Anil Deshmukh, Bombay High Court 
ಸುದ್ದಿಗಳು

ಸಿಬಿಐ ಎಫ್‌ಐಆರ್‌ ವಜಾ ಕೋರಿದ್ದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಮನವಿ ವಜಾ ಮಾಡಿದ ಬಾಂಬೆ ಹೈಕೋರ್ಟ್‌

ಆದೇಶದಲ್ಲಿ ನೀಡಲಾಗಿರುವ ವಿಸ್ತೃತ ಕಾರಣಗಳ ಹಿನ್ನೆಲೆಯಲ್ಲಿ ಅರ್ಜಿ ವಜಾಕ್ಕೆ ಅರ್ಹವಾಗಿದೆ ಎಂದು ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಎನ್‌ ಜೆ ಜಮಾದಾರ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

Bar & Bench

ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿರುವ ಎಫ್‌ಐಆರ್‌ ರದ್ದು ಮಾಡಲು ಗುರುವಾರ ಬಾಂಬೆ ಹೈಕೋರ್ಟ್‌ ನಿರಾಕರಿಸಿದೆ.

ಆದೇಶದಲ್ಲಿ ವಿಸ್ತೃತವಾಗಿ ನೀಡಲಾಗಿರುವ ಕಾರಣಗಳ ಹಿನ್ನೆಲೆಯಲ್ಲಿ ದೇಶಮುಖ್‌ ಅರ್ಜಿ ವಜಾಕ್ಕೆ ಅರ್ಹವಾಗಿದೆ ಎಂದು ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಎನ್‌ ಜೆ ಜಮಾದಾರ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ದೇಶಮುಖ್‌ ಜೊತೆ ಮತ್ತೆ ಬೇರೆ ಯಾರದ್ದಾದರೂ ಹೆಸರು ಕೇಳಿಬಂದಿದೆಯೇ ಎಂಬುದನ್ನು ತಿಳಿಯಲು ನ್ಯಾಯಮೂರ್ತಿಗಳು ತನಿಖೆಯ ಸ್ಥಿತಿಗತಿ ಬಗ್ಗೆ ಕೇಳಿದ್ದರು. ತೀರ್ಪು ಕಾಯ್ದಿರಿಸಿದ್ದ ಪೀಠವು ಇಲ್ಲಿಯವರೆಗೆ ನಡೆಸಿರುವ ತನಿಖೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶಿಸಿತ್ತು. ಆದೇಶದ ಹೊರಡಿಸುವುದಕ್ಕೂ ಮುನ್ನ ಪೀಠವು ಸಿಬಿಐಗೆ ತನಿಖಾ ದಾಖಲೆಗಳನ್ನು ರಿಜಿಸ್ಟ್ರಾರ್‌ ಜನರಲ್‌ಗೆ ಹಿಂದಿರುಗಿಸುವಂತೆ ಸೂಚಿಸಿತು.

ಆದೇಶವು ಕಾನೂನಿನ ಪ್ರಮುಖ ಪ್ರಶ್ನೆಗಳನ್ನು ಒಳಗೊಂಡಿರುವುದರಿಂದ ಅದನ್ನು ಅಧ್ಯಯನ ಮಾಡಿ ಅಗತ್ಯ ಕ್ರಮಕೈಗೊಳ್ಳಬೇಕಿರುವುದರಿಂದ ಆದೇಶಕ್ಕೆ ತಡೆ ನೀಡುವಂತೆ ದೇಶಮುಖ್‌ ಪರ ಹಿರಿಯ ವಕೀಲ ಅಮಿತ್‌ ದೇಸಾಯಿ ಮನವಿ ಮಾಡಿದರು.

ಕಾನೂನಿನ ಯಾವುದೇ ಪ್ರಶ್ನೆ ಇಲ್ಲದಿರುವುರಿಂದ ಆದೇಶಕ್ಕೆ ತಡೆ ನೀಡದಂತೆ ಸಿಬಿಐ ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದಿಸಿದ್ದರು. ಯಾವುದೇ ಗಮನಾರ್ಹವಾದ ಕಾನೂನಿನ ಪ್ರಶ್ನೆ ಇಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು ತಡೆ ನೀಡುವ ಅಗತ್ಯವಿಲ್ಲ ಎಂದಿತು.

ಭ್ರಷ್ಟಾಚಾರ ಮತ್ತು ಕ್ರಿಮಿನಲ್‌ ಪಿತೂರಿ ಆರೋಪದಲ್ಲಿ ಸಿಬಿಐ ದಾಖಲಿಸಿದ್ದ ಎಫ್‌ಐಆರ್‌ ಅನ್ನು ಪ್ರಶ್ನಿಸಿದ್ದ ದೇಶಮುಖ್‌ ಅವರು ಎಫ್‌ಐಆರ್‌ ದಾಖಲಿಸುವುದಕ್ಕೂ ಮುನ್ನ ತಾನು ಸಾರ್ವಜನಿಕ ಸೇವಕನಾಗಿದ್ದರಿಂದ ಅಗತ್ಯ ಅನುಮತಿ ಪಡೆದಿರಲಿಲ್ಲ ಎಂದು ವಾದಿಸಿದ್ದರು.

ಮಧ್ಯಂತರ ವಿಚಾರಣೆ ಕೋರಿ ಸಲ್ಲಿಸಿದ್ದ ಮನವಿಯನ್ನೂ ನ್ಯಾಯಾಲಯವು ತಿರಸ್ಕರಿಸಿತ್ತು. ಎಫ್‌ಐಆರ್‌ ವಜಾ ಕೋರಿದ್ದ ದೇಸಾಯಿ ಅವರು ಮಹಾರಾಷ್ಟ್ರ ಸರ್ಕಾರದಿಂದ ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 17ಎ ಅಡಿಯಲ್ಲಿ ಕಡ್ಡಾಯವಾಗಿರುವ 'ಹಿಂದಿನ ಅನುಮೋದನೆ' ಪಡೆಯಲು ಸಿಬಿಐ ವಿಫಲವಾಗಿದೆ. ನ್ಯಾಯಾಲಯದ ಆದೇಶದ ಪ್ರಾಥಮಿಕ ವಿಚಾರಣೆಯನ್ನು ಪ್ರಾರಂಭಿಸುವ ಮೊದಲು ಇಡೀ ವಿಚಾರಣೆಯನ್ನು ಕಾನೂನುಬಾಹಿರಗೊಳಿಸಿದೆ ಎಂದು ವಾದಿಸಿದ್ದರು.

ಆರೋಪಗಳು ಸುಳ್ಳಾಗಿರುವ ಸಾಧ್ಯತೆ ಇರುವುದರಿಂದ ರಾಜ್ಯ ಸರ್ಕಾರದಿಂದ ಅನುಮತಿ ಪಡೆಯುವುದು ಸಿಬಿಐ ಕರ್ತವ್ಯವಾಗಿದೆ ಎಂದು ದೇಸಾಯಿ ಹೇಳಿದ್ದರು. ಇದಕ್ಕಾಗಿ, ದೆಹಲಿ ವಿಶೇಷ ಪೊಲೀಸ್‌ ಸ್ಥಾಪನಾ ಕಾಯಿದೆಯ ಸೆಕ್ಷನ್‌ 6ರ ಪ್ರಕಾರ ಪ್ರಾಥಮಿಕ ತನಿಖೆ ಪೂರ್ಣಗೊಂಡು ಎಫ್‌ಐಆರ್‌ ದಾಖಲಿಸುವುದಕ್ಕೂ ಮುನ್ನ ಮಹಾರಾಷ್ಟ್ರ ಸರ್ಕಾರದಿಂದ ಸಿಬಿಐ ಅನುಮತಿ ಪಡೆಯಬೇಕು ಎಂದು ದೇಸಾಯಿ ವಾದಿಸಿದರು.

ಮುಂಬೈ ಪೊಲೀಸ್‌ ಮಾಜಿ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಬರೆದ ಪತ್ರ ಆಧರಿಸಿ ಡಾ. ಜೈಶ್ರೀ ಪಾಟೀಲ್‌ ಅವರು ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ನ್ಯಾಯಾಲಯವು ತನಿಖೆಗೆ ಅನುಮತಿಸಿತ್ತು. ಸುದೀರ್ಘವಾಗಿ ವಾದ-ಪ್ರತಿವಾದವನ್ನು ಆಲಿಸಿದ ಪೀಠವು ಜುಲೈ 12ರಂದು ತೀರ್ಪು ಕಾಯ್ದಿರಿಸಿತ್ತು.