ED Director Sanjay Kumar Mishra and Supreme Court 
ಸುದ್ದಿಗಳು

ಇ ಡಿ ನಿರ್ದೇಶಕ ಮಿಶ್ರಾ ಅಧಿಕಾರಾವಧಿ ವಿಸ್ತರಣೆ ಕೋರಿ ಮತ್ತೆ ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿದ ಕೇಂದ್ರ

ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ನ್ಯಾ. ಬಿ ಆರ್ ಗವಾಯಿ ನೇತೃತ್ವದ ಪೀಠದೆದುರು ಸಾಲಿಸಿಟರ್ ಜನರಲ್ ಕೋರಿದರು. ಆಗ ನ್ಯಾಯಾಲಯ ನಾಳೆ (ಗುರುವಾರ) ಮಧ್ಯಾಹ್ನ 3.30ಕ್ಕೆ ಅರ್ಜಿಯ ವಿಚಾರಣೆ ನಡೆಸಲು ಒಪ್ಪಿಗೆ ಸೂಚಿಸಿತು.

Bar & Bench

ಜುಲೈ 31ಕ್ಕೆ ಕೊನೆಯಾಗಬೇಕಿದ್ದ ಜಾರಿ ನಿರ್ದೇಶನಾಲಯದ ಹಾಲಿ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿಯನ್ನು ವಿಸ್ತರಿಸುವಂತೆ ಕೋರಿ ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ಪೀಠದೆದುರು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಕೋರಿದರು. ಆಗ ನ್ಯಾಯಾಲಯ ನಾಳೆ (ಗುರುವಾರ) ಮಧ್ಯಾಹ್ನ 3.30ಕ್ಕೆ ಅರ್ಜಿಯ ವಿಚಾರಣೆ ನಡೆಸಲು ಒಪ್ಪಿಗೆ ಸೂಚಿಸಿತು.

ಸುಪ್ರೀಂ ಕೋರ್ಟ್‌ ವಿಭಾಗೀಯ ಪೀಠ 2021ರಲ್ಲಿ ನೀಡಿದ್ದ ತೀರ್ಪಿಗೆ ವಿರುದ್ಧವಾಗಿದೆ ಎಂಬ ಕಾರಣಕ್ಕೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ವಿಕ್ರಮ್ ನಾಥ್ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠ ಮಿಶ್ರಾ ಅವರಿಗೆ ನೀಡಲಾದ ಅಧಿಕಾರ ವಿಸ್ತರಣೆ ಆದೇಶವನ್ನು ರದ್ದುಗೊಳಿಸಿತ್ತು. ತನ್ನ ಹಿಂದಿನ ತೀರ್ಪಿನಲ್ಲಿ ನವೆಂಬರ್ 2021ರ ನಂತರ ಮಿಶ್ರಾ ಅವರ ಅಧಿಕಾರ ವಿಸ್ತರಿಸದಂತೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿತ್ತು.

ಮಿಶ್ರಾ ಅವರು ನವೆಂಬರ್ 2018ರಲ್ಲಿ ಎರಡು ವರ್ಷಗಳ ಅವಧಿಗೆ ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಈ ಅವಧಿ ನವೆಂಬರ್ 2020ರಲ್ಲಿ ಮುಕ್ತಾಯಗೊಂಡಿತ್ತು. ಮೇ 2020ರಲ್ಲಿ, ಅವರು 60ರ ನಿವೃತ್ತಿ ವಯಸ್ಸನ್ನು ತಲುಪಿದ್ದರು.

ಆದರೂ, ನವೆಂಬರ್ 13, 2020ರಂದು, ಕಚೇರಿ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ ರಾಷ್ಟ್ರಪತಿಗಳು 2018ರ ಆದೇಶವನ್ನು ಪೂರ್ವಾನ್ವಯವಾಗುವಂತೆ ಮಾರ್ಪಡಿಸಿದ್ದಾರೆ ಎಂಬುದಾಗಿ ತಿಳಿಸಿ 'ಎರಡು ವರ್ಷಗಳ' ಅವಧಿಯನ್ನು 'ಮೂರು ವರ್ಷಗಳ' ಅವಧಿಗೆ ಬದಲಿಸಿರುವುದಾಗಿ ಹೇಳಿತ್ತು. ಇದನ್ನು ಸರ್ಕಾರೇತರ ಸಂಸ್ಥೆ ʼಕಾಮನ್ ಕಾಸ್ʼ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಸೆಪ್ಟೆಂಬರ್ 2021ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ರಾಷ್ಟ್ರಪತಿಗಳು ಮಾಡಿದ್ದ ಮಾರ್ಪಾಡುಗಳನ್ನು ಅನುಮೋದಿಸಿತ್ತಾದರೂ ಮಿಶ್ರಾ ಅವರ ಅಧಿಕಾರಾವಧಿ ವಿಸ್ತರಿಸುವುದರ ವಿರುದ್ಧ ತೀರ್ಪು ನೀಡಿತು.

ಈ ಹಿನ್ನೆಲೆಯಲ್ಲಿ ಕೇಂದ್ರ ವಿಚಕ್ಷಣಾ ಆಯೋಗ ಕಾಯಿದೆಗೆ ತಿದ್ದುಪಡಿ ಮಾಡುವ ಸುಗ್ರೀವಾಜ್ಞೆ ಹೊರಡಿಸಿದ ಕೇಂದ್ರ ಸರ್ಕಾರ ಇ ಡಿ ನಿರ್ದೇಶಕರ ಅಧಿಕಾರಾವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸುವ ಅಧಿಕಾರವನ್ನು ತನಗೆ ತಾನೇ ಕೊಟ್ಟುಕೊಂಡಿತು.

ಸಂಸತ್ತು ನಂತರ ಈ ನಿಟ್ಟಿನಲ್ಲಿ ಕಾಯಿದೆ ಅಂಗೀಕರಿಸಿ ಇ ಡಿ ನಿರ್ದೇಶಕರ ಅಧಿಕಾರಾವಧಿಯನ್ನು ವರ್ಷಕ್ಕೆ ಒಂದು ಬಾರಿಯಂತೆ ಗರಿಷ್ಠ 5 ವರ್ಷಗಳವರೆಗೆ ವಿಸ್ತರಿಸಲು ಅವಕಾಶ ನೀಡಿತು. ಈ ಕಾಯಿದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು.

ಕಳೆದ ಜುಲೈ 11ರಂದು ನೀಡಿದ ಆದೇಶದಲ್ಲಿ ಇ ಡಿ ನಿರ್ದೇಶಕರ ಅಧಿಕಾರಾವಧಿಯನ್ನು 5 ವರ್ಷಗಳವರೆಗೆ ವಿಸ್ತರಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುವ ಕೇಂದ್ರ ವಿಚಕ್ಷಣಾ ಆಯೋಗ ಕಾಯಿದೆಗೆ (ಸಿವಿಸಿ ಕಾಯಿದೆ) ಶಾಸಕಾಂಗ ಮಾಡಿದ್ದ ತಿದ್ದುಪಡಿಗಳನ್ನು ಎತ್ತಿ ಹಿಡಿಯಿತು. ಆದರೂ 2021 ರ ತೀರ್ಪಿಗೆ ವ್ಯತಿರಿಕ್ತವಾಗಿ ಇದ್ದ ಕಾರಣಕ್ಕಾಗಿ ಮಿಶ್ರಾ ಅವರಿಗೆ ನೀಡಲಾದ ವಿಸ್ತರಣೆಯನ್ನು ಅದು ರದ್ದುಗೊಳಿಸಿತು. ಜುಲೈ 31ರೊಳಗೆ ಹೊಸ ನಿರ್ದೇಶಕರನ್ನು ನೇಮಕ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆಗ ಅದು ಸೂಚಿಸಿತ್ತು.