ಚುನಾವಣೆ
ಚುನಾವಣೆ 
ಸುದ್ದಿಗಳು

ಚುನಾವಣಾ ಆಯುಕ್ತರಿಗೆ ಸುಪ್ರೀಂ ನ್ಯಾಯಮೂರ್ತಿ ಸ್ಥಾನಮಾನ: ತಿದ್ದುಪಡಿಗೆ ಮುಂದಾದ ಕೇಂದ್ರ

Bar & Bench

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಸರಿಸಮನಾದ ಸ್ಥಾನಮಾನವನ್ನು ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರಿಗೆ ನೀಡುವುದಕ್ಕಾಗಿ ಸಂಬಂಧಿತ ಕಾಯಿದೆಗೆ ಕೆಲ ‌ಪ್ರಸ್ತಾಪಿತ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಈ ನಿಟ್ಟಿನಲ್ಲಿ, ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ನಿಯಮ ಹಾಗೂ ಅಧಿಕಾರಾವಧಿ) ಮಸೂದೆ- 2023ಕ್ಕೆ ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ.

ರಾಜ್ಯಸಭೆಯಲ್ಲಿ ಆಗಸ್ಟ್ 10ರಂದು ಮೂಲತಃ ಮಂಡನೆಯಾಗಿದ್ದ ಮಸೂದೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರ ನೇಮಕಾತಿಯ ಆಯ್ಕೆ ಸಮಿತಿಯ ಪರಿಗಣನೆಗೆ ಐವರ ಹೆಸರನ್ನು ಶೋಧನಾ ಸಮಿತಿಯು ಸೂಚಿಸಲಿದೆ. ಸಂಪುಟ ಕಾರ್ಯದರ್ಶಿ ನೇತೃತ್ವದ ಶೋಧನಾ ಸಮಿತಿಯಲ್ಲಿ ಭಾರತ ಸರ್ಕಾರದ ಕಾರ್ಯದರ್ಶಿ ಶ್ರೇಣಿಗಿಂತ ಕಡಿಮೆಯಿಲ್ಲದ ಉಳಿದಿಬ್ಬರು ಸದಸ್ಯರಿರಲಿದ್ದಾರೆ ಎಂದು ವಿವರಿಸಲಾಗಿತ್ತು. ಪ್ರಸ್ತಾವಿತ ತಿದ್ದುಪಡಿಯು 'ಸಂಪುಟ ಕಾರ್ಯದರ್ಶಿ' ಬದಲಿಗೆ 'ಕಾನೂನು ಮತ್ತು ನ್ಯಾಯ ಸಚಿವರು' ಎಂಬ ಪದ ಬಳಸುತ್ತದೆ.

ಆರಂಭದಲ್ಲಿ, ಸಿಇಸಿ ಮತ್ತು ಇಸಿಗಳ ವೇತನ, ಭತ್ಯೆ ಮತ್ತು ಸೇವಾ ನಿಯಮಗಳು ಸಂಪುಟ ಕಾರ್ಯದರ್ಶಿಗಳಿಗೆ ಸಮಾನವಾಗಿರುತ್ತವೆ ಎಂದು ಮಸೂದೆ ತಿಳಿಸಿತ್ತು. ಈಗ ಇದನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ವೇತನ, ಭತ್ಯೆ ಮತ್ತು ಸೇವಾ ನಿಯಮಗಳಿಗೆ ಅನುಗುಣವಾಗಿ ಪರಿಷ್ಕರಿಸಲಾಗಿದೆ.

ಸಂವಿಧಾನದ 324 ನೇ ವಿಧಿಯ ಷರತ್ತು (5) ರ ಮೊದಲ ಮತ್ತು ಎರಡನೇ ನಿಯಮಾವಳಿಗಳಿಗೆ ಅನುಗುಣವಾಗಿ ಮಾತ್ರ ಸಿಇಸಿ ಮತ್ತು ಇಸಿಗಳನ್ನು ತೆಗೆದುಹಾಕಬಹುದು ಎಂದು ಮಸೂದೆ ವಿವರಿಸಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಅವರ ಹುದ್ದೆಯಿಂದ ತೆಗೆದುಹಾಕುವ ಪ್ರಕ್ರಿಯೆಯನ್ನೇ ಸಿಇಸಿಯನ್ನು ತೆಗೆದುಹಾಕುವುದಕ್ಕೂ ಅನುಸರಿಸಬೇಕು ಎಂದು ತಿದ್ದುಪಡಿ ಸೂಚಿಸಿದೆ. ಅಲ್ಲದೆ ಸಿಇಸಿಯ ಶಿಫಾರಸು ಇಲ್ಲದೆ ಇಸಿಗಳನ್ನು ಹುದ್ದೆಯಿಂದ ಕೆಳಗಿಳಿಸುವಂತಿಲ್ಲ ಎಂದು ಅದು ಹೇಳಿದೆ.

ಪ್ರಯಾಣ ಭತ್ಯೆ, ವೈದ್ಯಕೀಯ ಸೌಲಭ್ಯ, ರಜೆ ಪ್ರಯಾಣ ರಿಯಾಯಿತಿ, ಸಾರಿಗೆ ಸೌಲಭ್ಯ ಮತ್ತಿತರೆ ಕ್ಯಾಬಿನೆಟ್ ಕಾರ್ಯದರ್ಶಿಗೆ ಅನ್ವಯವಾಗುವ ಸೇವಾ ನಿಯಮಗಳೇ ಸಿಇಸಿ ಮತ್ತು ಇಸಿಗಳಿಗೂ ಅನ್ವಯವಾಗುತ್ತದೆ ಎಂದು ಮಸೂದೆ ಹೇಳಿತ್ತು. ಆದರೆ ಪ್ರಸ್ತಾವಿತ ತಿದ್ದುಪಡಿ ಪ್ರಕಾರ ಈ ಸೇವಾ ನಿಯಮಗಳನ್ನು ನಿರ್ಧರಿಸುವ ಅಧಿಕಾರ ಭಾರತದ ರಾಷ್ಟ್ರಪತಿಗೆ ಇದೆ.

ಜೊತೆಗೆ ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವಾಗ ಸಿಇಸಿ ಅಥವಾ ಇಸಿ ಎನಿಸಿಕೊಂಡವರು ಎಸಗಿದ ಕೃತ್ಯ , ಆಡಿದ ಮಾತು ಅಥವಾ ಬಳಸಿದ ಪದಗಳಿಗೆ ಸಂಬಂಧಿಸಿದಂತೆ ಸಿವಿಲ್ ಅಥವಾ ಕ್ರಿಮಿನಲ್ ವಿಚಾರಣೆ ನಡೆಸುವಂತಿಲ್ಲ ಎಂದು ತಿದ್ದುಪಡಿ ಹೇಳಿದೆ.

ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ನೇಮಕಾತಿಗಳ ಬಗ್ಗೆ ಕೇಂದ್ರ ಸರ್ಕಾರ ಕಾಯಿದೆ ತರುವವರೆಗೆ, ಅಂತಹ ನೇಮಕಾತಿಗಳನ್ನು ಪ್ರಧಾನಿ, ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯ ಸಲಹೆಯ ಮೇರೆಗೆ ಮಾಡಬೇಕು ಎಂದು ಮಾರ್ಚ್ 2, 2023ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ, ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಮಸೂದೆ ಜಾರಿಗೆ ತರಲಾಗಿತ್ತು. ಮಸೂದೆ ಪ್ರಕಾರ ಆಯ್ಕೆ ಸಮಿತಿಗೆ ಪ್ರಧಾನಿ ಅಧ್ಯಕ್ಷರಾಗಿರಲಿದ್ದು ಕೇಂದ್ರ ಸಂಪುಟ ಸಚಿವರು ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕರು ಇರಲಿದ್ದಾರೆ ಎಂದು ಮಸೂದೆ ಸೂಚಿಸಿದೆ.

ಚುನಾವಣಾ ಆಯೋಗಕ್ಕೆ ಶಾಶ್ವತ ಸಚಿವಾಲಯ ಸ್ಥಾಪಿಸುವುದನ್ನು ಪರಿಗಣಿಸುವಂತೆ ಮತ್ತು ಅದರ ವೆಚ್ಚವನ್ನು ಭಾರತದ ಸಂಚಿತ ನಿಧಿಗೆ ವಿಧಿಸುವಂತೆ ಕೇಂದ್ರ ಸರ್ಕಾರ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್,   ಹೃಷಿಕೇಶ್ ರಾಯ್ ಮತ್ತು ಸಿ.ಟಿ.ರವಿಕುಮಾರ್ ಅವರಿದ್ದ ಸಾಂವಿಧಾನಿಕ ಪೀಠ ತಿಳಿಸಿತ್ತು.

ನಿಯಮಾನುಸಾರ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸದ ಚುನಾವಣಾ ಆಯೋಗವು ಕಾನೂನು ಆಳ್ವಿಕೆಯ ಅಡಿಪಾಯವನ್ನು ಅಲುಗಾಡಿಸುತ್ತದೆ ಎಂದು ಹೇಳಿತ್ತು.