ಸುದ್ದಿಗಳು

ಸಿಸೋಡಿಯಾ ಅವರ ಅಫಿಡವಿಟ್‌ ಅನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಕ್ಕೆ ದೆಹಲಿ ಸರ್ಕಾರದ ವಿರುದ್ಧ ಕೇಂದ್ರ ಕೆಂಡ

Bar & Bench

ದೆಹಲಿಯ ಆಮ್‌ ಆದ್ಮಿ ಪಕ್ಷದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿರುವ ಮನೀಷ್‌ ಸಿಸೋಡಿಯಾ ಅವರ ಅಫಿಡವಿಟ್‌ ಅನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸುವುದಕ್ಕೂ ಮುನ್ನ ಮಾಧ್ಯಮಗಳಿಗೆ ಸೋರಿಕೆ ಮಾಡಲಾಗಿದೆ ಎಂದು ಆಪ್‌ ಸರ್ಕಾರದ ವಿರುದ್ಧ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಿಡಿಕಾರಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ನೇತೃತ್ವದ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಪೀಠದ ಮುಂದೆ ಹಾಜರಾದ ಕೇಂದ್ರ ಸರ್ಕಾರದ ವಕೀಲರು ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸುವುದಕ್ಕೂ ಮುನ್ನ ಮಾಧ್ಯಮಗಳಿಗೆ ಹಂಚಿಕೆ ಮಾಡಲಾಗಿದೆ ಎಂದರು.

“ಇದು ಸರಿಯಾದ ಕ್ರಮವಲ್ಲ. ಅಫಿಡವಿಟ್‌ ಅನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಕ್ಕೂ ಮುನ್ನ ಮಾಧ್ಯಮಗಳಿಗೆ ಹಂಚಿಕೆ ಮಾಡಿರುವುದು ರಾಜಕೀಯ ಪ್ರಚಾರವಾಗಿದೆ” ಎಂದರು.

ಇದಕ್ಕೆ ಆಕ್ಷೇಪಿಸಿದ ದೆಹಲಿ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು “ನಾವು ಒಂದೇ ಒಂದು ಕಾಪಿಯನ್ನು ಮಾಧ್ಯಮಗಳಿಗೆ ನೀಡಿಲ್ಲ. ಮಾಧ್ಯಮಗಳಿಗೆ ಅಫಿಡವಿಟ್‌ ಹೇಗೆ ಸಿಗುತ್ತದೆ ಎಂಬುದು ನಮಗೆ ಗೊತ್ತಿದೆ” ಎಂದರು.

ಎಎಪಿ ಸರ್ಕಾರಕ್ಕೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸಹಕಾರ ನೀಡದೇ ಇರುವುದರಿಂದ ಆಡಳಿತ ಸಮಸ್ಯೆಯಾಗುತ್ತಿರುವ ಕುರಿತಾದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ವಾಗ್ವಾದ ನಡೆಯಿತು.

ಆಗ ಪೀಠವು “ನಾವು ಪ್ರತಿಕ್ರಿಯೆ ದಾಖಲಿಸುವಂತೆ ಈಗ ಹೇಳುವುದಿಲ್ಲ. ಈಗ ಹಾಗೆ ಹೇಳಿದರೆ ಕೊನೆಯ ದಿನದವರೆಗೆ ಅಫಿಡವಿಟ್‌ಗಳನ್ನು ಸಲ್ಲಿಸುತ್ತಾರೆ.. ಸದ್ಯಕ್ಕೆ ನಾವು ಮನವಿಗಳನ್ನು ನಿಲ್ಲಿಸುತ್ತೇವೆ , ಸಾಂವಿಧಾನಿಕ ಪೀಠವು ಪ್ರಕರಣದ ವಿಚಾರಣೆ ನಡೆಸಲಿದೆ. ಪ್ರತಿವಾದಿಗಳು ಸದ್ಯಕ್ಕೆ ಅಫಿಡವಿಟ್‌ ಸಲ್ಲಿಸುವ ಅಗತ್ಯವಿಲ್ಲ” ಎಂದಿತು.

ದೆಹಲಿಯಲ್ಲಿ ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆ ಕುರಿತು ಯಾವ ಸರ್ಕಾರಕ್ಕೆ ಆಡಳಿತಾತ್ಮಕ ನಿಯಂತ್ರಣ ಇರಬೇಕು ಎಂಬುದರ ಬಗ್ಗೆ ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವೆ ವಿವಾದ ಇದೆ. ಕೇಂದ್ರ ಸರ್ಕಾರದ ಕೋರಿಕೆಯ ಹಿನ್ನೆಲೆಯಲ್ಲಿ ತ್ರಿಸದಸ್ಯ ಪೀಠವು ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.