CBI, ED, WEST BENGAL map and supreme court  
ಸುದ್ದಿಗಳು

ರಾಜ್ಯ ಪ್ರವೇಶಿಸಲು ಸಿಬಿಐಗೆ ಅವಕಾಶವಿತ್ತರೆ ಇ ಡಿ ಕೂಡ ಹಿಂಬಾಲಿಸುತ್ತದೆ: ಸುಪ್ರೀಂ ಕೋರ್ಟ್‌ನಲ್ಲಿ ಪ. ಬಂಗಾಳ ಆಕ್ಷೇಪ

ಕೇಂದ್ರ ಸರ್ಕಾರ ಸಿಬಿಐ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಮೂಲ ದಾವೆಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Bar & Bench

ತನಿಖೆ ನಡೆಸಲೆಂದು ಸಿಬಿಐಗೆ ರಾಜ್ಯ ಪ್ರವೇಶಿಸಲು ಅವಕಾಶವಿತ್ತರೆ ಸಾಮಾನ್ಯವಾಗಿ ಜಾರಿ ನಿರ್ದೇಶನಾಲಯವೂ ಅದನ್ನು ಹಿಂಬಾಲಿಸಿ ಬರುತ್ತದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪಿಸಿತು [ಪ. ಬಂಗಾಳ ಸರ್ಕಾರ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಇವೆಲ್ಲವೂ ಭಾರತೀಯ ರಾಜಕೀಯದ ಮೇಲೆ ಅಗಾಧ ಪರಿಣಾಮ ಬೀರುವಂತಹವು ಎಂದು ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ಅವರು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠಕ್ಕೆ ತಿಳಿಸಿದರು.

ಕೇಂದ್ರ ಸರ್ಕಾರ ಸಿಬಿಐ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಮೂಲ ದಾವೆಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ರಾಜ್ಯ ಸರ್ಕಾರದ ಸಾಮಾನ್ಯ ಒಪ್ಪಿಗೆಯಿಲ್ಲದೆ ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಸಿಬಿಐ ತನಿಖೆ ಮಾಡುವಂತಿಲ್ಲ ಎಂದು ಸಿಬಲ್‌ ತಿಳಿಸಿದರು.

ಈ ದೇಶದ ಒಕ್ಕೂಟ ರಚನೆಯ ಮೇಲೆ ಪರಿಣಾಮ ಬೀರುವ ಶಾಸನದೊಂದಿಗೆ [ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯಿದೆ] ನಾವು ವ್ಯವಹರಿಸುತ್ತಿದ್ದೇವೆ. ಸಿಬಿಐ ರಾಜ್ಯ ಪ್ರವೇಶಿಸುವ ಮುನ್ನ ಅದು ಸಾಮಾನ್ಯ ಅನುಮತಿ ಪಡೆಯುವುದು ಅಗತ್ಯ. ಸಿಬಿಐ ಒಮ್ಮೆ ರಾಜ್ಯದಲ್ಲಿ ಕಾಲಿರಿಸಿದರೆ ಇ ಡಿ ಕೂಡ ತನಿಖೆಗೆ ಮುಂದಾಗುತ್ತದೆ. ಇದು ದೇಶದ ರಾಜಕೀಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

ಒಮ್ಮೆ ನೀವು ಸಿಬಿಐಗೆ ರಾಜ್ಯದಲ್ಲಿ ಆಸ್ಪದ ಕಲ್ಪಿಸಿದರೆ, ಇದರ ಬೆನ್ನಿಗೇ ಅನುಸೂಚಿತ ಅಪರಾಧಗಳ (ಪ್ರೆಡಿಕೇಟ್‌ ಅಫೆನ್ಸ್) ತನಿಖೆಗೆಂದು ಇ ಡಿ (ಜಾರಿ ನಿರ್ದೇಶನಾಲಯ) ಕೂಡ ಬರುತ್ತದೆ. ಇದು ಈ ದೇಶದ ರಾಜಕಾರಣದ ಮೇಲೆ ಅಗಾಧ ಪರಿಣಾಮವನ್ನು ಬೀರಿದೆ ಎಂದು ಸಿಬಲ್‌ ವಿವರಿಸಿದರು.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ನೇತೃತ್ವದ ರಾಜ್ಯ ಸರ್ಕಾರ ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ ಮೊಕದ್ದಮೆ ಎತ್ತಿ ತೋರಿಸುತ್ತದೆ. ಆದ್ದರಿಂದ ಸಿಬಿಐ ಇನ್ನು ಮುಂದೆ ಪಶ್ಚಿಮ ಬಂಗಾಳದಲ್ಲಿ ತನಿಖೆ ಮುಂದುವರಿಸಲು ಸಾಧ್ಯವಿಲ್ಲ  ಎಂದು ಅವರು ಪ್ರತಿಪಾದಿಸಿದರು.

ರಾಜ್ಯದಲ್ಲಿ ಚುನಾವಣಾ ಸಂಬಂಧಿತ ಹಿಂಸಾಚಾರದ ಬಗ್ಗೆ ಸಿಬಿಐ 2021ರಲ್ಲಿ ತನಿಖೆ ಆರಂಭಿಸಿತ್ತು. ಇದರ ನಂತರ ಪಶ್ಚಿಮ ಬಂಗಾಳ ಸರ್ಕಾರ ಕೇಂದ್ರದ ವಿರುದ್ಧ ಎರಡು ಪ್ರಕರಣಗಳನ್ನು ಹೂಡಿದ್ದು ಇದು ಅದರಲ್ಲಿ ಒಂದಾಗಿದೆ.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪಶ್ಚಿಮ ಬಂಗಾಳ ಸರ್ಕಾರದ ಮೂಲ ದಾವೆ ವಜಾಕ್ಕೆ ಅರ್ಹವಾಗಿದೆ. ಸಿಬಿಐ ಸ್ವತಂತ್ರ ಸಂಸ್ಥೆಯೇ ಹೊರತು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವುದಿಲ್ಲ. ಆದ್ದರಿಂದ, ಪ್ರಕರಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮೊಕದ್ದಮೆ ಹೂಡುವಂತಿಲ್ಲ. ಸಂವಿಧಾನದ 131 ನೇ ವಿಧಿಯ ಅಡಿಯಲ್ಲಿ ಸಿಬಿಐ ಅನ್ನು ಮೂಲ ಮೊಕದ್ದಮೆಯ ವಿಷಯವನ್ನಾಗಿ ಮಾಡಲು ಸಾಧ್ಯವಿಲ್ಲ ಎಂದರು.

ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ, ವಕೀಲರಾದ ಶದನ್ ಫರಾಸತ್  ಆಸ್ತಾ ಶರ್ಮಾ ಕೂಡ ಪಶ್ಚಿಮ ಬಂಗಾಳ ಸರ್ಕಾರದ  ಪರವಾಗಿ ಇಂದು ಹಾಜರಿದ್ದರು. ಮೇ 9ರಂದು ವಿಚಾರಣೆ ಮುಂದುವರಿಯಲಿದೆ.