಎಂದು ಮೂಲಗಳು ಹೇಳಿವೆ.