ಹನ್ನೆರಡನೇ ತರಗತಿಯ ಮೂಲ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದಿದ್ದರೂ ಸುಧಾರಣಾ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳನ್ನು ಅಂತಿಮ ಎಂದು ಪರಿಗಣಿಸಬೇಕು ಎಂಬ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನೀತಿಯ ಕಲಂ ಅನ್ನು ಶುಕ್ರವಾರ ಸುಪ್ರೀಂ ಕೋರ್ಟ್ ರದ್ದು ಮಾಡಿದೆ.
12ನೇ ತರಗತಿಯಲ್ಲಿ ಪಾಸು ಮಾಡಬೇಕಾದರೆ ಎರಡು ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದಿರುವುದನ್ನು ಪರಿಗಣಿಸುವಂತೆ ಸಿಬಿಎಸ್‌ಇಗೆ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಸಿ ಟಿ ರವಿಕುಮಾರ್ ನೇತೃತ್ವದ ವಿಭಾಗೀಯ ಪೀಠವು ನಿರ್ದೇಶಿಸಿದೆ.
“ಸುಧಾರಣಾ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳನ್ನು ಅಂತಿಮವಾಗಿ ಪರಿಗಣಿಸಲಾಗುವುದು ಎಂದು ಹೇಳಿರುವ ನೀತಿ ರದ್ದು ಮಾಡಲು ನಮಗೆ ಯಾವುದೇ ಹಿಂಜರಿಕೆ ಇಲ್ಲ. ಫಲಿತಾಂಶ ಮೌಲ್ಯಮಾಪನ ದೃಷ್ಟಿಯಿಂದ ವಿಷಯದಲ್ಲಿ ಹೆಚ್ಚು ಅಂಕ ಪಡೆದಿರುವುದನ್ನು ಆಯ್ಕೆ ಮಾಡಲು ಅಭ್ಯರ್ಥಿಗೆ ಸಿಬಿಎಸ್‌ಇ ಅವಕಾಶ ಮಾಡಿಕೊಡಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ.
ಸುಧಾರಣಾ ಪರೀಕ್ಷೆಯಲ್ಲಿನ ಅಂಕಗಳು ಕಡಿಮೆ ಇದ್ದರೆ ಮೂಲ ಪರೀಕ್ಷೆಯಲ್ಲಿನ ಅಂಕಗಳನ್ನು ಆಯ್ಕೆ ಮಾಡಿಕೊಳ್ಳಲು ಹಿಂದೆ ಸಿಬಿಎಸ್‌ಇಯು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟಿತ್ತು.
“ತಮಗೆ ಅನುಕೂಲವಾದ ಅಂಕಗಳನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ ಎಂಬುದಕ್ಕೆ ಸಮರ್ಥನೆ ನೀಡಿ. ಹಿಂದೆ ಈ ನಿಯಮವನ್ನು ಪಾಲಿಸಿದ್ದೀರಿ, ಈ ವರ್ಷ ಅದನ್ನು ಪಾಲಿಸಲು ತೊಂದರೆಯೇನು?" ಎಂದು ಪೀಠವು ಸಿಬಿಎಸ್‌ಇಗೆ ಪ್ರಶ್ನಿಸಿತು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು “ಸಿಬಿಎಸ್‌ಇ ಈ ನಿರ್ಧಾರ ಮಾಡಿದ್ದು, ಅದು ಈ ಬಗ್ಗೆ ಕಠಿಣ ನಿಲುವು ತಳೆಯುವ ಅಗತ್ಯವಿಲ್ಲ. ಪೀಠವು ಆದೇಶ ಮಾಡಬಹುದು” ಎಂದರು.
ಹಿಂದೆ ತಾನೇ ಅನುಸರಿಸಿದ್ದ ನಿಯಮವನ್ನು ಪಾಲಿಸದಿರುವ ಸಿಬಿಎಸ್‌ಇ ಈ ಕ್ರಮಕ್ಕೆ ಯಾವುದೇ ಸಮರ್ಥನೆ ನೀಡಿಲ್ಲ ಎನ್ನುವುದನ್ನು ಪೀಠವು ದಾಖಲಿಸಿಕೊಂಡಿತು. ಮುಂದುವರೆದು, ಸಿಬಿಎಸ್‌ಇ ನೀತಿಯ ಆಕ್ಷೇಪಾರ್ಹವಾದ ಕಲಂ ಅನ್ನು ಪೀಠವು ರದ್ದುಪಡಿಸಿತು.