ಸುದ್ದಿಗಳು

ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಆದೇಶ ಹಿಂಪಡೆತ: ನ್ಯಾಯಾಲಯದಲ್ಲಿ ಪ್ರಕರಣ ಈವರೆಗೆ ಸಾಗಿ ಬಂದ ಹಾದಿಯ ಮಾಹಿತಿ

Bar & Bench

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ವಿರುದ್ಧ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸಲು ಒಪ್ಪಿಗೆ (ಕನ್ಸೆಂಟ್‌) ನೀಡಿದ್ದ ಹಿಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಆದೇಶವನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಹಿಂಪಡೆಯಲು ಸಂಪುಟ ಸಭೆಯಲ್ಲಿ ನಿರ್ಧರಿಸಿರುವುದು ರಾಜಕೀಯ ಜಿದ್ದಾಜಿದ್ದಿಗೆ ನಾಂದಿ ಹಾಡಿದೆ.

“ಸಿಬಿಐ ತನಿಖೆಗೆ ಅನುಮತಿಸುವುದಕ್ಕೂ ಮುನ್ನ ವಿಧಾನಸಭೆಯ ಸ್ಪೀಕರ್‌ ಅವರಿಂದ ಒಪ್ಪಿಗೆ ಪಡೆಯದೇ ಮುಖ್ಯಮಂತ್ರಿಗಳ ಮೌಖಿಕ ಆದೇಶ ಆಧರಿಸಿ ಸಿಬಿಐ ತನಿಖೆಗೆ ಅನುಮತಿಸಲಾಗಿತ್ತು. ಕಾನೂನಾತ್ಮಕವಾಗಿ ಸ್ಪೀಕರ್‌ ಅವರಿಂದ ನಿರ್ಣಯ ಪಡೆಯಲಾಗಿರಲಿಲ್ಲ. ಹಿಂದಿನ ಅಡ್ವೊಕೇಟ್‌ ಜನರಲ್‌ (ಕೆ ಪ್ರಭುಲಿಂಗ ನಾವದಗಿ) ಹಾಗೂ ಹಾಲಿ ಅಡ್ವೊಕೇಟ್‌ ಜನರಲ್‌ (ಕೆ ಶಶಿಕಿರಣ್‌ ಶೆಟ್ಟಿ) ಅವರ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸಿ ಈ ನಿರ್ಧಾರ ಮಾಡಲಾಗಿದೆ” ಎಂದು ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ ಕೆ ಪಾಟೀಲ್‌ ಅವರು ಡಿ ಕೆ ಶಿವಕುಮಾರ್‌ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ್ದನ್ನು ಹಿಂಪಡೆದಿರುವುದಕ್ಕೆ ಸಮರ್ಥನೆ ನೀಡಿದ್ದರು.

ಡಿ ಕೆ ಶಿವಕುಮಾರ್‌ ಅವರು ಸಿಬಿಐ ತನಿಖೆಗೆ ಬಿಜೆಪಿ ಸರ್ಕಾರ ಒಪ್ಪಿಗೆ ನೀಡಿರುವುದನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಸಂಬಂಧ ಹೈಕೋರ್ಟ್‌ 2023ರ ಏಪ್ರಿಲ್‌ 20ರಂದು ಆದೇಶ ಮಾಡಿದ್ದು, ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಸಮ್ಮತಿಸಿರುವ ನಿರ್ಧಾರವನ್ನು ಎತ್ತಿ ಹಿಡಿದಿತ್ತು.

“ರಾಜ್ಯ ಸರ್ಕಾರವು ದೆಹಲಿ ವಿಶೇಷ ಪೊಲೀಸ್‌ ಸ್ಥಾಪನಾ (ಡಿಎಸ್‌ಪಿಸಿ) ಕಾಯಿದೆ ಸೆಕ್ಷನ್‌ 6ರ ಅಡಿ ಒಪ್ಪಿಗೆ ನೀಡಿದೆಯೇ ವಿನಾ ಭ್ರಷ್ಟಾಚಾರ ನಿಷೇಧ (ಪಿ ಸಿ) ಕಾಯಿದೆ ಸೆಕ್ಷನ್‌ 19 ಅಥವಾ 17ರ ಅಡಿ ಅಗತ್ಯವಾದ ಅನುಮೋದನೆಯನ್ನಲ್ಲ (ಸ್ಯಾಂಕ್ಷನ್‌). ಆಕ್ಷೇಪಾರ್ಹವಾದ ಸರ್ಕಾರದ ಆದೇಶದಲ್ಲಿ ಅನುಮೋದನೆ ನೀಡಲಾಗಿದೆ ಎಂದು ಉಲ್ಲೇಖಿಸಿದ್ದರೂ ಅಕ್ಷರಶಃ ಅದು ಡಿ ಕೆ ಶಿವಕುಮಾರ್‌ ಅವರ ವಿರುದ್ಧ ತನಿಖೆ ಮಾಡಲು ಸಿಬಿಐಗೆ ನೀಡಿರುವ ಕಾರ್ಯಾದೇಶವಾಗಿದೆ” ಎಂದು ನ್ಯಾಯಾಲಯ ಹೇಳಿತ್ತು.

ಅಲ್ಲದೇ, “ಅಡ್ವೊಕೇಟ್‌ ಜನರಲ್‌ ಅವರು ಭ್ರಷ್ಟಾಚಾರ ನಿಷೇಧ ಕಾಯಿದೆ ಸೆಕ್ಷನ್‌ 17(ಎ) ಅಥವಾ 19ರ ಅಡಿ ಅನುಮೋದನೆಯ ಅಗತ್ಯವಿಲ್ಲ ಎಂದು ಅಭಿಪ್ರಾಯ ನೀಡಿದ್ದಾರೆ. ಆದೇಶದಲ್ಲಿ ಆಡಳಿತಾತ್ಮಕ ಆದೇಶ ಎಂದು ಉಲ್ಲೇಖಿಸಿದ್ದರೂ ಅದೊಂದು ಸಾಮಾನ್ಯ ಕಾರ್ಯಾದೇಶವಾಗಿದ್ದು, ಇದಕ್ಕೆ ವಿವೇಚನೆ ಬೇಡುವ ವಿಸ್ತೃತ ಆದೇಶ ಬೇಕಿಲ್ಲ. ಜಾರಿ ನಿರ್ದೇಶನಾಲಯ ರವಾನಿಸಿದ್ದ ಪತ್ರವನ್ನು ಗೃಹ ಇಲಾಖೆಯ ಅಧೀನ ಕಾರ್ಯದರ್ಶಿ ಪರಿಗಣಿಸಿ, ಆದೇಶಿಸಿದ್ದಾರೆ. ಡಿಎಸ್‌ಪಿಇ ಕಾಯಿದೆ ಸೆಕ್ಷನ್‌ 6 ಸಹ ಕೇಂದ್ರದ ಪೊಲೀಸರು ತನಿಖೆ ನಡೆಸಲು ರಾಜ್ಯ ಸರ್ಕಾರವು ಸಿಬಿಐಗೆ ಅನುಮತಿಸುವುದರ ಕುರಿತಾಗಿದೆ” ಎಂದು ಆದೇಶದಲ್ಲಿ ಹೇಳಿತ್ತು.

“ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ ಅಪಾರ ಪ್ರಮಾಣದ ಸಾಕ್ಷ್ಯ ಸಂಗ್ರಹಿಸಿದ್ದು, ಶೇ. 90ರಷ್ಟು ತನಿಖೆ ಪೂರ್ಣಗೊಂಡಿದೆ ಎಂದು ತಿಳಿಸಿದೆ. ಅನುಮೋದನೆ ಅಥವಾ ಒಪ್ಪಿಗೆ ಆದೇಶದಲ್ಲಿ ದೋಷಗಳಿದ್ದರೆ ತನಿಖೆಗೆ ಅಡ್ಡಿಪಡಿಸಲಾಗದು. ದೋಷವನ್ನು ಸಿಆರ್‌ಪಿಸಿ ಸೆಕ್ಷನ್‌ 465ರ ಅಡಿ ಪರಿಹರಿಸಬಹುದಾಗಿದೆ” ಎಂದು ನ್ಯಾಯಾಲಯ ಹೇಳಿತ್ತು.

“ಸಿಆರ್‌ಪಿಸಿ ಸೆಕ್ಷನ್‌ 470(3)ರ ಅಡಿ ಅನುಮೋದನೆ ಮತ್ತು ಒಪ್ಪಿಗೆ ಒಂದೇ ಆಗಿವೆ ಎಂದು ಡಿ ಕೆ ಶಿವಕುಮಾರ್‌ ವಕೀಲರು ವಾದಿಸಿದ್ದಾರೆ. ಸಂಜ್ಞೇಯ ಪರಿಗಣಿಸುವುದು ಮತ್ತು ಅಂತಿಮ ವರದಿಯ ನಿರ್ದಿಷ್ಟ ಅಂಶಕ್ಕೆ ಮಾತ್ರ ಆ ಸೆಕ್ಷನ್‌ ಅನ್ವಯಿಸುತ್ತದೆ. ಹೀಗಾಗಿ, ಅನುಮೋದನೆ ಮತ್ತು ಒಪ್ಪಿಗೆ ಒಂದೇ ಎಂದು ಹೇಳಲಾಗದು. ಈ ಎರಡೂ ವಿಭಿನ್ನ” ಎಂದು ಪೀಠ ಹೇಳಿತ್ತು.

“ಈ ನೆಲೆಯಲ್ಲಿ ಡಿಎಸ್‌ಪಿಇ ಸೆಕ್ಷನ್‌ 6ರ ಅಡಿ ರಾಜ್ಯ ಸರ್ಕಾರ ಮಾಡಿರುವ ಆಕ್ಷೇಪಾರ್ಹ ಆದೇಶವು ಔಪಚಾರಿಕ ಒಪ್ಪಿಗೆಯಾಗಿದ್ದು, ಸುಪ್ರೀಂ ಕೋರ್ಟ್‌ ಹೇಳಿರುವಂತೆ ವಿಸ್ತೃತ ಆದೇಶ ಬಯಸುವ ಅನುಮೋದನೆಯಲ್ಲ. ಡಿಎಸ್‌ಪಿಇ ಸೆಕ್ಷನ್‌ 6ರಲ್ಲಿ ಒಪ್ಪಿಗೆ ನೀಡಲು ನಿರ್ದಿಷ್ಟ ಭಾಗವಿಲ್ಲ, ಇದಾಗಲೇ ಸಿಬಿಐಗೆ ಪ್ರಕರಣ ವಹಿಸಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ಪೀಠ ನಿರ್ಧರಿಸಿದ್ದು (ಶಶಿಕುಮಾರ್‌ ಶಿವಣ್ಣ ಎಂಬುವರು ಡಿಕೆಶಿ ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿರುವುದನ್ನು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಯ ಕುರಿತಾದದ್ದು) , ವಿಭಾಗೀಯ ಪೀಠ ಅದನ್ನು ಎತ್ತಿ ಹಿಡಿದಿದೆ. ಈ ಆಧಾರದಲ್ಲಿ ವಿಭಿನ್ನ ನಿಲುವು ತಳೆಯುವುದಕ್ಕೆ ಸಕಾರಣವಿಲ್ಲ. ಹೀಗಾಗಿ, ಡಿ ಕೆ ಶಿವಕುಮಾರ್‌ ಅವರ ಅರ್ಜಿ ವಜಾ ಮಾಡಲಾಗಿದೆ” ಎಂದು ನ್ಯಾಯಾಲಯ ಹೇಳಿತ್ತು.

ಡಿಕೆಶಿ ವಾದವೇನಿತ್ತು?

  • ಸಿಬಿಐ ತನಿಖೆಗೆ ಅನುಮತಿಸುವುದಕ್ಕೂ ಮುನ್ನ ರಾಜ್ಯ ಸರ್ಕಾರವು ವಿವೇಚನೆ ಬಳಿಸಿಲ್ಲ. ಜಾರಿ ನಿರ್ದೇಶನಾಲಯದ ಪತ್ರದಲ್ಲಿ ವಿವರ ಉಲ್ಲೇಖಿಸಿ, ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿದೆ. ಇದನ್ನು ಆಧರಿಸಿ ಸಿಬಿಐ ಎಫ್‌ಐಆರ್‌ ದಾಖಲಿಸಿದ್ದು, ಅದು ಕಾನೂನಿನಲ್ಲಿ ಊರ್ಜಿತವಾಗುವುದಿಲ್ಲ.

  • ಆದಾಯ ತೆರಿಗೆ ಇಲಾಖೆಯು ಶಿವಕುಮಾರ್‌ ವಿರುದ್ಧ ಐದು ಪ್ರಕರಣ ದಾಖಲಿಸಿದ್ದು, ಮೂರು ಪ್ರಕರಣಗಳಲ್ಲಿ ಡಿಕೆಶಿ ಖುಲಾಸೆಯಾಗಿದ್ದಾರೆ. ಒಂದರಲ್ಲಿ ಆರೋಪ ಮುಕ್ತ ಕೋರಿದ್ದ ಅರ್ಜಿ ವಜಾ ಆಗಿದ್ದು, ಇದಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಸಿಬಿಐ ತನಿಖೆಗೆ ಅನುಮತಿಸುವಾಗ ರಾಜ್ಯ ಸರ್ಕಾರವು ಈ ವಿಚಾರ ಪರಿಗಣಿಸಿಲ್ಲ. ಒಂದೊಮ್ಮೆ ಸಿಬಿಐ ತನಿಖೆಗೆ ನೀಡಿರುವ ರಾಜ್ಯ ಸರ್ಕಾರದ ಆದೇಶವು ಆಡಳಿತಾತ್ಮಕ ಆದೇಶವಾಗಿದ್ದರೂ ಯಾವುದೇ ತನಿಖೆಗೆ ಸಮ್ಮತಿಸುವಾಗ ಸರ್ಕಾರವು ವಿವೇಚನೆ ಬಳಸಬೇಕಿತ್ತು. ಇ ಡಿ ಪತ್ರವನ್ನು ಉಲ್ಲೇಖಿಸಿರುವುದನ್ನು ಹೊರತುಪಡಿಸಿ, ಸಿಬಿಐಗೆ ತನಿಖೆ ಹೊಣೆ ಒಪ್ಪಿಸುವಾಗ ವಿವೇಚನೆ ಬಳಸಲಾಗಿಲ್ಲ.

  • ರಾಜ್ಯ ಸರ್ಕಾರವು ಅನುಮತಿ ಆದೇಶ ಮಾಡಿದೆಯೇ ವಿನಾ ಒಪ್ಪಿಗೆ ಆದೇಶವನ್ನಲ್ಲ ಎಂಬುದು ಆದೇಶದಿಂದ ಸ್ಪಷ್ಟವಾಗುತ್ತದೆ. ಸಿಆರ್‌ಪಿಸಿ ಸೆಕ್ಷನ್‌ 470(3) ಅಡಿಯಲ್ಲಿ ಅನುಮೋದನೆ ಮತ್ತು ಒಪ್ಪಿಗೆ ಬೇರೆಬೇರೆಯಾಗಿವೆ. ಆಡಳಿತಾತ್ಮಕ ಆದೇಶವಾಗಿರಲಿ ಅಥವಾ ಯಾವುದೇ ಆದೇಶವಾಗಿರಲಿ ಅದರ ಆತ್ಮವೇ ಕಾರಣಗಳು. ವಿವೇಚನೆ ಬಳಸದೇ, ಕಾರಣ ತಿಳಿಸದೇ ಸಮ್ಮತಿ ನೀಡಲಾಗಿದೆ. ಇದು ಸ್ಪೀಕಿಂಗ್‌ ಆದೇಶವಲ್ಲ.

  • ರಾಜ್ಯ ಸರ್ಕಾರವು ಅಡ್ವೊಕೇಟ್‌ ಜನರಲ್‌ (ಕೆ ಪ್ರಭುಲಿಂಗ ನಾವದಗಿ) ಅವರ ಅಭಿಪ್ರಾಯ ಪಡೆದಿದೆ. ಆದರೆ, ಎಜಿ ಅವರು ಒಪ್ಪಿಗೆಗೆ ಸಂಬಂಧಿಸಿದಂತೆ ಯಾವುದೇ ಅಂಶ ಉಲ್ಲೇಖಿಸಿಲ್ಲ. ಅಲ್ಲದೇ, ಸಿಬಿಐ ತನಿಖೆಗೆ ನೀಡುವುದಕ್ಕೂ ಮುನ್ನ ವಿಧಾನಸಭಾ ಅಧ್ಯಕ್ಷರಿಂದ ಯಾವುದೇ ಒಪ್ಪಿಗೆ ಪಡೆದಿಲ್ಲ.

  • ಭ್ರಷ್ಟಾಚಾರ ನಿಷೇಧ ಕಾಯಿದೆ ಅಡಿ ಎಫ್‌ಐಆರ್‌ ದಾಖಲಿಸಲು ಕಾಯಿದೆಯ ಸೆಕ್ಷನ್‌ 17ಎ ಅಡಿ ಸಿಬಿಐ ರಾಜ್ಯ ಸರ್ಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ.

  • 01.04.2013 ಮತ್ತು 30.04.2018 ರ ನಡುವಿನ ಅವಧಿಯಲ್ಲಿನ ನಡೆದಿರುವ ಅಪರಾಧ ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ ತಿದ್ದುಪಡಿಯಾಗಿರುವ ಪಿ ಸಿ ಕಾಯಿದೆ ಅಸ್ತಿತ್ವಕ್ಕೆ ಬಂದಿರಲಿಲ್ಲ. ನೂತನ ಪಿ ಸಿ ಕಾಯಿದೆಯು 26.07.2018ರಿಂದ ಆಚೆಗೆ ಜಾರಿಗೆ ಬಂದಿದೆ.

ಸರ್ಕಾರದ ವಾದ ಏನಾಗಿತ್ತು?

  • ದೆಹಲಿ ವಿಶೇಷ ಪೊಲೀಸ್‌ ಸ್ಥಾಪನಾ ಕಾಯಿದೆ (ಡಿಎಸ್‌ಪಿಇ) ಸೆಕ್ಷನ್‌ 6ರ ಅಡಿ ರಾಜ್ಯ ಸರ್ಕಾರವು ಸಿಬಿಐಗೆ ಡಿಕೆಶಿ ಪ್ರಕರಣವಹಿಸಿದ್ದು, ಇದಕ್ಕೆ ಸಮ್ಮತಿ ಅನುಮೋದನೆ ಬೇಕಿಲ್ಲ. ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ಒಪ್ಪಿಗೆ ಮಾತ್ರ ನೀಡಲಾಗಿದೆ. ಸರ್ಕಾರದ ಆದೇಶವು ಕಾರ್ಯಾದೇಶವಾಗಿದ್ದು, ಸಮ್ಮತಿಸಲು ವಿವರವಾದ ಕಾರಣಗಳನ್ನು ನೀಡುವ ಅಗತ್ಯವಿಲ್ಲ.

  • ಡಿಕೆಶಿ ಪ್ರಕರಣವನ್ನು ಸಿಬಿಐಗೆ ವಹಿಸಿದ್ದನ್ನು ಶಶಿಕುಮಾರ್‌ ಶಿವಣ್ಣ ಎಂಬವರು ಪ್ರಶ್ನಿಸಿದ್ದರು. ಇದನ್ನು ಏಕಸದಸ್ಯ ಪೀಠ ವಜಾ ಮಾಡಿದ್ದು, ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶವನ್ನು ಎತ್ತಿ ಹಿಡಿದಿದೆ. ವಿಭಾಗೀಯ ಪೀಠವು ರಾಜ್ಯ ಸರ್ಕಾರ ಸಿಬಿಐಗೆ ಡಿಕೆಶಿ ಪ್ರಕರಣ ವಹಿಸಿರುವುದನ್ನು ಎತ್ತಿ ಹಿಡಿದಿದೆ. ಇದು ಸ್ವತಃ ಅರ್ಜಿದಾರರಾದ ಡಿಕೆಶಿಗೂ ಅನ್ವಯಿಸುತ್ತದೆ.

  • ಸಿಬಿಐ ತನಿಖೆಗೆ ಒಪ್ಪಿಗೆ ಅಥವಾ ಅನುಮೋದನೆ ಆದೇಶ ಮಾಡುವಾಗ ಯಾವುದೇ ದೋಷವಾಗಿದ್ದರೂ ಸರ್ಕಾರದ ಆದೇಶ ವಜಾ ಮಾಡಲು ಅದು ಆಧಾರವಾಗದು. ಇದರಿಂದ ಅರ್ಜಿದಾರರ ಪ್ರಕರಣಕ್ಕೆ ಯಾವುದೇ ಪೂರ್ವಾಗ್ರಹ ಉಂಟಾಗುವುದಿಲ್ಲ. ದೋಷವನ್ನು ಸಿಆರ್‌ಪಿಸಿ ಸೆಕ್ಷನ್‌ 465ರ ಅಡಿ ಸರಿಪಡಿಸಬಹುದಾಗಿದೆ.

  • ಡಿಎಸ್‌ಪಿಇ ಸೆಕ್ಷನ್‌ 6ರ ಪ್ರಕಾರ ಎರಡು ಒಪ್ಪಿಗೆಗಳಿದ್ದು, ಒಂದು ಸಾಮಾನ್ಯ ಮತ್ತು ಇನ್ನೊಂದು ವಿಶೇಷ ಸಮ್ಮತಿಯಾಗಿದೆ. ಇದರಲ್ಲಿ ನಿರ್ದಿಷ್ಟವಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಹೇಳಲಾಗಿದೆ. ಸರ್ಕಾರದ ಆದೇಶದಲ್ಲಿ ಸಮ್ಮತಿ ಎಂದು ಹೇಳಲಾಗಿದ್ದರೂ ಡಿಎಸ್‌ಪಿಇ ಕಾಯಿದೆ ಸೆಕ್ಷನ್‌ 6ರ ಅಡಿ ಅದು ಒಪ್ಪಿಗೆ ಮಾತ್ರ.

  • ಸಿಬಿಐ ಉದ್ದೇಶಪೂರ್ವಕವಾಗಿ ತಿದ್ದುಪಡಿ ಮಾಡದಿರುವ ಭ್ರಷ್ಟಾಚಾರ ನಿಷೇಧ ಕಾಯಿದೆ ಅಡಿ ಡಿಕೆಶಿ ವಿರುದ್ಧ ಪ್ರಕರಣ ದಾಖಲಿಸಿದೆ. ಪಿ ಸಿ ಕಾಯಿದೆ ಸೆಕ್ಷನ್‌ 17ಎ ಅಡಿ ಅನುಮತಿ ಪಡೆಯುವುದರಿಂದ ಬಚಾವಾಗಲು ತಿದ್ದುಪಡಿ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿಲ್ಲ.

ಸಿಬಿಐ ವಾದವೇನು?

  • ಡಿಎಸ್‌ಪಿಇ ಕಾಯಿದೆ ಸೆಕ್ಷನ್‌ 6ರ ಅಡಿ ತನಿಖೆಗೆ ವಹಿಸುವಾಗ ವಿವೇಚನೆ ಬಳಸುವ ಅಗತ್ಯವಿಲ್ಲ.

  • ಅರ್ಜಿದಾರರ ತನಿಖೆಯನ್ನು ಯಾವ ಸಂಸ್ಥೆ ನಡೆಸಬೇಕು ಎಂದು ಕೇಳುವ ಅಧಿಕಾರ ಅವರಿಗೆ ಇಲ್ಲ. ಎಫ್‌ಐಆರ್‌ ಅನ್ನು ಡಿಕೆಶಿ ಪ್ರಶ್ನಿಸಬಹುದೇ ವಿನಾ ತನಿಖೆಗೆ ವಹಿಸುವ ಅಧಿಸೂಚನೆಯನ್ನಲ್ಲ.

  • ಶೇ. 90ರಷ್ಟು ತನಿಖೆ ಪೂರ್ಣಗೊಂಡಿದ್ದು, ಅರ್ಜಿದಾರರ ವಿರುದ್ಧ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಲಾಗಿದೆ.

  • ಡಿಕೆಶಿ ವಿರುದ್ಧ ಪಿ ಸಿ ಕಾಯಿದೆ ಸೆಕ್ಷನ್‌ 13(1)(ಎ) ಆರೋಪವು ಅಧಿಕೃತ ಕರ್ತವ್ಯದಲ್ಲಿದ್ದಾಗ ಮಾಡಿದ ಶಿಫಾರಸ್ಸು ಅಥವಾ ನಿರ್ಧಾರವಲ್ಲ ಹೀಗಾಗಿ, ಪೂರ್ವಾನುಮತಿ ಪ್ರಶ್ನೆ ಉದ್ಭವಿಸುವುದಿಲ್ಲ.

  • ಶಿಫಾರಸ್ಸು ಮಾಡಲಾದ ಅಥವಾ ಅಂಥ ಸಾರ್ವಜನಿಕ ಸೇವಕ ತನ್ನ ಅಧಿಕೃತ ಕರ್ತವ್ಯ ನಿರ್ವಹಿಸುವಾಗ ಭ್ರಷ್ಟಾಚಾರ ನಿಷೇಧ ಕಾಯಿದೆಯ ಸೆಕ್ಷನ್‌ 17ಎ ಅನ್ವಯಿಸುತ್ತದೆಯೇ ವಿನಾ ಹಾಲಿ ಪ್ರಕರಣಕ್ಕೆ ಅನ್ವಯಿಸುವುದಿಲ್ಲ.

ಪ್ರಕರಣದ ಹಿನ್ನೆಲೆ: 2017ರ ಆಗಸ್ಟ್‌ 2ರಂದು ಗುಜರಾತ್‌ ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಲ್ಲಿನ ಕಾಂಗ್ರೆಸ್‌ ಶಾಸಕರಿಗೆ ಡಿ ಕೆ ಶಿವಕುಮಾರ್‌ ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಆಶ್ರಯ ಒದಗಿಸಿದ್ದರು. ಈ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಿವಕುಮಾರ್‌ ಅವರ ದೆಹಲಿ ನಿವಾಸ ಸೇರಿದಂತೆ ಹಲವು ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದರು. ಇಲ್ಲಿ ಒಟ್ಟಾರೆ 8,59,69,100 ರೂಪಾಯಿ ಪತ್ತೆಯಾಗಿದ್ದು, ಶಿವಕುಮಾರ್‌ ಅವರಿಗೆ ಸೇರಿದ ಸ್ಥಳದಲ್ಲಿ 41 ಲಕ್ಷ ರೂಪಾಯಿ ಪತ್ತೆಯಾಗಿತ್ತು. ಇದರ ಆಧಾರದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆದಾಯ ತೆರಿಗೆ ಕಾಯಿದೆ 1961ರ ವಿವಿಧ ಸೆಕ್ಷನ್‌ಗಳ ಅಡಿ ಶಿವಕುಮಾರ್‌ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಇದರ ಬೆನ್ನಿಗೇ ಜಾರಿ ನಿರ್ದೇಶನಾಲಯವು ದಾಳಿ ನಡೆಸಿ, ಪ್ರಕರಣ ದಾಖಲಿಸಿ 2019ರ ಸೆಪ್ಟೆಂಬರ್‌ 3ರಂದು ಶಿವಕುಮಾರ್‌ ಅವರನ್ನು ಬಂಧಿಸಿತ್ತು. ಆನಂತರ 2019ರ ಸೆಪ್ಟೆಂಬರ್‌ 9ರಂದು ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್‌ 66(2) ಅಡಿ ಜಾರಿ ನಿರ್ದೇಶನಾಲಯದ ವಿಶೇಷ ನಿರ್ದೇಶಕರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಇದನ್ನು ಆಧರಿಸಿ ರಾಜ್ಯ ಸರ್ಕಾರವು ಭ್ರಷ್ಟಾಚಾರ ನಿಷೇಧ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ತನಿಖೆ ನಡೆಸಲು 2019ರ ಸೆಪ್ಟೆಂಬರ್‌ 25ರಂದು ರಾಜ್ಯ ಸರ್ಕಾರವು ಸಿಬಿಐಗೆ ಸಮ್ಮತಿಸಿತ್ತು (ಸ್ಯಾಂಕ್ಷನ್‌). ಈ ಸಮ್ಮತಿಯನ್ನು ಕಾಂಗ್ರೆಸ್‌ ಸರ್ಕಾರ ಈಗ ಹಿಂಪಡೆದಿದೆ.

ಈ ಮಧ್ಯೆ, ಸಿಬಿಐ ದಾಖಲಿಸಿರುವ ಎಫ್‌ಐಆರ್‌ಗೆ ಸಂಬಂಧಿಸಿದ ದಾಖಲೆಗಳನ್ನು ತರಿಸಿಕೊಳ್ಳುವಂತೆ ಮತ್ತು ಸಿಬಿಐ ತನಿಖೆಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅನುಮೋದನೆ ನೀಡಿರುವುದನ್ನು ಎತ್ತಿ ಹಿಡಿದಿರುವ ಏಕಸದಸ್ಯ ಪೀಠದ ಆದೇಶ ಬದಿಗೆ ಸರಿಸಬೇಕು ಹಾಗೂ ಸಿಬಿಐ ತನಿಖೆಗೆ ಅನುಮೋದಿಸಿರುವ ರಾಜ್ಯ ಸರ್ಕಾರದ ಆದೇಶ ವಜಾ ಮಾಡಬೇಕು ಎಂದು ಕೋರಿ ಡಿಕೆಶಿ ಮೇಲ್ಮನವಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ, ಸಿಬಿಐ ತಡೆಯಾಜ್ಞೆ ತೆರವು ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಸುಪ್ರೀಂ ಕೋರ್ಟ್‌ 15 ದಿನದಲ್ಲಿ ಪ್ರಕರಣ ಇತ್ಯರ್ಥಪಡಿಸುವಂತೆ ಹೈಕೋರ್ಟ್‌ಗೆ ನಿರ್ದೇಶಿಸಿದೆ. ಹೀಗಾಗಿ, ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ನವೆಂಬರ್‌ 29ಕ್ಕೆ ವಿಚಾರಣೆಗೆ ನಿಗದಪಡಿಸಿದೆ.