Supreme Court, Jammu and Kashmir
Supreme Court, Jammu and Kashmir 
ಸುದ್ದಿಗಳು

ಕಾಶ್ಮೀರದಲ್ಲಿ ಕಲ್ಲು ತೂರಾಟ, ಬಂದ್, ಉಗ್ರರ ಜಾಲ ಈಗ ಇಲ್ಲ: ಸುಪ್ರೀಂನಲ್ಲಿ 370ನೇ ವಿಧಿ ರದ್ದತಿ ಸಮರ್ಥಿಸಿದ ಕೇಂದ್ರ

Bar & Bench

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು2019ರಲ್ಲಿ  ರದ್ದುಗೊಳಿಸಿದ್ದ ತನ್ನ ನಿರ್ಧಾರ ಸಮರ್ಥಿಸಿ ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಹೊಸ ಅಫಿಡವಿಟ್ ಸಲ್ಲಿಸಿದೆ.

ಮೂರು ವರ್ಷಗಳ ನಂತರ ಇಂದು (ಮಂಗಳವಾರ) ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತಿದ್ದು ಅದಕ್ಕೂ ಮುನ್ನಾ ದಿನ ಅಫಿಡವಿಟ್ ಸಲ್ಲಿಸಲಾಗಿದೆ.

ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದುಪಡಿಸಿದ ದಿನದಿಂದ ಕೇಂದ್ರಾಡಳಿತ ಪ್ರದೇಶ ಸ್ಥಿರತೆ ಮತ್ತು ಪ್ರಗತಿ ಕಂಡಿದ್ದು ಕಲ್ಲು ತೂರಾಟ ಈಗ ನಡೆಯುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸಲ್ಲಿಸಿರುವ ಪ್ರತಿ-ಅಫಿಡವಿಟ್‌ ಒತ್ತಿ ಹೇಳಿದೆ.

ಅಫಿಡವಿಟ್‌ನ ಪ್ರಮುಖ ಸಂಗತಿಗಳು

  • ಮೂರು ದಶಕಗಳ ಪ್ರಕ್ಷುಬ್ಧತೆ ನಂತರ ಪ್ರದೇಶದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ.

  • ಕಳೆದ ಮೂರು ವರ್ಷಗಳಲ್ಲಿ ಶಾಲಾ ಕಾಲೇಜುಗಳು ಸೇರಿದಂತೆ ಸಾರ್ವಜನಿಕ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ.

  • ಮುಷ್ಕರ, ಕಲ್ಲು ತೂರಾಟ ಹಾಗೂ ಬಂದ್‌ ಈಗ ಇತಿಹಾಸ ಸೇರಿದ ಸಂಗತಿಗಳು.

  • ವಿಧಿ ರದ್ದುಪಡಿಸಿದ ನಂತರ ಯಾವುದೇ ಕಲ್ಲು ತೂರಾಟದ ಘಟನೆಗಳು ನಡೆದಿಲ್ಲ.

  • ಶಿಕ್ಷಣ ಹಕ್ಕು ಕಾಯಿದೆಯ ಲಾಭ ಈಗ ಜಮ್ಮು ಕಾಶ್ಮೀರಕ್ಕೂ ದೊರೆಯುತ್ತಿದ್ದು ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಅನ್ವಯವಾಗುತ್ತಿದೆ.

  • ವಿಧಿ ರದ್ದುಗೊಳಿಸಿರುವುದರಿಂದ ಉಗ್ರ ಭಯೋತ್ಪಾದನಾ ಜಾಲ ತೊಡೆದುಹಾಕಲು ಮತ್ತು ಜಿಲ್ಲಾ ಅಭಿವೃದ್ಧಿ ಮಂಡಳಿಗಳಿಗೆ ಸುಗಮ ಚುನಾವಣೆ ನಡೆಸುವ ಮೂಲಕ ಮೂರು ಹಂತದ ಪಂಚಾಯತ್‌ ರಾಜ್‌ ವ್ಯವಸ್ಥೆ ಜಾರಿಗೊಳಿಸಲು ಸಾಧ್ಯವಾಗಿದೆ.

  • ವಿಧಿ ರದ್ದತಿ ಬಳಿಕ ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾಶ್ಮೀರಿ, ಡೋಗ್ರಿ, ಉರ್ದು ಮತ್ತು ಹಿಂದಿ ಭಾಷೆಗಳನ್ನು ಕೂಡ ಅಧಿಕೃತ ಭಾಷೆಯಾಗಿ ಸೇರಿಸಲಾಗಿದೆ.

ವಿಧಿ ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ 20ಕ್ಕೂ ಹೆಚ್ಚು ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್ ಸಲ್ಲಿಸಲಾಗಿದೆ.