ನಾರದ ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ವರು ಟಿಎಂಸಿ ನಾಯಕರನ್ನು ನ್ಯಾಯಾಂಗ ಬಂಧನದಡಿ ಜೈಲಿನಲ್ಲಿಡುವ ಬದಲಿಗೆ ಸದ್ಯಕ್ಕೆ ಗೃಹ ಬಂಧನದಲ್ಲಿಡುವಂತೆ ಆದೇಶಿಸಿದ್ದ ಮೇ 21ರ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇಂದ್ರೀಯ ತನಿಖಾ ದಳವು (ಸಿಬಿಐ) ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ಪ್ರಕರಣವನ್ನು ಸುಪ್ರೀಂ ಕೋರ್ಟ್‌ಗೆ ಕೊಂಡೊಯ್ದಿರುವುದರಿಂದ ಇಂದು ಹೈಕೋರ್ಟ್‌ನ ಪಂಚ ಪೀಠದ ಮುಂದೆ ವಿಚಾರಣೆ ನಿಗದಿಯಾಗಿರುವುದನ್ನು ಮುಂದೂಡುವಂತೆ ಕೋರಿ ಕಲ್ಕತ್ತಾ ಹೈಕೋರ್ಟ್‌ಗೆ ಸಿಬಿಐ ಮನವಿ ಸಲ್ಲಿಸಿದೆ.
ಆರೋಪಿಗಳಿಗೆ ಮಧ್ಯಂತರ ಜಾಮೀನು ಮಂಜೂರು ಮಾಡುವ ವಿಚಾರದಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಅರಿಜಿತ್ ಬ್ಯಾನರ್ಜಿ ಅವರ ನಡುವೆ ಭಿನ್ನಮತ ಉಂಟಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಹೈಕೋರ್ಟ್‌ನ ವಿಭಾಗೀಯ ಪೀಠದಿಂದ ಪಂಚ ಪೀಠಕ್ಕೆ ವರ್ಗಾಯಿಸುವ ನಿರ್ಧಾರ ಮಾಡಲಾಗಿತ್ತು.
ನಾಲ್ವರು ಆರೋಪಿಗಳನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಒಬ್ಬರು ನ್ಯಾಯಮೂರ್ತಿ ಹೇಳಿದರೆ ಮತ್ತೊಬ್ಬರು ನ್ಯಾಯಮೂರ್ತಿ ಆರೋಪಿಗಳು ಜೈಲಿನಲ್ಲೇ ಉಳಿಯಬೇಕು ಎಂದಿದ್ದರು.
ಹೀಗಾಗಿ, ಮಧ್ಯಂತರ ಕ್ರಮದ ಭಾಗವಾಗಿ ಆರೋಪಿಗಳನ್ನು ಗೃಹ ಬಂಧನದಲ್ಲಿ ಇರಿಸಲು ವಿಭಾಗೀಯ ಪೀಠ ಆದೇಶಿಸಿತ್ತು. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಗೌತಮ್ ನವಲಾಖ ಅವರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿ ಪೀಠವು ಮೇಲಿನ ಆದೇಶ ಹೊರಡಿಸಿತ್ತು.
ಹೈಕೋರ್ಟ್ ಆದೇಶವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಮೂಲಕ ವಿರೋಧಿಸಿದ್ದ ಸಿಬಿಐ ಪ್ರಕರಣಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿದ್ದು, ಹಾಗೆ ಮಾಡಿದರೆ ತಾನು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದು ಎಂದಿತ್ತು. ಆದರೆ, ಈ ಮನವಿಗೆ ಹೈಕೋರ್ಟ್ ಅಸಮ್ಮತಿಸಿತ್ತು.
ತೃಣಮೂಲ ಕಾಂಗ್ರೆಸ್‌ನ ನಾಯಕರಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ, ಮದನ್ ಮಿತ್ರಾ ಮತ್ತು ಸೋವನ್ ಚಟರ್ಜಿ ಅವರನ್ನು ಸಿಬಿಐ ಮೇ 17ರಂದು ಬಂಧಿಸಿತ್ತು.