Anil Deshmukh, CBI
Anil Deshmukh, CBI 
ಸುದ್ದಿಗಳು

ಭ್ರಷ್ಟಾಚಾರ ಪ್ರಕರಣದಲ್ಲಿಅನಿಲ್‌ ದೇಶಮುಖ್ ಅವರಿಗೆ ನೀಡಿದ್ದ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆಹೋದ ಸಿಬಿಐ

Bar & Bench

ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಅನಿಲ್ ದೇಶ್‌ಮುಖ್‌ ಅವರಿಗೆ ಜಾಮೀನು ಮಂಜೂರು ಮಾಡಿದ ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ  ಸಿಬಿಐ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ವಕೀಲ ಅರವಿಂದ್ ಕುಮಾರ್ ಶರ್ಮಾ ಅವರ ಮೂಲಕ ಸಲ್ಲಿಸಲಾದ ಮನವಿಯಲ್ಲಿ, ಸಮಾಜೋ-ಆರ್ಥಿಕ ಅಪರಾಧಗಳನ್ನು ಭಿನ್ನವಾಗಿ ನೋಡುವ ಅಗತ್ಯವಿದೆ ಎಂಬುದನ್ನು ಪರಿಗಣಿಸಲು ಹೈಕೋರ್ಟ್ ವಿಫಲವಾಗಿದೆ ಎಂದು ಸಿಬಿಐ ಹೇಳಿದೆ.

ದೇಶ್‌ಮುಖ್ ಅವರು ಪ್ರಸ್ತುತ ಮಹಾರಾಷ್ಟ್ರದ ಗೃಹ ಸಚಿವರಲ್ಲದಿದ್ದರೂ, ರಾಜ್ಯದಲ್ಲಿ ಅವರಿನ್ನೂ ಸಾಕಷ್ಟು ಪ್ರಭಾವ ಹೊಂದಿದ್ದಾರೆ ಎಂಬ ಅಂಶವನ್ನು ಹೈಕೋರ್ಟ್ ಪರಿಗಣಿಸಿಲ್ಲ. ಉನ್ನತ ಮಟ್ಟದ ರಾಜಕೀಯ ನಂಟನಿನಂದ ಅವರು ತಮ್ಮ ಅಧಿಕಾರ ಬಳಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ದೇಶಮುಖ್‌ ಅವರು ಒಂದೇ ಆರೋಪಕ್ಕೆ ಸಂಬಂಧಿಸಿದ ಎರಡು ತನಿಖೆಗಳನ್ನು ಎದುರಿಸುತ್ತಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದವು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ ಅವರಿಗೆ ಅಕ್ಟೋಬರ್  4ರಂದು ಜಾಮೀನು ನೀಡಿತ್ತು.

ಆದರೆ ಸಿಬಿಐ ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ್ದ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಡಿಸೆಂಬರ್ 12 ರಂದು ಜಾಮೀನು ನೀಡಿತ್ತು. ಆದರೂ ವಿವಾದದ ಸ್ವರೂಪವನ್ನು ಪರಿಗಣಿಸಿ, ನ್ಯಾಯಮೂರ್ತಿ ಕಾರ್ಣಿಕ್ ಅವರು, ಆದೇಶ ನೀಡಿದ ದಿನಾಂಕದಿಂದ ಹತ್ತು ದಿನಗಳ ಅವಧಿಯ ನಂತರ ತೀರ್ಪನ್ನು ಜಾರಿಗೆ ತರುವಂತೆ ಸೂಚಿಸಿದ್ದರು. ಬಳಿಕ ಸಿಬಿಐ ಸುಪ್ರೀಂ ಕೋರ್ಟ್‌ಗೆ ಪ್ರಸ್ತುತ ಮೇಲ್ಮನವಿ ಸಲ್ಲಿಸಿದೆ.