Google 
ಸುದ್ದಿಗಳು

ಪ್ಲೇಸ್ಟೋರ್‌ ನೀತಿ: ಸ್ಪರ್ಧಾ ವಿರೋಧಿ ಚಟುವಟಿಕೆಗಾಗಿ ಗೂಗಲ್‌ಗೆ ₹936 ಕೋಟಿ ದಂಡ ವಿಧಿಸಿದ ಸಿಸಿಐ

ಸ್ಪರ್ಧಾ ವಿರೋಧಿ ಚಟುವಟಿಕೆಗಳಿಂದ ದೂರ ಇರುವಂತೆ ಮತ್ತು ನಿರ್ದಿಷ್ಟ ಕಾಲಮಿತಿಯಲ್ಲಿ ತನ್ನ ನಿಲುವಿನಲ್ಲಿ ಸುಧಾರಣೆ ಮಾಡಿಕೊಳ್ಳುವಂತೆ ಗೂಗಲ್‌ಗೆ ಸಿಸಿಐ ನಿರ್ದೇಶಿಸಿದೆ.

Bar & Bench

ಪ್ಲೇಸ್ಟೋರ್‌ ನೀತಿಗಳಿಗೆ ಸಂಬಂಧಿಸಿದಂತೆ ಗೂಗಲ್‌ ತನ್ನ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿರುವುದಕ್ಕಾಗಿ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಮಂಗಳವಾರ ₹936.44 ಕೋಟಿ ದಂಡ ವಿಧಿಸಿದೆ.

ಸ್ಪರ್ಧಾ ವಿರೋಧಿ ಚಟುವಟಿಕೆಗಳಿಂದ ದೂರ ಇರುವಂತೆ ಮತ್ತು ನಿರ್ದಿಷ್ಟ ಕಾಲಮಿತಿಯಲ್ಲಿ ತನ್ನ ನಿಲುವಿನಲ್ಲಿ ಸುಧಾರಣೆ ಮಾಡಿಕೊಳ್ಳುವಂತೆ ಗೂಗಲ್‌ಗೆ ಸಿಸಿಐ ನಿರ್ದೇಶಿಸಿದೆ.

ಕಾಯಿದೆಯ ಸೆಕ್ಷನ್‌ 4 ಅನ್ನು ಉಲ್ಲಂಘಿಸಿದ್ದಕ್ಕಾಗಿ ಗೂಗಲ್‌ನ ಸರಾಸರಿ ವಹಿವಾಟಿನ ಪೈಕಿ ಶೇ. 7ರಂತೆ ₹936.44 ಕೋಟಿಯನ್ನು ಆಯೋಗವು ದಂಡವನ್ನಾಗಿ ವಿಧಿಸಿದೆ. ಅಗತ್ಯ ಹಣಕಾಸು ವಿವರ ಮತ್ತು ಅದಕ್ಕೆ ಪೂರಕವಾದ ದಾಖಲೆ ಸಲ್ಲಿಸುವಂತೆ ಗೂಗಲ್‌ಗೆ 30 ದಿನಗಳ ಕಾಲಾವಕಾಶ ನೀಡಲಾಗಿದೆ” ಎಂದು ಸಿಸಿಐ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

ಸ್ಮಾರ್ಟ್ ಮೊಬೈಲ್ ಸಾಧನಗಳಿಗೆ ಬೇಕಿರುವ ಪರವಾನಗಿ ನೀಡಬಹುದಾದ ಆಪರೇಟಿಂಗ್ ಸಿಸ್ಟಮ್ ಮಾರುಕಟ್ಟೆಯಲ್ಲಿ ಮತ್ತು ಆಂಡ್ರಾಯ್ಡ್‌ ಸ್ಮಾರ್ಟ್ ಮೊಬೈಲ್ ಓಎಸ್‌ ಅಪ್ಲಿಕೇಶನ್ ಸ್ಟೋರ್‌ಗಳ ಮಾರುಕಟ್ಟೆಯಲ್ಲಿ ಗೂಗಲ್‌ ಭಾರತದಲ್ಲಿ ಪ್ರಬಲವಾಗಿದೆ ಎಂದು ತನ್ನ ವಿಶ್ಲೇಷಣೆಯಿಂದ ತಿಳಿದುಕೊಂಡಿರುವುದಾಗಿ ಆಯೋಗವು ಹೇಳಿದೆ.

ಪಾವತಿ ಮಾಡಿ ಪಡೆಯುವ ಅಪ್ಲಿಕೇಷನ್‌ಗಳಿಗೆ ಹಾಗೂ ಅಪ್ಲಿಕೇಷನ್‌ಗಳ ಆಂತರಿಕ ವಹಿವಾಟಿಗೆ ಗೂಗಲ್‌ ತನ್ನ ಗೂಗಲ್‌ ಪ್ಲೇ ಬಿಲ್ಲಿಂಗ್‌ ಸಿಸ್ಟಮ್‌ ಅನ್ನು (ಜಿಪಿಬಿಎಸ್‌) ಅಪ್ಲಿಕೇಶನ್ ಡೆವಲಪರ್‌ಗಳು ಕಡ್ಡಾಯವಾಗಿ ಬಳಸುವಂತೆ ಮಾಡಿದೆ. ಇಲ್ಲವಾದಲ್ಲಿ ಅಂತಹ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಲ್ಲಿ ಪಟ್ಟಿ ಮಾಡಲು ಗೂಗಲ್‌ ಅನುಮತಿಸುವುದಿಲ್ಲ. ಇದರಿಂದಾಗಿ ಆಂಡ್ರಾಯ್ಡ್‌ ಬಳಕೆದಾರರ ರೂಪದಲ್ಲಿನ ಸಂಭಾವ್ಯ ಗ್ರಾಹಕರ ದೊಡ್ಡ ಸಂಖ್ಯೆಯನ್ನು ಕಳೆದುಕೊಳ್ಳುವ ಭೀತಿ ಅಪ್ಲಿಕೇಷನ್‌ ತಯಾರಕರಿಗೆ ಎದುರಾಗುತ್ತದೆ ಎನ್ನುವ ಅಂಶವನ್ನು ಸಿಸಿಐ ಗಮನಿಸಿದೆ.

ಆಂಡ್ರಾಯ್ಡ್‌ ಮೊಬೈಲ್‌ ಸಾಧನ ವ್ಯವಸ್ಥೆಯಲ್ಲಿನ ಹಲವು ಮಾರುಕಟ್ಟೆಗಳಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಗೂಗಲ್‌ಗೆ ಕಳೆದ ವಾರವಷ್ಟೇ ಬರೋಬ್ಬರಿ ₹1337.76 ಕೋಟಿ ದಂಡ ವಿಧಿಸಿದ್ದನ್ನು ಇಲ್ಲಿ ನೆನೆಯಬಹುದು.