TMC leaders and Supreme Court
TMC leaders and Supreme Court 
ಸುದ್ದಿಗಳು

[ಟಿಎಂಸಿ ನಾಯಕರಿಗೆ ಗೃಹ ಬಂಧನ] ಸುಪ್ರೀಂನಲ್ಲಿ ಕಲ್ಕತ್ತಾ ಹೈಕೋರ್ಟ್‌ ಆದೇಶ ಪ್ರಶ್ನಿಸಿದ್ದ ಅರ್ಜಿ ಹಿಂಪಡೆದ ಸಿಬಿಐ

Bar & Bench

ನಾರದ ಕುಟುಕು ಕಾರ್ಯಾಚರಣೆ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ನಾಲ್ವರು ನಾಯಕರಿಗೆ ಮಧ್ಯಂತರ ಪರಿಹಾರದ ಭಾಗವಾಗಿ ಜೈಲಿನ ಬದಲಿಗೆ ಗೃಹ ಬಂಧನ ವಿಧಿಸಿ ಮೇ 21ರಂದು ಆದೇಶಿಸಿದ್ದ ಕಲ್ಕತ್ತಾ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕೇಂದ್ರೀಯ ತನಿಖಾ ದಳವು (ಸಿಬಿಐ) ಹಿಂಪಡೆದಿದೆ.

ಟಿಎಂಸಿ ನಾಯಕರ ನಡತೆಯಿಂದ ಕೋಲ್ಕತ್ತಾದಲ್ಲಿ ನಿರ್ಮಾಣವಾಗಿದ್ದ ಬಿಗುವಿನ ಪರಿಸ್ಥಿತಿಯು ಸಿಬಿಐ ವಿಶೇಷ ನ್ಯಾಯಾಲಯವು ಮೇ 17ರಂದು ಜಾಮೀನು ನೀಡಿದ್ದರ ಮೇಲೆ ಪರಿಣಾಮ ಬೀರಿತ್ತು ಎಂಬ ಸಿಬಿಐ ವಾದಕ್ಕೆ ನ್ಯಾಯಮೂರ್ತಿಗಳಾದ ವಿನೀತ್‌ ಶರಣ್‌ ಮತ್ತು ಬಿ ಆರ್‌ ಗವಾಯಿ ಅವರಿದ್ದ ವಿಭಾಗೀಯ ಪೀಠ ಸಹಮತಿಸಲಿಲ್ಲ.

“ಪ್ರಕರಣದ ಅರ್ಹತೆಯ ಆಧಾರದಲ್ಲಿ ನಾವು ಯಾವುದೇ ಆದೇಶ ಹೊರಡಿಸುತ್ತಿಲ್ಲ. ಕಲ್ಕತ್ತಾ ಹೈಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು ಪ್ರಕರಣದ ವಿಚಾರಣೆಯನ್ನು ನಡೆಸಲಿದೆ ಎಂಬ ವಿಚಾರವನ್ನು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಒಪ್ಪಿಕೊಂಡಿದ್ದಾರೆ. ಹೀಗಾಗಿ, ಅರ್ಜಿ ಹಿಂಪಡೆಯಲು ಅನುಮತಿ ಕೋರಲಾಗಿದ್ದು, ಸಂಬಂಧಿತ ಎಲ್ಲಾ ವಿಚಾರಗಳನ್ನು ಹೈಕೋರ್ಟ್‌ ಮುಂದೆ ಪ್ರಸ್ತಾಪಿಸಬಹುದಾಗಿದೆ. ಉಳಿದಂತೆ ಎಲ್ಲಾ ತಗಾದೆಗಳು ಮುಕ್ತವಾಗಿರುತ್ತವೆ. ಇತರೆ ಎಲ್ಲ ಪಕ್ಷಕಾರರು ಹೈಕೋರ್ಟ್‌ ಮುಂದೆ ತಕರಾರು ಎತ್ತುವ ಸ್ವಾತಂತ್ರ್ಯ ಹೊಂದಿರುತ್ತಾರೆ. ನಾವು ಪ್ರಕರಣದ ಅರ್ಹತೆಯ ವಿಚಾರದಲ್ಲಿ ಯಾವುದೇ ಆದೇಶ ಹೊರಡಿಸುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇವೆ” ಎಂದು ಸಿಬಿಐ ಅರ್ಜಿ ಹಿಂಪಡೆಯಲು ನಿರ್ಧರಿಸಿದ ಬಳಿಕ ಪೀಠ ಹೇಳಿದೆ.

ವಿಚಾರಣೆಯ ಸಂದರ್ಭದಲ್ಲಿ “ಸ್ವಾತಂತ್ರ್ಯದ ರಕ್ಷಣೆಗಾಗಿ ವಿಶೇಷ ಪೀಠವನ್ನು ರಚಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಸ್ವಾತಂತ್ರ್ಯವನ್ನು ಹಿಂಪಡೆಯಲಿಕ್ಕಾಗಿ ವಿಶೇಷ ಪೀಠ ರಚಿಸಲಾಗಿದೆ” ಎಂದು ನ್ಯಾಯಮೂರ್ತಿ ಗವಾಯಿ ಅವರು ಕಲ್ಕತ್ತಾ ಹೈಕೋರ್ಟ್‌ ನಿರ್ಣಯದ ಬಗ್ಗ ಅಸಮ್ಮತಿ ವ್ಯಕ್ತಪಡಿಸಿದರು.

ಟಿಎಂಸಿ ನಾಯಕರನ್ನು ಸಿಬಿಐ ಬಂಧಿಸಿದ ಬಳಿಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ಪ್ರಮುಖ ನಾಯಕರ ನಡತೆಯು ವಾತಾವರಣವನ್ನು ಪ್ರಚೋದಿಸಿದ್ದು, ಈ ಆಧಾರದ ಹಿನ್ನೆಲೆಯಲ್ಲಿ ಜಾಮೀನು ನೀಡಿದ್ದ ಸಿಬಿಐ ನ್ಯಾಯಾಲಯದ ಆದೇಶ ಎತ್ತಿ ಹಿಡಿಯುವ ರೀತಿಯಲ್ಲಿ ಇರಲಿಲ್ಲ ಎಂದು ಸಿಬಿಐ ಪ್ರತಿನಿಧಿಸಿದ್ದ ಎಸ್‌ಜಿ ಮೆಹ್ತಾ ವಾದಿಸಿದರು.

ಮೆಹ್ತಾ ಅವರ ವಾದವನ್ನು ಒಪ್ಪದ ಪೀಠವು ಟಿಎಂಸಿ ನಾಯಕರ ಆ ನಡತೆಯ ಘಟನೆಗಳನ್ನು ಪ್ರತ್ಯೇಕವಾಗಿ ನೋಡಬೇಕಿದ್ದು, ಅದು ಆರೋಪಿಗಳಿಗೆ ಜಾಮೀನು ನೀಡುವ ವಿಚಾರವನ್ನು ಪ್ರಭಾವಿಸಬಾರದು ಎಂದಿತು. “ಜಾಮೀನು ನೀಡಬಹುದೇ ಅಥವಾ ನೀಡಲಾಗದೇ ಎಂಬುದನ್ನು ಮಾತ್ರ ನಾವು ನೋಡಬೇಕು. ಇತರೆ ವಿಚಾರಗಳಿಗೆ ಬೇರೆ ಪರಿಹಾರಗಳಿವೆ. ಅಂಥವರ ವಿರುದ್ಧ ಕ್ರಮಕೈಗೊಳ್ಳಬಹುದು” ಎಂದು ಪೀಠ ಹೇಳಿತು.

“ನಮ್ಮ ಮೇಲೂ ಒತ್ತಡ ಹೇರುವ ಯತ್ನ ಮಾಡಲಾಗಿತ್ತು. 2013ರಲ್ಲಿ ಔರಂಗಬಾದ್‌ನಲ್ಲಿ ನಾನು ನಿರೀಕ್ಷಣಾ ಜಾಮೀನು ಮನವಿಯ ವಿಚಾರಣೆ ನಡೆಸುತ್ತಿದ್ದೆ. ಮಹಿಳಾ ಮೋರ್ಚಾ ಕಾರ್ಯಕರ್ತರು ನ್ಯಾಯಾಲಯದ ಒಳಗೆ ನುಗ್ಗಿದರು. ಪೊಲೀಸರು ಆದೇಶ ಹೊರಡಿಸದಂತೆ ನನ್ನನ್ನು ಕೋರಿದರು. ಅದರೆ, ಬಹಿರಂಗ ನ್ಯಾಯಾಲಯದಲ್ಲಿ ಆದೇಶಗಳನ್ನು ಹೊರಡಿಸಿದೆ” ಎಂದು ನ್ಯಾ. ಗವಾಯಿ ಅವರು ಅಂದಿನ ಘಟನೆ ಮೆಲುಕು ಹಾಕಿದರು.

ಟಿಎಂಸಿ ನಾಯಕರಾದ ಫಿರ್ಹಾದ್‌ ಹಕೀಮ್‌, ಸುಬ್ರತಾ ಮುಖರ್ಜಿ, ಮದನ್‌ ಮಿತ್ರಾ ಮತ್ತು ಸೋವನ್‌ ಚಟರ್ಜಿ ಅವರನ್ನು ಮೇ 17ರಂದು ಸಿಬಿಐ ಬಂಧಿಸಿತ್ತು.