ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾಗಳು ಒಂದು ನಿಮಿಷವೂ ಸ್ಥಗಿತಗೊಳ್ಳದೆ ನಿರಂತರವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ಮತ್ತು ರಾಜ್ಯದಾದ್ಯಂತ ಸಿಸಿಟಿವಿ ವ್ಯವಸ್ಥೆಗಳ ಕಾರ್ಯನಿರ್ವಹಣೆಯನ್ನು ಕಡ್ಡಾಯವಾಗಿ ಲೈವ್-ಟ್ರ್ಯಾಕ್ ಮಾಡುವಂತೆ ಪೊಲೀಸ್ ಇಲಾಖೆಗೆ ಹೈಕೋರ್ಟ್ ನಿರ್ದೇಶಿಸಿದೆ.
ಮಾಹಿತಿ ಹಕ್ಕು ಕಾಯಿದೆ–2005ರ ಅಡಿಯಲ್ಲಿ ಮಾಹಿತಿ ನಿರಾಕರಿಸಿ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರು ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಿ ಸೂಕ್ತ ನಿರ್ದೇಶನ ಹೊರಡಿಸಬೇಕು ಎಂದು ಕೋರಿ ವಿ ಶೈಲಜಾ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ಪ್ರಕರಣಕ್ಕೆ ಸಂಬಂಧಿಸಿದ ಕೇಂದ್ರ ಬಿಂದುವಾದ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ 2024ರ ಸೆಪ್ಟೆಂಬರ್ 4 ಸೇರಿದಂತೆ ಸುಮಾರು ಹನ್ನೊಂದು ತಿಂಗಳು ಯುಪಿಎಸ್ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಸಿಸಿಟಿವಿ ವ್ಯವಸ್ಥೆ ಸ್ಥಗಿತಗೊಂಡಿತ್ತು ಎಂಬ ಪ್ರಾಸಿಕ್ಯೂಷನ್ ಹೇಳಿಕೆ ಯಾವುದೇ ವಿಶ್ವಾಸಾರ್ಹತೆ ಮೂಡಿಸುವುದಿಲ್ಲ. ಸಿಸಿಟಿವಿ ಅಳವಡಿಕೆ ಕೇವಲ ಔಪಚಾರಿಕ ಕ್ರಮವಲ್ಲ” ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
“ವಿವಿಧ ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾಗಳು ಮತ್ತು ಯುಪಿಎಸ್ ವ್ಯವಸ್ಥೆಯ ವಿವರಗಳನ್ನು ಒಳಗೊಂಡ ವರದಿ ಪರಿಶೀಲಿಸಿದರೆ; ಹೆಚ್ಚಿನ ಪೊಲೀಸ್ ಠಾಣೆಗಳಲ್ಲಿ ಸುಮಾರು ನಾಲ್ಕು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದರೂ, ಒದಗಿಸಲಾದ ಯುಪಿಎಸ್ ಸಾಮರ್ಥ್ಯದಲ್ಲಿ ಗಣನೀಯ ವ್ಯತ್ಯಾಸ ಇರುವುದನ್ನು ವರದಿ ಬಹಿರಂಗಪಡಿಸುತ್ತದೆ” ಎಂದು ಪೀಠ ವಿವರಿಸಿದೆ.
“ಎಲ್ಲಾ ಸಿಸಿಟಿವಿಗಳು ವರ್ಷದ 365 ದಿವಸ, ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆತಂಕಕಾರಿ ಅಂಶಗಳು ಕಂಡುಬರುತ್ತಿವೆ. ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ವಿದ್ಯುತ್ ಬ್ಯಾಕಪ್ ಇಲ್ಲದ ಸಿಸಿಟಿವಿ ವ್ಯವಸ್ಥೆಯು ವಿದ್ಯುತ್ ವ್ಯತ್ಯಯದ ಸಮಯದಲ್ಲಿ ನಿಷ್ಕ್ರಿಯಗೊಳ್ಳುವ ಸಾಧ್ಯತೆಯಿರುತ್ತದೆ. ಇದರಿಂದ ಕ್ಯಾಮರಾಗಳನ್ನು ಕಡ್ಡಾಯಗೊಳಿಸಿದ ಮೂಲ ಉದ್ದೇಶವೇ ವಿಫಲವಾಗುತ್ತದೆ” ಎಂದು ಹೇಳಿದೆ.
“ಪೊಲೀಸ್ ಠಾಣೆಗಳಲ್ಲಿ ನಡೆಯುವ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಆದೇಶಿಸಿರುವ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು” ಎಂದು ಪೀಠ ನಿರ್ದೇಶಿಸಿದೆ.
“ಈ ನಿಟ್ಟಿನಲ್ಲಿ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು ಈ ವಿಷಯವನ್ನು ಮುತುವರ್ಜಿಯಿಂದ ಪರಿಶೀಲಿಸಬೇಕು” ಎಂದು ಆದೇಶಿಸಿದ್ದು ರಾಜ್ಯದಾದ್ಯಂತ ಇರುವ ಎಲ್ಲಾ ಪೊಲೀಸ್ ಠಾಣೆಗಳು ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದಂತೆ ಮಧ್ಯಂತರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ತಮಗಾದ ಕಿರುಕುಳಕ್ಕೆ ಸಂಬಂಧಿಸಿ ಆರೋಪಗಳನ್ನು ದೃಢಪಡಿಸಲು ಶೈಲಜಾ ಅವರು ಸಿಸಿಟಿವಿ ದೃಶ್ಯಾವಳಿ ಒದಗಿಸುವಂತೆ ಕೋರಿದ್ದರು. ಪೊಲೀಸ್ ಅಧಿಕಾರಿಗಳು ಈ ವಿನಂತಿಯನ್ನು ತಿರಸ್ಕರಿಸಿದ್ದರು. ನಂತರ ಅವರು; ಕರ್ನಾಟಕ ಮಾಹಿತಿ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಆಯೋಗವು 2025ರ ನವೆಂಬರ್‌ನಲ್ಲಿ ಈ ಮನವಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.