ರಾಜ್ಯವು ತೀವ್ರ ಬರದಿಂದ ಸಂಕಷ್ಟಕ್ಕೆ ಸಿಲುಕಿದ್ದು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್) ಆರ್ಥಿಕ ನೆರವು ಬಿಡುಗಡೆ ಮಾಡಲು ಕೇಂದ್ರದ ಗೃಹ ಇಲಾಖೆಗೆ ನಿರ್ದೇಶಿಸಬೇಕು ಎಂದು ಕೋರಿ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಅರ್ಜಿಯು ರಜಾಕಾಲೀನ ಪೀಠದ ಮುಂದೆ ವಿಚಾರಣೆಗೆ ಬರಲಿದೆ ಎನ್ನಲಾಗಿದೆ.
ಸಂವಿಧಾನದ 32ನೇ ವಿಧಿಯ ಅಡಿ ರಿಟ್ ಅರ್ಜಿಯನ್ನು ಕರ್ನಾಟಕ ಸರ್ಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆ ಮಾಡಿದ್ದು, ಕೇಂದ್ರ ಗೃಹ ಇಲಾಖೆಯ ಕ್ರಮವು ಸಂವಿಧಾನದ 14 ಮತ್ತು 21ನೇ ವಿಧಿಯಡಿ ಕಲ್ಪಿಸಿರುವ ರಾಜ್ಯದ ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆಕ್ಷೇಪಿಸಿದೆ. ಅರ್ಜಿಯಲ್ಲಿ ಕೇಂದ್ರ ಗೃಹ, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು (ಎನ್‌ಡಿಎಂಎ) ಪ್ರತಿವಾದಿಗಳನ್ನಾಗಿಸಲಾಗಿದೆ.
ಬರದಿಂದ ರಾಜ್ಯದಲ್ಲಿ ರೂ.35,162.05 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದು, ಎನ್‌ಡಿಆರ್‌ಎಫ್‌ನಿಂದ ರಾಜ್ಯ ಸರ್ಕಾರವು ರೂ.18,171.44 ಕೋಟಿ ಆರ್ಥಿಕ ನೆರವು ಕೋರಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಬರ ಪರಿಹಾರ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಳ್ಳದ ಮತ್ತು ಸ್ವೇಚ್ಛೆಯಿಂದ ನಡೆದುಕೊಳ್ಳುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಸಂವಿಧಾನದ 32ನೇ ವಿಧಿಯಡಿ ಜನರ ಕಾನೂನುಬದ್ಧ ರಕ್ಷಕನಾದ (ಪೆರೆನ್ಸ್ ಪ್ಯಾಟ್ರೀ- parens patriae) ಕರ್ನಾಟಕ ಸರ್ಕಾರವು ತನ್ನ ಹೊಣೆಗಾರಿಕೆ ನಿಭಾಯಿಸುವ ನಿಟ್ಟಿನಲ್ಲಿ ನ್ಯಾಯಾಲಯದ ಮೆಟ್ಟಿಲೇರಿದೆ. ವಿಪತ್ತು ನಿರ್ವಹಣಾ ಕಾಯಿದೆ 2005, ಬರ ನಿರ್ವಹಣೆ ಕೈಪಿಡಿ ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿಯ ರಚನೆಯ ಮಾರ್ಗಸೂಚಿ ಮತ್ತು ಆಡಳಿತ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಅಡಿ ಕ್ರಮಕೈಗೊಳ್ಳದ ಕೇಂದ್ರ ಸರ್ಕಾರದ ಕ್ರಮ ಕಾನೂನುಬಾಹಿರ ಎಂದು ರಾಜ್ಯ ಸರ್ಕಾರ ಅರ್ಜಿಯಲ್ಲಿ ವಾದಿಸಿದೆ.
ವಿಪತ್ತು ನಿರ್ವಹಣಾ ಕೈಪಿಡಿಯ ಅಡಿ ಅಂತರ-ಸಚಿವಾಲಯ ಕೇಂದ್ರ ತಂಡ (ಐಎಂಸಿಟಿ) ವರದಿ ನೀಡಿದ ತಿಂಗಳ ಒಳಗೆ ಎನ್‌ಡಿಆರ್‌ಎಫ್‌ನಿಂದ ನೆರವು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಅಂತಿಮ ನಿರ್ಧಾರ ಕೈಗೊಳ್ಳಬೇಕು. ಐಎಂಸಿಟಿ ತಂಡವು 2023ರ ಅಕ್ಟೋಬರ್ 4ರಿಂದ 9ರವರೆಗೆ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಬರದ ಸಮಗ್ರ ವರದಿ ಸಲ್ಲಿಸಿ ಆರು ತಿಂಗಳಾದರೂ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ.
ರಾಜ್ಯದ 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಈ ಪೈಕಿ 196 ತಾಲ್ಲೂಕುಗಳು ಗಂಭೀರ ಬರ ಪೀಡಿತವಾಗಿದ್ದು, 27 ತಾಲ್ಲೂಕುಗಳು ಅರೆ ಬರಪೀಡತವಾಗಿವೆ. ಮಳೆಯ ಕೊರತೆಯಿಂದ ಬೆಳೆ ನಾಶವಾಗಿದ್ದು, ಅಂತರ್ಜಲ ಕುಸಿತವಾಗಿದೆ. ಇದರಿಂದ ದಿನ ಬಳಕೆ, ಕೃಷಿ ಹಾಗೂ ಕೈಗಾರಿಕೆಗೆ ನೀರು ಪೂರೈಕೆ ದುರ್ಲಭವಾಗಿದೆ. ಜಾನುವಾರುಗಳಿಗೆ ತೀವ್ರ ಸಮಸ್ಯೆಯಾಗಿದ್ದು, ರೈತರ ಬದುಕು ದಯನೀಯವಾಗಿದೆ. ಬರದಿಂದಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದ್ದು, ಆದಾಯ ನಷ್ಟ, ಉದ್ಯೋಗಕ್ಕೆ ಹಾನಿ ಸೇರಿದಂತೆ ರಾಜ್ಯದ ಆರ್ಥಿಕತೆ ಭಾರಿ ಹೊಡೆತ ನೀಡಿದೆ ಎಂದು ವಿವರಿಸಲಾಗಿದೆ.
ವಿಪತ್ತು ನಿರ್ವಹಣಾ ಕಾಯಿದೆ 2005ರ ಅಡಿ ರಾಜ್ಯ ಸರ್ಕಾರಗಳಿಗೆ ಆರ್ಥಿಕ ನೆರವು ನೀಡುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ. ಪ್ರಧಾನ ಮಂತ್ರಿ, ಗೃಹ ಮಂತ್ರಿ, ಕೃಷಿ ಮಂತ್ರಿ ಹಾಗೂ ಹಣಕಾಸು ಮಂತ್ರಿಯನ್ನು ಭೇಟಿ ಮಾಡಿ, ಹಲವು ಪತ್ರ ಬರೆದಿದ್ದರೂ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ಆಪಾದಿಸಲಾಗಿದೆ.
ಕೇಂದ್ರ ಗೃಹ ಇಲಾಖೆ ರಚಿಸಿರುವ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಉಪಸಮಿತಿಯು ಅಧ್ಯಕ್ಷರು ಕರ್ನಾಟಕಕ್ಕೆ ಎನ್‌ಡಿಆರ್‌ಎಫ್ ಅಡಿ ಆರ್ಥಿಕ ನೆರವು ನೀಡಲು ಶಿಫಾರಸ್ಸು/ಪ್ರಸ್ತಾವವನ್ನು 2023ರ ನವೆಂಬರ್ 20ರಂದೇ ಗೃಹ ಇಲಾಖೆಗೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಕೇಂದ್ರ ಗೃಹ ಇಲಾಖೆಯು ಉನ್ನತ ಮಟ್ಟದ ಸಮಿತಿಯ ಸಭೆ ನಡೆಸಿ ಪರಿಹಾರ ಬಿಡುಗಡೆ ಮಾಡುವ ನಿಟ್ಟಿನಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆಕ್ಷೇಪಿಸಲಾಗಿದೆ.
ಎನ್‌ಡಿಆರ್‌ಎಫ್‌ನಿಂದ ರಾಜ್ಯ ಸರ್ಕಾರವು ರೂ.18,171.44 ಕೋಟಿ ಪರಿಹಾರ ಕೋರಿದ್ದು, ಇದರಲ್ಲಿ ರೂ. 4663.12 ಕೋಟಿ ಬೆಳೆ ನಷ್ಟ, ರೂ. 12577.9 ಕೋಟಿ ದವಸ-ಧಾನ್ಯದ ರೂಪದಲ್ಲಿನ ಪರಿಹಾರ ಹಾಗೂ ರೂ. 566.78 ಕೋಟಿ ಕುಡಿಯುವ ನೀರಿಗೆ ಮತ್ತು 363.68 ಕೋಟಿ ಜಾನುವಾರುಗಳ ಮೇವಿಗೆ ಕೋರಿರುವ ಪರಿಹಾರ ಸೇರಿದೆ.