ED and Supreme Court
ED and Supreme Court 
ಸುದ್ದಿಗಳು

ಇ ಡಿ ನಿರ್ದೇಶಕ ಮಿಶ್ರಾ ಅಧಿಕಾರಾವಧಿ ಅ.15ರವರೆಗೆ ವಿಸ್ತರಿಸುವಂತೆ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಕೋರಿರುವುದೇಕೆ?

Bar & Bench

ಜಾರಿ ನಿರ್ದೇಶನಾಲಯದ (ಇ ಡಿ) ಹಾಲಿ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರು ಅಕ್ಟೋಬರ್ 15ರವರೆಗೆ ತಮ್ಮ ಹುದ್ದೆಯಲ್ಲಿ ಮುಂದುವರೆಯಲು ಅವಕಾಶ ನೀಡಬೇಕು. ಇದರಿಂದ ದೇಶದ ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ತನಿಖಾ ಕಾರ್ಯಾಚರಣೆ ನಡೆಸುತ್ತಿರುವ ಹಣಕಾಸು ಕ್ರಿಯಾ ಕಾರ್ಯಪಡೆಯ (ಎಫ್‌ಎಟಿಎಫ್‌) ತನಿಖೆ ಸುಗಮವಾಗುತ್ತದೆ ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಈ ನಿಟ್ಟಿನಲ್ಲಿ ಜಾರಿ ನಿರ್ದೇಶನಾಲಯಕ್ಕೆ ಹೊಸ ನಿರ್ದೇಶಕರನ್ನು ನೇಮಿಸಲು ಜುಲೈ 31ರವರೆಗೆ ಗಡುವು ನೀಡಿ ಸರ್ವೋಚ್ಚ ನ್ಯಾಯಾಲಯ ಜುಲೈ 11ರಂದು ನೀಡಿದ್ದ ತೀರ್ಪನ್ನು ಬದಲಿಸುವಂತೆ ಕೋರಿ ಸರ್ಕಾರ ಇಂದು ಮನವಿ ಸಲ್ಲಿಸಿದೆ.

ಎಫ್‌ಎಟಿಎಫ್‌ ಜಾಗತಿಕ ಮಟ್ಟದ ಅಂತರ್‌ ಸರ್ಕಾರಿ ಸಂಸ್ಥೆಯಾಗಿದ್ದು ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಆರ್ಥಿಕ ನೆರವು ಒದಗಿಸುವುದನ್ನು ತಡೆಯಲು ಅದು ಶಿಫಾರಸುಗಳನ್ನು ಮಾಡಿದೆ. ಭಾರತ ಸೇರಿದಂತೆ ಸುಮಾರು 200 ದೇಶಗಳು/ ಅಧಿಕಾರ ವ್ಯಾಪ್ತಿಗಳು ಈ ಮಾನದಂಡಗಳನ್ನು ಜಾರಿಗೆ ತರಲು ಬದ್ಧತೆ ಹೊಂದಿವೆ. ಹಾಗಾಗಿ ರಾಷ್ಟ್ರೀಯ ಹಿತಾಸಕ್ತಿ ನಿಟ್ಟಿನಲ್ಲಿ ಮಿಶ್ರಾ  ಅವರ  ಅಧಿಕಾರಾವಧಿಯನ್ನು ವಿಸ್ತರಿಸುವುದು ಅಗತ್ಯವಾಗಿದೆ ಎಂದು ಅರ್ಜಿ ವಿವರಿಸಿದೆ.

ಈ ಹಂತದಲ್ಲಿ ಜಾರಿ ನಿರ್ದೇಶನಾಲಯದ ನಾಯಕತ್ವದಲ್ಲಿ ಯಾವುದೇ ಪರಿವರ್ತನೆ ಮಾಡುವುದರಿಂದ ತನಿಖಾ ತಂಡಕ್ಕೆ (ಎಫ್‌ಎಟಿಎಫ್‌) ಅಗತ್ಯ ನೆರವು ಮತ್ತು ಸಹಕಾರ ನೀಡುವ ಇ ಡಿಯ ಸಾಮರ್ಥ್ಯ ಗಮನಾರ್ಹವಾಗಿ ದುರ್ಬಲಗೊಳ್ಳಲಿದ್ದು ದೇಶದ ಹಿತಾಸಕ್ತಿ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಈ ಪ್ರಯಾಸಕರ ಮತ್ತು ಸೂಕ್ಷ್ಮ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅವರನ್ನು (ಮಿಶ್ರಾ) ಅಧಿಕಾರದಲ್ಲಿ ಮುಂದುವರಿಸುವುದು ಅತ್ಯಗತ್ಯ ಎಂದು ಅರ್ಜಿ ವಿವರಿಸಿದೆ.

ಸುಪ್ರೀಂ ಕೋರ್ಟ್‌ ವಿಭಾಗೀಯ ಪೀಠ 2021ರಲ್ಲಿ ನೀಡಿದ್ದ ತೀರ್ಪಿಗೆ ವ್ಯತಿರಿಕ್ತವಾಗಿದೆ ಎಂಬ ಕಾರಣಕ್ಕೆ ಮಿಶ್ರಾ ಅವರಿಗೆ ನೀಡಲಾದ ಅಧಿಕಾರ ವಿಸ್ತರಣೆ ಆದೇಶವನ್ನು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ವಿಕ್ರಮ್ ನಾಥ್ ಹಾಗೂ ಸಂಜಯ್ ಕರೋಲ್ ಅವರಿದ್ದ ಪೀಠ ರದ್ದುಗೊಳಿಸಿತ್ತು. ಇದಕ್ಕೂಹಿಂದೆ ನೀಡಿದ್ದ ತೀರ್ಪಿನಲ್ಲಿ ನವೆಂಬರ್ 2021ರ ನಂತರ ಮಿಶ್ರಾ ಅವರ ಅಧಿಕಾರ ವಿಸ್ತರಿಸದಂತೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿತ್ತು.