Delhi Signboard
Delhi Signboard 
ಸುದ್ದಿಗಳು

ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇರುವಾಗಲೇ ಲೆ. ಗವರ್ನರ್ ವಿರುದ್ಧ ಕೇಜ್ರಿವಾಲ್ ಪ್ರತಿಭಟನೆ: ಕೇಂದ್ರದ ಆಕ್ಷೇಪ

Bar & Bench

ದೆಹಲಿಯ ಆಮ್‌ ಆದ್ಮಿ ಪಕ್ಷದ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಿನ ಅಧಿಕಾರ ಸಂಘರ್ಷಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವಾಗಲೇ ಲೆ. ಗವರ್ನರ್‌ ವಿನಯ್ ಕುಮಾರ್ ಸಕ್ಸೇನಾ ಅವರ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಡೆಸಿದ ಪ್ರತಿಭಟನಾ ಮೆರವಣಿಗೆಗೆ ಕೇಂದ್ರ ಸರ್ಕಾರ ಮಂಗಳವಾರ ಆಕ್ಞೇಪ ವ್ಯಕ್ತಪಡಿಸಿದೆ.

ಇಂತಹ ಪ್ರತಿಭಟನೆ, ಪ್ರಹಸನಗಳು ಕಾನೂನು ವಾದಗಳಿಗೆ ಪೂರಕವಾಗುವುದಿಲ್ಲ ಎಂದು ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು.

"ಒಂದು ಕೇವಿಯೆಟ್‌ ಇದೆ. ನಾನು ಕಾನೂನು ವಾದಗಳಿಗೆ ಮಾತ್ರ ಸೀಮಿತವಾಗುತ್ತೇನೆ. ವಿಚಾರಣೆ ನಡೆಯುತ್ತಿರುವಾಗಲೇ ಕೆಲವು ಘಟನೆಗಳು ನಡೆಯುತ್ತಿವೆ, ಕೆಲವು ಪ್ರತಿಭಟನೆ ಇತ್ಯಾದಿಗಳು ನಡೆಯುತ್ತಿವೆ. ನೀವು ಸತ್ಯ ತಿಳಿದುಕೊಳ್ಳಲು ಬಯಸಿದರೆ, ನಾವು ಮುಕ್ತರಾಗಿ ಹೇಳುತ್ತೇವೆ. ಪ್ರತಿಭಟನೆ ಅಥವಾ ಪ್ರಹಸನಗಳು ವಾದಗಳಿಗೆ ಪೂರಕವಾಗುವುದಿಲ್ಲ" ಎಸ್ ಜಿ ಮೆಹ್ತಾ ಹೇಳಿದರು.

ತರಬೇತಿಗಾಗಿ 30 ಶಿಕ್ಷಕರನ್ನು ಫಿನ್‌ಲ್ಯಾಂಡ್‌ಗೆ ಕಳುಹಿಸುವ ದೆಹಲಿ ಸರ್ಕಾರದ ಪ್ರಸ್ತಾವನೆಯನ್ನು ತಕ್ಷಣವೇ ಅನುಮೋದಿಸಬೇಕೆಂದು ಒತ್ತಾಯಿಸಿ ಕೇಜ್ರಿವಾಲ್ ಸೋಮವಾರ ಎಎಪಿಯ ಸಚಿವರು, ಶಾಸಕರು ಮತ್ತು ಕಾರ್ಯಕರ್ತರೊಂದಿಗೆ ಲೆಫ್ಟಿನೆಂಟ್‌ ಗವರ್ನರ್‌ ನಿವಾಸದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

"ದೆಹಲಿಯಲ್ಲಿ ಏನಾಗುತ್ತಿದೆ ಎಂಬುದು ಜಗತ್ತಿಗೆ ಗೋಚರಿಸುತ್ತಿದ್ದು ಇದು ಮುಜುಗರದ ವಿಚಾರ" ಎಂದು ಎಸ್‌ಜಿ ಮೆಹ್ತಾ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಅಧಿಕಾರಿಗಳ ವರ್ಗಾವಣೆ ಮತ್ತು ನಿಯುಕ್ತಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವೆ ಇರುವ ಸಂಘರ್ಷ ಹಲವು ದಿನಗಳ ಹಿಂದೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎಂ ಆರ್ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಹಾಗೂ ಪಿ ಎಸ್ ನರಸಿಂಹ ಅವರಿರುವ ಸಾಂವಿಧಾನಿಕ ಪೀಠ ಪ್ರಕರಣದ ವಿಚಾರಣೆ ನಡೆಸುತ್ತಿದೆ.

ಮಂಗಳವಾರದ ವಿಚಾರಣೆ ವೇಳೆ ಮೆಹ್ತಾ ಅವರು ಕೆಲವು ಸುದ್ದಿ ಲೇಖನಗಳನ್ನು ಉಲ್ಲೇಖಿಸಿ ಚರ್ಚೆಯನ್ನು ಈ ಮಟ್ಟಕ್ಕೆ ಇಳಿಸಲು ಬಯಸುವುದಿಲ್ಲ ಎಂದು ಹೇಳಿದರು. ನಂತರ ಪೀಠವು ದೆಹಲಿ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ, ಪ್ರಕರಣದಲ್ಲಿ ಎತ್ತಲಾಗಿರುವ ಪ್ರಶ್ನೆಯು ಸಂವಿಧಾನದ ವ್ಯಾಖ್ಯಾನದ ಮೇಲಿದೆ. ಇದನ್ನು ನಾವು ಸ್ಪಷ್ಟಪಡಿಸುತ್ತಿದ್ದೇವೆ ಎಂದು ಹೇಳಿತು.