ಇ-ಕಾಮರ್ಸ್ ದೈತ್ಯ ಅಮೆಜಾನ್ ಬಗ್ಗೆ ಭಾರತ ಸ್ಪರ್ಧಾ ಆಯೋಗ (ಸಿಸಿಐ) ನಡೆಸಲು ಮುಂದಾದ ತನಿಖೆಯು ಸ್ಪರ್ಧಾ ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ಹಿರಿಯ ವಕೀಲ ಗೋಪಾಲ್ ಸುಬ್ರಮಣಿಯಂ ಅವರು ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ತಿಳಿಸಿದರು.
ಆನ್‌ಲೈನ್ ವೇದಿಕೆ ಕುರಿತು ತನಿಖೆ ನಡೆಸಲು ನಂಬಲರ್ಹ ಮಾಹಿತಿದಾರರಿಂದ ಸೂಕ್ತ ಮಾಹಿತಿ ಹೊಂದಿರಬೇಕು ಎಂದು ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಅವರಿದ್ದ ಏಕ ಸದಸ್ಯ ಪೀಠದ ಎದುರು ಸುಬ್ರಮಣಿಯಂ ವಾದ ಮಂಡಿಸಿದರು. ಸ್ಪರ್ಧಾ ಕಾನೂನಿನ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಸಿಸಿಐ ಆದೇಶಿಸಿದ್ದ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಸಲ್ಲಿಸಿದ ಎರಡು ಅರ್ಜಿಗಳನ್ನು ನ್ಯಾಯಪೀಠ ವಿಚಾರಣೆ ನಡೆಸಿತು. ಇ- ಕಾಮರ್ಸ್ ದೈತ್ಯ ಕಂಪೆನಿಗಳ ವಿರುದ್ಧ ದೆಹಲಿ ವ್ಯಾಪಾರ ಮಹಾಸಂಘ (ಡಿವಿಎಂ) ಎತ್ತಿದ ಆರೋಪಗಳ ಬಗ್ಗೆ ಸುಬ್ರಮಣಿಯಂ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಅಮೆಜಾನ್ ವಿಶೇಷ ಒಪ್ಪಂದದಲ್ಲಿ ತೊಡಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಅಮೆಜಾನ್ ಜಾಲತಾಣದಲ್ಲಿ ಆಪಲ್ ಸ್ಯಾಮ್‌ಸಂಗ್ ಇತ್ಯಾದಿ ಮೊಬೈಲ್ ಫೋನ್‌ಗಳನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಿರುವುದು ನಿಜ. ಆದರೆ ಅವು ಬಿಡುಗಡೆಯಾದ ಅವಧಿಯಲ್ಲಿ ಆ ಬ್ರಾಂಡ್‌ಗಳ ಆನ್‌ಲೈನ್ ಮಳಿಗೆಗಳಲ್ಲಿ ಕೂಡ ಈ ಉತ್ಪನ್ನಗಳು ಲಭ್ಯ ಇದ್ದವು. ಹಾಗಾಗಿ ಇದರಲ್ಲಿ ಉತ್ಪನ್ನಗಳ ವಿಶೇಷತೆ ಇಲ್ಲ.
ಕೆಲ ಉತ್ಪನ್ನಗಳ ಬಿಡುಗಡೆ ಅವಧಿಯಲ್ಲಿ ವಿತರಕರು ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ಕಡಿತಗೊಳಿಸಲು ಸಿದ್ಧರಾಗಿದ್ದಾರೆ. ಇದನ್ನೇ ಸಿಸಿಐ ದೊಡ್ಡ ರಿಯಾಯ್ತಿ ಎಂದು ವ್ಯಾಖ್ಯಾನಿಸಿದೆ.
ಮಾಹಿತಿದಾರರು ಆರೋಪಿಸಿರುವುದಕ್ಕೆ ತಕ್ಕಂತೆ ಅಮೆಜಾನ್ ಆದ್ಯತೆಯ ಮಾರಾಟಗಾರರನ್ನು ಹೊಂದಿಲ್ಲ.
ಹೆಚ್ಚಿನ ರೇಟಿಂಗ್ ಹೊಂದಿರುವವರನ್ನು, ಉತ್ತಮ ಮಾರಾಟದ ಅಂಕಿ-ಸಂಖ್ಯೆ ಮೇಲೆ ಆಯ್ಕೆ ಮಾಡಲಾಗುತ್ತದೆ. ಅವರಿಗೆ ರಿಯಾಯಿತಿಗಳನ್ನು ನೀಡಲಾಗುತ್ತದೆ. ಆದರೆ ನಿಜವಾಗಿಯೂ ಹೇಳುವುದಾದರೆ, ಅಮೆಜಾನ್ ತನ್ನ ಮಾರಾಟಗಾರರಿಗೆ ಯಾವುದೇ ಆದ್ಯತೆ ನೀಡುವುದಿಲ್ಲ.
ಸಿಸಿಐ ಮಾಹಿತಿದಾರರ ನೈಜತೆ ಪರೀಕ್ಷಿಸಿಲ್ಲ. ಅಖಿಲ ಭಾರತ ವರ್ತಕರ ಮಹಾ ಒಕ್ಕೂಟ (ಸಿಎಐಟಿ) ಅಮೆಜಾನ್ ವಿರುದ್ಧ ಅನೇಕ ಅರ್ಜಿಗಳನ್ನು ಸಲ್ಲಿಸಿದ್ದು ಅನುಕೂಲಕರ ಆದೇಶ ಪಡೆಯಲು ಸಾಧ್ಯವಾಗಿಲ್ಲ. ಬಳಿಕ ಅದು ಸಿಸಿಐ ಸಂಪರ್ಕಿಸಿತ್ತು. ಇದು ಮೇಲ್ನೋಟಕ್ಕೆ ಅಸಂಬದ್ಧ.
ಪ್ರಕರಣದ ವಿಚಾರಣೆ ಮತ್ತೆ ನಾಳೆ (ಜನವರಿ 20) ನಡೆಯಲಿದೆ. ಈ ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯ ಜನವರಿ 18ರಂದು ಅಂತಿಮ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು. ಸ್ಪರ್ಧಾ ವಿರೋಧಿ ಪ್ರಕ್ರಿಯೆಯಲ್ಲಿ ತೊಡಗಿರುವ ಆರೋಪದ ಮೇಲೆ ಸಿಸಿಐ ಅಮೆಜಾನ್ ವಿರುದ್ಧ ನೀಡಿದ್ದ ತನಿಖೆಯ ಆದೇಶವನ್ನು ತಡೆಹಿಡಿಯುವ ಮೂಲಕ ನ್ಯಾಯಾಲಯ ಮಧ್ಯಂತರ ಪರಿಹಾರ ಘೋಷಿಸಿತ್ತು. ಕೆಲ ಕಾಲದ ನಂತರ ಫ್ಲಿಪ್‌ಕಾರ್ಟ್ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಇದೇ ರೀತಿಯ ಆದೇಶ ಜಾರಿ ಮಾಡಿತ್ತು.