ಮುಂಬೈ ಮೇಲೆ 26/11ರಂದು ಉಗ್ರರು ನಡೆಸಿದ ದಾಳಿ ಪ್ರಕರಣದ ವಿಚಾರಣೆಗಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನೇತೃತ್ವದ ವಿಶೇಷ ಸರ್ಕಾರಿ ಅಭಿಯೋಜಕರ ತಂಡವನ್ನು ಕೇಂದ್ರ ಸರ್ಕಾರ ನೇಮಿಸಿದೆ.
ಪಾಕಿಸ್ತಾನ ಮೂಲದ ಕೆನಡಾ-ಅಮೆರಿಕಾ ನಿವಾಸಿ ತಹಾವ್ವೂರ್ ರಾಣಾ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಕಳೆದ ತಿಂಗಳು ಆತನನ್ನು ಅಮೆರಿಕಾದಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಸದ್ಯ ರಾಣಾ ಜೂನ್ 6ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಮೆಹ್ತಾ ಹೊರತಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, ಹಿರಿಯ ವಕೀಲರಾದ ದಯಾನ್ ಕೃಷ್ಣನ್ ಮತ್ತು ನರೇಂದರ್ ಮನ್ ಅವರು ಪ್ರಾಸಿಕ್ಯೂಷನ್ ತಂಡದ ಭಾಗವಾಗಿದ್ದಾರೆ. ಇವರು ದೆಹಲಿಯ ವಿಶೇಷ ನ್ಯಾಯಾಲಯ, ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು (ಎನ್‌ಐಎ) ಪ್ರತಿನಿಧಿಸಲಿದ್ದಾರೆ.
1961ರಲ್ಲಿ ಪಾಕಿಸ್ತಾನದಲ್ಲಿ ರಾಣಾ ಜನಿಸಿದ್ದು, 1990ರಲ್ಲಿ ಕೆನಡಾಕ್ಕೆ ವಲಸೆ ಹೋಗಿ 2000ದಲ್ಲಿ ಅಲ್ಲಿಯ ಪೌರತ್ವ ಪಡೆಯುವುದಕ್ಕೂ ಮುನ್ನ ಆತ ಪಾಕಿಸ್ತಾನದ ಸೇನೆಯಲ್ಲಿ ವೈದ್ಯನಾಗಿದ್ದ. ಮುಂಬೈ ದಾಳಿಯ ಸಂಚುಕೋರ ಪಾಕ್-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮ ನ್ ಹೆಡ್ಲಿಯ ಆಪ್ತ ರಾಣಾ ಎನ್ನಲಾಗಿದೆ.
ಹೆಡ್ಲಿಯನ್ನು ಸದ್ಯ ಅಮೆರಿಕದ ಜೈಲಿನಲ್ಲಿಡಲಾಗಿದ್ದು, ಮುಂಬೈ ಮೇಲಿನ ದಾಳಿಗೆ ರಾಣಾ ಆರ್ಥಿಕ ಮತ್ತು ಲಾಜಿಸ್ಟಿಕ್ ಬೆಂಬಲ ನೀಡಿದ್ದ ಎಂದು ಹೆಡ್ಲಿ ಪ್ರಮಾಣೀಕರಿಸಿದ್ದಾನೆ. ರಾಣಾ ಪಾಕಿಸ್ತಾನದ ಗುಪ್ತಚರ ಇಲಾಖೆ, ಇಂಟರ್ ಸರ್ವೀಸಸ್ ಇಂಟಲಿಜೆನ್ಸ್, ಪಾಕ್ ಸೇನೆ ಮತ್ತು ಲಷ್ಕರ್-ಇ-ತೊಯ್ಬಾ ಸಂಘಟನೆಯ ಜೊತೆ ಕೈಜೋಡಿಸಿ, ಮುಂಬೈ ದಾಳಿಗೆ ಕಾರಣನಾಗಿದ್ದಾನೆ ಎಂದು ಭಾರತದ ತನಿಖಾ ಸಂಸ್ಥೆ ಆರೋಪಿಸಿದೆ.