Supreme Court of India
Supreme Court of India 
ಸುದ್ದಿಗಳು

ಬೇನಾಮಿ ವ್ಯವಹಾರ ನಿಷೇಧ ಕಾಯಿದೆ ನಿಯಮಾವಳಿ ರದ್ದು: ಸುಪ್ರೀಂಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಕೇಂದ್ರ

Bar & Bench

ಬೇನಾಮಿ ವ್ಯವಹಾರ (ನಿಷೇಧ) ಕಾಯಿದೆ - 1988 ಮತ್ತು 2016ರ ತಿದ್ದುಪಡಿ ಕಾಯಿದೆಯ ಹಲವು ನಿಯಮಾವಳಿಗಳನ್ನು ಅಸಾಂವಿಧಾನಿಕ ಎಂದು ಘೋಷಿಸಿ ಅವುಗಳನ್ನು ರದ್ದುಪಡಿಸಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಂಗಳವಾರ ಅರ್ಜಿ ಸಲ್ಲಿಸಿದೆ.

ಪ್ರಕರಣವನ್ನು ಮಂಗಳವಾರ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಅವರೆದುರು ಪ್ರಸ್ತಾಪಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪ್ರಕರಣವನ್ನು ಮುಕ್ತ ನ್ಯಾಯಾಲಯ ವಿಚಾರಣೆಗೆ ತೆಗೆದುಕೊಳ್ಳಲು ಕೋರಿದರು.

“ಇದೊಂದು ಅಪರೂಪದ ಮನವಿ. ಮರುಪರಿಶೀಲನಾ ಅರ್ಜಿಯನ್ನು ಮುಕ್ತ ನ್ಯಾಯಾಲಯದಲ್ಲಿ ಆಲಿಸಬೇಕು ಎಂದು ನಾವು ಕೋರುತ್ತಿದ್ದೇವೆ. ಈ ತೀರ್ಪಿನಿಂದಾಗಿ ಬೇನಾಮಿ ಕಾಯಿದೆಯಲ್ಲಿನ ಪ್ರಶ್ನಿಸದೆ ಇರುವ ಕೆಲವು ನಿಬಂಧನೆಗಳ ಬಗ್ಗೆಯೂ ಸಹ ಅನೇಕ ಅದೇಶಗಳನ್ನು ನೀಡಲಾಗುತ್ತಿದೆ. ಉದಾಹರಣೆಗೆ ಪೂರ್ವಾನ್ವಯತೆಯ ಬಗ್ಗೆ... ಈ ಹಿಂದೆ ತೀರ್ಪು ನೀಡಿದಾಗ ಪರಿಶೀಲಿಸಿರಲಿಲ್ಲ” ಎಂದು ಮೆಹ್ತಾ ವಾದಿಸಿದರು. ಈ ಹಂತದಲ್ಲಿ ಸಿಜೆಐ, ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದರು.

ಕೇಂದ್ರ ಸರ್ಕಾರ ಮರುಪರಿಶೀಲಿಸಲು ಕೋರಿರುವ ತೀರ್ಪನ್ನು ಕಳೆದ ಆಗಸ್ಟ್‌ನಲ್ಲಿ ಅಂದಿನ ಸಿಜೆಐ ಎನ್‌ ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠ ನೀಡಿತ್ತು. 2016ರ ತಿದ್ದುಪಡಿ ಕಾಯಿದೆಯ ಸೆಕ್ಷನ್ 5 ದಂಡನಾತ್ಮಕ ಸ್ವರೂಪ ಹೊಂದಿದ್ದು ಅದನ್ನು ಭವಿಷ್ಯವರ್ತಿಯಾಗಿ ಮಾತ್ರ ಅನ್ವಯಿಸಬಹುದೇ ಹೊರತು ಪೂರ್ವಾನ್ವಯವಾಗುವ ರೀತಿಯಲ್ಲಿ ಅಲ್ಲ ಎಂದು ಆ ತೀರ್ಪಿನಲ್ಲಿ ತಿಳಿಸಲಾಗಿತ್ತು.

2016 ರ ತಿದ್ದುಪಡಿ ಕಾಯಿದೆಗೆ ಮುಂಚಿತವಾಗಿ ಇದ್ದ 1988ರ ತಿದ್ದುಪಡಿ ಮಾಡದ ಕಾಯಿದೆಯ ಸೆಕ್ಷನ್ 5 ರ ಅಡಿಯಲ್ಲಿ ಆಸ್ತಿ ಮುಟ್ಟುಗೋಲು ನಿಬಂಧನೆಯು ಸ್ಪಷ್ಟವಾಗಿ ಅನಿಯಂತ್ರಿತವಾಗಿರುವುದರಿಂದ ಅದು ಅಸಾಂವಿಧಾನಿಕ ಎಂದು ನ್ಯಾಯಾಲಯ ಹೇಳಿತ್ತು.

ಪರಿಣಾಮವಾಗಿ, ಸಂಬಂಧಪಟ್ಟ ಅಧಿಕಾರಿಗಳು 2016ರ ಕಾಯಿದೆ ಜಾರಿಗೆ ಬರುವ ಮೊದಲು ಅಂದರೆ ಅಕ್ಟೋಬರ್ 25, 2016ಕ್ಕೂ ಮೊದಲಿನ ವಹಿವಾಟುಗಳಿಗೆ ಕ್ರಿಮಿನಲ್ ಮೊಕದ್ದಮೆ ಅಥವಾ ಮುಟ್ಟುಗೋಲು ಪ್ರಕ್ರಿಯೆಗಳನ್ನು ಪ್ರಾರಂಭಿಸುವಂತಿಲ್ಲ ಅಥವಾ ಮುಂದುವರೆಸುವಂತಿಲ್ಲ ಎಂದು ಅದು ವಿವರಿಸಿತ್ತು.

ಆದ್ದರಿಂದ, ಅಕ್ಟೋಬರ್ 2016ರ ಮೊದಲಿನ ವಹಿವಾಟುಗಳಿಗೆ ಸಂಬಂಧಿಸಿದಂತೆ ಪ್ರಾರಂಭಿಸಲಾದ ಎಲ್ಲಾ ಕಾನೂನು ಕ್ರಮಗಳು ಅಥವಾ ಜಪ್ತಿ ಪ್ರಕ್ರಿಯೆಗಳನ್ನು ನ್ಯಾಯಾಲಯ ರದ್ದುಗೊಳಿಸಿತ್ತು.

1988ರ ತಿದ್ದುಪಡಿ ಮಾಡದ ಕಾಯಿದೆಯ ಸೆಕ್ಷನ್ 3(2) ಸ್ಪಷ್ಟವಾಗಿ ಮನಸೋಇಚ್ಛೆಯಿಂದ ಕೂಡಿರುವುದಕ್ಕಾಗಿ ಅಸಾಂವಿಧಾನಿಕವಾಗಿದೆ ಎಂದು ಪೀಠ ನುಡಿದಿತ್ತು. ಪರಿಣಾಮವಾಗಿ, ಸಂವಿಧಾನದ 20 (1) ನೇ ವಿಧಿಯನ್ನು ಉಲ್ಲಂಘಿಸುವ ಕಾರಣಕ್ಕೆ 2016ರ ಕಾಯಿದೆಯ ಸೆಕ್ಷನ್ 3 (2) ಅಸಾಂವಿಧಾನಿಕ ಎಂದು ಅದು ಪರಿಗಣಿಸಿತ್ತು. ಈ ಸೆಕ್ಷನ್‌ ಬೇನಾಮಿ ವಹಿವಾಟುಗಳನ್ನು ಅಪರಾಧೀಕರಿಸಿ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡುತ್ತದೆ.