ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಮತ್ತು ಅವರ ಇಬ್ಬರು ಸಹವರ್ತಿಗಳ ವಿರುದ್ಧ ಕೇಂದ್ರೀಯ ತನಿಖಾ ದಳವು (ಸಿಬಿಐ) ಗುರುವಾರ ಮುಂಬೈ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 2021ರ ನವೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯವು ದೇಶಮುಖ್ ಮತ್ತು ಇತರರನ್ನು ಬಂಧಿಸಿತ್ತು. ಬಳಿಕ ಈ ವರ್ಷದ ಏಪ್ರಿಲ್‌ನಲ್ಲಿ ಸಿಬಿಐ ದೇಶಮುಖ್ ಮತ್ತು ಇತರರನ್ನು ತನ್ನ ವಶಕ್ಕೆ ಪಡೆದಿತ್ತು.
ಏಪ್ರಿಲ್ 16ರವರೆಗೆ ಸಿಬಿಐ ಕಸ್ಟಡಿಯಲ್ಲಿದ್ದ ದೇಶಮುಖ್ ಮತ್ತು ಇತರರನ್ನು ಬಳಿಕ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಪರಿಶೀಲನೆಗೆ ಆರೋಪ ಪಟ್ಟಿ ಸಲ್ಲಿಸುವುದನ್ನು ಇಂದು ಸಿಬಿಐ ತಡ ಮಾಡಿತ್ತು. ಸಿಬಿಐ ವಿಶೇಷ ನ್ಯಾಯಾಧೀಶರ ಅನುಮತಿಯ ಮೇರೆಗೆ ಸಂಜೆ 4:30 ವೇಳೆಗೆ ಆರೋಪ ಪಟ್ಟಿಯನ್ನು ಸ್ವೀಕರಿಸಲಾಯಿತು.
ಡಾ. ಜೈಶ್ರೀ ಪಾಟೀಲ್ ಅವರ ದೂರನ್ನು ಆಧರಿಸಿ ನಡೆಸಿದ ಪ್ರಾಥಮಿಕ ತನಿಖೆ ಬಳಿಕ ದೇಶಮುಖ್ ಮತ್ತು ಇತರರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿತ್ತು.