CBI, WEST BENGAL AND Supreme court 
ಸುದ್ದಿಗಳು

ಸಿಬಿಐ ದಾಖಲಿಸಿರುವ ಪ್ರಕರಣಗಳಿಗೆ ಕೇಂದ್ರದ ವಿರುದ್ಧ ಬಂಗಾಳ ಸರ್ಕಾರವು ದಾವೆ ಹೂಡಲಾಗದು: ಸುಪ್ರೀಂಗೆ ಕೇಂದ್ರದ ವಿವರಣೆ

ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ ಮತ್ತು ಅರವಿಂದ್‌ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ಆರಂಭಿಸಿದೆ.

Bar & Bench

ಕೇಂದ್ರೀಯ ತನಿಖಾ ದಳವು (ಸಿಬಿಐ) ಸ್ವತಂತ್ರವಾಗಿದ್ದು, ಅದು ವಿಚಾರಣೆ ನಡೆಸುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರವು ದಾವೆ ಹೂಡಲಾಗದು ಎಂದು ಗುರುವಾರ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ಪಶ್ಚಿಮ ಬಂಗಾಳ ರಾಜ್ಯ ವರ್ಸಸ್‌ ಕೇಂದ್ರ ಸರ್ಕಾರ].

ಸಂವಿಧಾನದ 131ನೇ ವಿಧಿಯ (ಕೇಂದ್ರ ಮತ್ತು ರಾಜ್ಯಗಳ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ವ್ಯಾಪ್ತಿ) ಭಾಗವಾಗಿ ಪಶ್ಚಿಮ ಬಂಗಾಳ ಸರ್ಕಾರ ದಾಖಲಿಸಿರುವ ಮೂಲ ದಾವೆಯನ್ನು ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ ಮತ್ತು ಅರವಿಂದ್‌ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ದೆಹಲಿ ವಿಶೇಷ ಪೊಲೀಸ್‌ ಸ್ಥಾಪನಾ ಕಾಯಿದೆ ನಿಬಂಧನೆಗಳ ಪ್ರಕಾರ ಸಿಬಿಐ ಪ್ರಕ್ರಿಯೆ ಮುಂದುವರಿಸುವುದಕ್ಕೂ ಮುನ್ನ ರಾಜ್ಯ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ ಎಂದು ಕಾಯಿದೆಯಲ್ಲಿ ಹೇಳಲಾಗಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರದ ಅರ್ಜಿಯಲ್ಲಿ ವಿವರಿಸಲಾಗಿದೆ.

ತೃಣಮೂಲ ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದಿರುವುದರಿಂದ ಸಿಬಿಐ ದಾಖಲಿಸಿಕೊಂಡಿರುವ ಎಫ್‌ಐಆರ್‌ಗಳ ಮುಂದುವರಿಸಲಾಗದು ಎಂದು ವಿವರಿಸಲಾಗಿದೆ.

ಕೇಂದ್ರದ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ಕೇಂದ್ರ ಸರ್ಕಾರದ ವಿರುದ್ಧ ಕ್ರಮಕೈಗೊಳ್ಳಲು ಯಾವುದೇ ಕಾರಣವಿಲ್ಲ. ಅಲ್ಲದೇ, ಸಂವಿಧಾನದ 131ನೇ ವಿಧಿಯಡಿ ಸಿಬಿಐ ಅನ್ನು ಪಕ್ಷಕಾರವನ್ನಾಗಿಸಲಾಗದು. ಹೀಗಾಗಿ, ಪಶ್ಚಿಮ ಬಂಗಾಳ ಸರ್ಕಾರದ ದಾವೆಯನ್ನು ವಜಾ ಮಾಡಬೇಕು ಎಂದು ಕೋರಲಾಗಿದೆ. ಇಂಥದ್ದೇ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇದ್ದು, ಇದನ್ನು ಬಚ್ಚಿಟ್ಟಿರುವುದರಿಂದ ದಾವೆಯನ್ನು ವಜಾ ಮಾಡಬೇಕು ಎಂದು ಕೋರಿದರು.

ಕೇಂದ್ರ ಸರ್ಕಾರ ಇಲ್ಲವೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸಿಬಿಐ ತನಿಖೆಗಳನ್ನು ಮೇಲ್ವಿಚಾರಣೆ ಮಾಡುವುದಿಲ್ಲ. ರಾಜ್ಯ ಸರ್ಕಾರವು ಶುದ್ಧ ಹಸ್ತದಿಂದ ನ್ಯಾಯಾಲಯದ ಕದತಟ್ಟಿಲ್ಲ. ಆದರೆ, ಅದು ಸಿಬಿಐ ವಿರುದ್ಧ ಪರಿಹಾರ ಕೋರುತ್ತಿದೆ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಆಕ್ಷೇಪಿಸಿದರು.

ಪಶ್ಚಿಮ ಬಂಗಾಳ ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಪಶ್ಚಿಮ ಬಂಗಾಳ ಸರ್ಕಾರದ ದಾವೆಯನ್ನು ವಿವರಿಸಲು ಎಸ್‌ಜಿ ಅವರು ಮೋಸ ಎಂಬ ಪದವನ್ನು ಬಳಕೆ ಮಾಡಬಾರದಿತ್ತು. ಸಿಬಿಐ ಮೇಲ್ವಿಚಾರಣೆಯನ್ನು ಕೇಂದ್ರ ಸರ್ಕಾರ ಮಾಡುತ್ತದೆ. ರಾಜ್ಯ ಸರ್ಕಾರದ ಅನುಮತಿ ಇಲ್ಲದೇ ಪ್ರಕರಣ ದಾಖಲಿಸುವಂತಿಲ್ಲ ಎಂಬುದು ಮೊದಲ ಕೋರಿಕೆಯಾಗಿದೆ ಎಂದು ವಾದಿಸಿದರು.