Central Crime Branch and Karnataka HC
Central Crime Branch and Karnataka HC 
ಸುದ್ದಿಗಳು

ಕ್ರಿಮಿನಲ್‌ ಪ್ರಕರಣಗಳ ತನಿಖೆ ನಡೆಸಿ, ಆರೋಪ ಪಟ್ಟಿ ಸಲ್ಲಿಸುವ ಅಧಿಕಾರ ಸಿಸಿಬಿ ಪೊಲೀಸರಿಗೆ ಇದೆ: ಹೈಕೋರ್ಟ್‌

Bar & Bench

ಕೇಂದ್ರೀಯ ಅಪರಾಧ ದಳದ (ಸಿಸಿಬಿ) ಪೊಲೀಸ್‌ ಅಧಿಕಾರಿಗಳಿಗೆ ಬೆಂಗಳೂರಿನ ಸಂಬಂಧಿತ ಠಾಣೆಯ ಉನ್ನತ ಪೊಲೀಸ್‌ ಅಧಿಕಾರಿಗಳಾಗಿ ಒಮ್ಮೆ ರಾಜ್ಯ ಸರ್ಕಾರ ಅಧಿಕಾರ ನೀಡಿದರೆ ಸಿಆರ್‌ಪಿಸಿ ಸೆಕ್ಷನ್‌ 36ರ ಅಡಿ ಸಿಸಿಬಿ ಪೊಲೀಸರು ತನಿಖೆ ಮಾಡುವ ಮತ್ತು ವಿಚಾರಣಾಧೀನ ನ್ಯಾಯಾಲಯಗಳಿಗೆ ಆರೋಪ ಪಟ್ಟಿ ಸಲ್ಲಿಸುವ ಅಧಿಕಾರವನ್ನು ಸ್ವಯಂಚಾಲಿತವಾಗಿ ಪಡೆಯಲಿದ್ದಾರೆ ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ತನ್ನ ಮತ್ತು ಕುಟುಂಬ ಸದಸ್ಯರ ವಿರುದ್ಧ ಪರಿತ್ಯಕ್ತ ಪತ್ನಿ ದಾಖಲಿಸಿರುವ ವರದಕ್ಷಿಣೆ ಕಿರುಕುಳ ಪ್ರಕರಣ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಉದ್ಯಮಿ ದಿತುಲ್‌ ಮೆಹ್ತಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

“ಸಿಆರ್‌ಪಿಸಿ ಸೆಕ್ಷನ್‌ 2(o) ರ ಅಡಿ ಪೊಲೀಸರು ಠಾಣೆಯ ಉಸ್ತುವಾರಿಯಾಗುವುದರಿಂದ ತನಿಖೆ ನಡೆಸುವ ಮತ್ತು ಆರೋಪ ಪಟ್ಟಿ ಸಲ್ಲಿಸುವ ಅಧಿಕಾರ ಹೊಂದಲಿದ್ದಾರೆ” ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.

“1971ರ ಸೆಪ್ಟೆಂಬರ್‌ 3ರಿಂದ ಸಿಸಿಬಿಯು ಕಾರ್ಯನಿರ್ವಹಿಸುತ್ತಿದ್ದು, 2021ರ ಫೆಬ್ರವರಿ 25ರಂದು ಪೊಲೀಸ್‌ ಠಾಣೆಯ ಅಧಿಕಾರ ನೀಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿರುವುದನ್ನು ಕಣ್ತಪ್ಪಿನಿಂದ ಆಗಿರುವ ನಿರ್ಧಾರ ಎನ್ನಲಾಗದು” ಎಂದು ನ್ಯಾಯಾಲಯ ಹೇಳಿದೆ.

“ಕರ್ನಾಟಕ ಪೊಲೀಸ್‌ ಕಾಯಿದೆಯ ಸೆಕ್ಷನ್‌ 7ರ ಅಡಿ ರಾಜ್ಯ ಸರ್ಕಾರವು ಅಧಿಕಾರ ನೀಡಿರುವುದಕ್ಕೆ ಅನುಗುಣವಾಗಿ ಬೆಂಗಳೂರು ಪೊಲೀಸ್‌ ಆಯುಕ್ತರ ನಡೆದುಕೊಂಡಿದ್ದು, ಅದರ ಪ್ರಕಾರ ಪ್ರಕರಣದ ತನಿಖೆಯನ್ನು ಸಿಸಿಬಿಗೆ ಒಪ್ಪಿಸಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.

“ಸಿಸಿಬಿಯು ಒಮ್ಮೆ ಅಂತಿಮ ವರದಿ ಸಲ್ಲಿಸಿದರೆ ಅದು ಸಿಆರ್‌ಪಿಸಿ ಸೆಕ್ಷನ್‌ 173(2)ರ ಅಡಿ ಅದು ಪೊಲೀಸ್‌ ವರದಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿಆರ್‌ಪಿಸಿ ಸೆಕ್ಷನ್‌ 190ರ ಅಡಿ ಪೊಲೀಸ್‌ ವರದಿಯ ಮೇಲೆ ಮ್ಯಾಜಿಸ್ಟ್ರೇಟ್‌ ಅವರು ಸಂಜ್ಞೇಯ ಪರಿಗಣಿಸಬಹುದು” ಎಂದು ನ್ಯಾಯಾಲಯ ವಿವರಿಸಿದೆ.

“ಈ ನೆಲೆಯಲ್ಲಿ ಸಿಸಿಬಿ ಪೊಲೀಸರು ನಡೆಸಿರುವ ತನಿಖೆಯು ಸಿಆರ್‌ಪಿಸಿ ಸೆಕ್ಷನ್‌ 36ರ ಅಡಿ ಕಾನೂನಿಗೆ ಅನುಗುಣವಾಗಿದ್ದು, ಸಿಸಿಬಿ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯು ಸಿಂಧುವಾಗುತ್ತದೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿಕ್ರಂ ಹುಯಿಲಗೋಳ ಅವರು “ಸಿಸಿಬಿಯು ಬಹು ವರ್ಷಗಳಿಂದ ಪ್ರಕರಣಗಳ ತನಿಖೆ ನಡೆಸುತ್ತಿದೆ. ಅಲ್ಲಿನ ಪೊಲೀಸ್‌ ಅಧಿಕಾರಿಗಳಿಗೆ ತನಿಖೆ ನಡೆಸುವ ಮತ್ತು ಆರೋಪ ಪಟ್ಟಿ ಸಲ್ಲಿಸುವ ಅಧಿಕಾರ ನೀಡಿದ್ದು, ಇದು ಸಿಆರ್‌ಪಿಸಿ ಸೆಕ್ಷನ್‌ 173(2)ರ ಅಡಿ ಅಂತಿಮ ವರದಿ ಸಲ್ಲಿಸುವುದಕ್ಕೆ ಸಮನಾಗಿದೆ” ಎಂದು ವಾದಿಸಿದ್ದರು.

ಅರ್ಜಿದಾರರ ಪರ ವಕೀಲರು “ರಾಜ್ಯ ಪೊಲೀಸ್‌ ಕಾಯಿದೆಯ ಅಡಿ ಸಿಸಿಬಿ ತನಿಖೆಗೆ ವಹಿಸುವ ಅಧಿಕಾರ ಪೊಲೀಸ್‌ ಆಯುಕ್ತರಿಗೆ ಇಲ್ಲ. ಸಿಸಿಬಿಯು ಪೊಲೀಸ್‌ ಠಾಣೆಯಲ್ಲವಾದ್ದರಿಂದ ಸಿಸಿಬಿ ಸಲ್ಲಿಸಿದ ಆರೋಪ ಪಟ್ಟಿಯ ಸಂಜ್ಞೇಯನ್ನು ಮ್ಯಾಜಿಸ್ಟ್ರೇಟ್‌ ಪರಿಗಣಿಸಲಾಗದು” ಎಂದು ವಾದಿಸಿದ್ದರು.  

ಪ್ರಕರಣದ ಹಿನ್ನೆಲೆ: ಉದ್ಯಮಿ ಮೆಹ್ತಾ ಅವರ ವಿರುದ್ಧ ಅವರ ಪತ್ನಿಯು ಬಸವನಗುಡಿ ಠಾಣೆಯಲ್ಲಿ ದೂರು ನೀಡಿದ್ದು, ಬೆಂಗಳೂರು ಪೊಲೀಸ್‌ ಆಯುಕ್ತರ ನಿರ್ದೇಶನದಂತೆ ದೂರನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ಎಲ್ಲಾ ಪೊಲೀಸ್‌ ಠಾಣೆಗಳ ಠಾಣಾಧಿಕಾರಿಗಳಿಗೆ ಇರುವ ಅಧಿಕಾರವನ್ನು ಸಿಸಿಬಿಗೆ ನೀಡಿ 2021ರ ಫೆಬ್ರವರಿ 25ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

Ditul Mehta Vs State of Karnataka.pdf
Preview