ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮೋದನೆಯನ್ನು ಸಂಪುಟದ ಹಿಂಪಡೆಯಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ಕ್ರಮಕೈಗೊಳ್ಳುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿಗೆ ಬೆಂಗಳೂರಿನ ವಕೀಲ ಎನ್ ಪಿ ಅಮೃತೇಶ್ ಅವರು ಪತ್ರದ ಮುಖೇನ ಮನವಿ ಮಾಡಿದ್ದಾರೆ.
ರಾಜ್ಯ ಸಂಪುಟದ ನಿರ್ಧಾರದಲ್ಲಿ ಮಧ್ಯಪ್ರವೇಶಿಸುವ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಬೇಕು. ಸಿಬಿಐ ತನಿಖೆಗೆ ನೀಡಿದ್ದ ಅನುಮೋದನೆ ಹಿಂಪಡೆಯುವ ಸಂಪುಟದ ನಿರ್ಧಾರವನ್ನು ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ಒಮ್ಮೆ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ಅನುಮೋದನೆ ನೀಡಿದ ಮೇಲೆ ಅದನ್ನು ಹಿಂಪಡೆಯಲಾಗದು ಎಂಬುದರ ಕುರಿತು ಸ್ಪಷ್ಟನೆ ನೀಡಬೇಕು ಎಂದು ಅಮೃತೇಶ್ ಕೋರಿದ್ದಾರೆ.
ಭ್ರಷ್ಟರನ್ನು ರಕ್ಷಿಸುವುದಲ್ಲದೇ ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಬೆಂಬಲ ನೀಡಲಾಗುತ್ತದೆ ಎಂಬ ಸಂದೇಶವನ್ನು ಸರ್ಕಾರ ನೀಡಿದೆ. ಆಡಳಿತದಲ್ಲಿ ಪ್ರಾಮಾಣಿಕ ನಂಬಿಕೆಗಳನ್ನು ಸರ್ಕಾರ ತನ್ನ ನಿರ್ಧಾರದ ಮೂಲಕ ನಾಶಪಡಿಸಿದ್ದು, ಯಾವುದೇ ತೆರನಾದ ಅಪರಾಧವನ್ನು ರಾಜಕಾರಣಿಗಳು ಮತ್ತು ಅಧಿಕಾರಿಗಳು ಎಸಗಿದರೂ ಅವರನ್ನು ರಕ್ಷಿಸಲಾಗುತ್ತದೆ ಎಂಬ ಸಂದೇಶವನ್ನು ಸರ್ಕಾರ ನೀಡಿದೆ ಎಂದು ಬೇಸರಿಸಲಾಗಿದೆ.
ಭಾರತದ ಪ್ರಜಾಪ್ರಭುತ್ವದ ಹೃದಯ ಮತ್ತು ಆತ್ಮವಾದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿದು, ಅವುಗಳನ್ನು ರಕ್ಷಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.