Cambridge Analytica, Facebook, CBI
Cambridge Analytica, Facebook, CBI 
ಸುದ್ದಿಗಳು

ಫೇಸ್‌ಬುಕ್‌ ದತ್ತಾಂಶ ಸೋರಿಕೆ ವಿವಾದ: ಕೇಂಬ್ರಿಜ್‌ ಅನಾಲಿಟಿಕಾ, ಗ್ಲೋಬಲ್‌ ಸೈನ್ಸ್‌‌ ಮುಖ್ಯಸ್ಥರ ವಿರುದ್ಧ ಎಫ್‌ಐಆರ್‌

Bar & Bench

2018ರಲ್ಲಿ ಫೇಸ್‌ಬುಕ್‌ ಮೂಲಕ ಕಾನೂನುಬಾಹಿರವಾಗಿ ದತ್ತಾಂಶ ಸಂಗ್ರಹದಲ್ಲಿ ಭಾಗಿಯಾದ ಆರೋಪದ ಮೇಲೆ ಕೇಂಬ್ರಿಜ್‌ ಅನಾಲಿಟಿಕಾ ಮತ್ತು ಗ್ಲೋಬಲ್‌ ಸೈನ್ಸ್‌ ರೀಸರ್ಚ್‌ ಲಿಮಿಟೆಡ್‌ನ ಪ್ರತಿನಿಧಿಗಳಾದ ಅಲೆಕ್ಸಾಂಡರ್‌ ನಿಕ್ಸ್‌ ಮತ್ತು ಅಲೆಕ್ಸಾಂಡರ್‌ ಕೋಗನ್‌ ಅವರ ವಿರುದ್ಧ ಕೇಂದ್ರೀಯ ತನಿಖಾ ದಳವು (ಸಿಬಿಐ) ಎಫ್‌ಐಆರ್‌ ದಾಖಲಿಸಿದೆ.

ದತ್ತಾಂಶ ಸೋರಿಕೆ ವಿವಾದದ ಭಾಗವಾಗಿ ಕೋಗನ್‌ ಅವರು ʼಇದು ನಿಮ್ಮ ಡಿಜಿಟಲ್‌ ಜೀವನ (ದಿಸ್‌ ಈಸ್‌ ಯುವರ್‌ ಡಿಜಿಟಲ್‌ ಲೈಫ್‌) ಎಂಬ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಿದ್ದು, ಇದರ ಮೂಲಕ ವಿಶ್ವಾದ್ಯಂತ ಇರುವ ಫೇಸ್‌ಬುಕ್‌ನ 8 ಕೋಟಿ ಜನರ ವೈಯಕ್ತಿಕ ಮಾಹಿತಿಯನ್ನು ಕೇಂಬ್ರಿಜ್‌ ಅನಾಲಿಟಿಕಾಗೆ ಸಂಗ್ರಹಿಸಲು ಅವಕಾಶ ಮಾಡಿಕೊಡಲಾಗಿತ್ತು. ಇದರಲ್ಲಿ ಜನಸಾಂಖ್ಯಿಕ ಮಾಹಿತಿ, ಫೇಸ್‌ಬುಕ್‌ ಪೇಜ್‌ ಲೈಕ್‌ಗಳು, ಖಾಸಗಿ ಸಂದೇಶಗಳ ಮಾಹಿತಿ ಇತ್ಯಾದಿ ಸೇರಿದ್ದು, ಇದನ್ನು ವ್ಯಕ್ತಿಚಿತ್ರಗಳ ದಾಖಲೀಕರಣ ಮತ್ತು ಭಾರತದಲ್ಲಿ ಚುನಾವಣೆ ಪ್ರಭಾವಿಸಲು ಬಳಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.

335 ಭಾರತೀಯ ಬಳಕೆದಾರರು ಅಪ್ಲಿಕೇಶನ್‌ ಅಳವಡಿಸಿಕೊಂಡಿದ್ದರು ಎಂದು ಫೇಸ್‌ಬುಕ್‌ ಭಾರತ ಸರ್ಕಾರಕ್ಕೆ ತಿಳಿಸಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಬಳಕೆದಾರರ 5.62 ಲಕ್ಷ ಸ್ನೇಹಿತರ ದತ್ತಾಂಶವನ್ನು ಸದರಿ ಅಪ್ಲಿಕೇಶನ್‌ ಸಂಗ್ರಹಿಸಿದೆ ಎಂದು ಅಂದಾಜಿಸಲಾಗಿದೆ.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ವಿಕ್ರಮ್‌ಜಿತ್‌ ಬ್ಯಾನರ್ಜಿ ಅವರು ಕೇಂಬ್ರಿಜ್‌ ಅನಾಲಿಟಿಕಾ ಸಂಸ್ಥೆಯು ಐಟಿ ಕಾಯಿದೆಯ ಸೆಕ್ಷನ್‌ 43(ಎ) ಮತ್ತು 66 ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 171ಸಿ ಉಲ್ಲಂಘಿಸಿದೆ ಎಂದು ಎಂದು ಕಾನೂನು ಅಭಿಪ್ರಾಯ ನೀಡಿದ್ದರು. ಆನಂತರ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಸದರಿ ಪ್ರಕರಣದ ಕುರಿತು ಪೂರ್ವಭಾವಿ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರದ ವಿದ್ಯುನ್ಮಾನ‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಸಮೂಹ ಸಂಚಾಲಕ (ಸೈಬರ್‌ ಕಾನೂನು ಮತ್ತು ಭದ್ರತೆ) ರಾಕೇಶ್‌ ಮಹೇಶ್ವರಿ ಅವರು 2018ರ ಜುಲೈನಲ್ಲಿ ಸಿಬಿಐಗೆ ಮನವಿ ಮಾಡಿದ್ದರು.

ಕೇಂಬ್ರಿಜ್‌ ಅನಾಲಿಟಿಕಾ ಸಂಸ್ಥೆಯು ಐಟಿ ಕಾಯಿದೆಯ ಸೆಕ್ಷನ್‌ 43(ಎ) - ಕಂಪ್ಯೂಟರ್, ಕಂಪ್ಯೂಟರ್ ವ್ಯವಸ್ಥೆ ಅಥವಾ ಕಂಪ್ಯೂಟರ್ ಜಾಲವನ್ನು ಅಕ್ರಮವಾಗಿ ಪ್ರವೇಶಿಸುವುದು, ಬಳಸುವುದು; ಸೆಕ್ಷನ್‌ 66 - ಕಂಪ್ಯೂಟರ್ ಸಂಬಂಧಿ ಅಪರಾಧಗಳು, 66ಬಿ - ಕಳ್ಳಹಾದಿಯ ಮೂಲಕ ಅಪ್ರಾಮಾಣಿಕವಾಗಿ ಕಂಪ್ಯೂಟರ್ ಸಂಪನ್ಮೂಲವನ್ನು ಬಳಸುವುದು ಹಾಗೂ ಭಾರತೀಯ ದಂಡ ಸಂಹಿತೆಯ 171ಸಿ ಅನ್ವಯ ಚುನಾವಣೆಗಳ ಮೇಲೆ ಅಕ್ರಮವಾಗಿ ಪ್ರಭಾವ ಬೀರುವುದು ಮುಂತಾದ ಉಲ್ಲಂಘನೆಗಳನ್ನು ಎಸಗಿರುವ ಆರೋಪವಿದೆ. ‌

ಅಪ್ಲಿಕೇಶನ್‌ ಮೂಲಕ ಪಡೆದ ದತ್ತಾಂಶ ಸಂಗ್ರಹಿಸಿದ ಬಳಿಕ ಅದನ್ನು ನಾಶಪಡಿಸಬೇಕು ಎಂದು ಕೋಗನ್‌ ಮತ್ತು ಕೇಂಬ್ರಿಜ್‌ ಅನಾಲಿಟಿಕಾ ಕಡೆಯಿಂದ ಫೇಸ್‌ಬುಕ್‌ ಲಿಖಿತ‌ ಸರ್ಟಿಫಿಕೇಟ್‌ ಪಡೆದಿತ್ತು ಎಂಬ ಅಂಶವನ್ನು ಪೂರ್ವಭಾವಿ ತನಿಖೆಯಲ್ಲಿ ಸಿಬಿಐ ಕಂಡುಕೊಂಡಿತ್ತು.