ಸಂಬಂಧಿತ ವ್ಯಕ್ತಿಯ ವಿಚಾರಣೆ ನಡೆಸದೆ ಸಾಗರೋತ್ತರ ಭಾರತೀಯ ಪೌರತ್ವವನ್ನು (ಒಸಿಐ) ನಿರಂಕುಶವಾಗಿ ರದ್ದುಗೊಳಿಸಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಜಾನ್ ರಾಬರ್ಟ್ ರಫ್ಟನ್ III vs ಯೂನಿಯನ್ ಆಫ್ ಇಂಡಿಯಾ & ಅದರ್ಸ್].
ತೀರ್ಪು ನೀಡಿದ ನ್ಯಾಯಾಧೀಶ ಸಚಿನ್ ದತ್ತ ಅವರು, ಬಾಧಿತ ವ್ಯಕ್ತಿಗೆ ವಿಚಾರಣೆ ನಡೆಸಲು ಸಮಂಜಸವಾದ ಅವಕಾಶವನ್ನು ಒದಗಿಸದೆ ಯಾವುದೇ ಒಸಿಐ ಕಾರ್ಡ್ ಅನ್ನು ರದ್ದುಗೊಳಿಸಲಾಗುವುದಿಲ್ಲ ಎಂದು 1955ರ ಪೌರತ್ವ ಕಾಯ್ದೆಯ ಸೆಕ್ಷನ್ 7ಡಿ ತಿಳಿಸುತ್ತದೆ ಎಂದು ಹೇಳಿದರು.
ಮುಂದುವರೆದು ತಮ್ಮ ಮಾರ್ಚ್ 28ರ ಆದೇಶದಲ್ಲಿ ಅವರು, “ವಿಚಾರಣೆ ನಡೆಸಲು ಸಮಂಜಸವಾದ ಅವಕಾಶ ಎಂಬ ಅಭಿವ್ಯಕ್ತಿಯನ್ನು ಸುಪ್ರೀಂ ಕೋರ್ಟ್ ಹಲವಾರು ಪ್ರಕರಣಗಳಲ್ಲಿ ವ್ಯಾಖ್ಯಾನಿಸಿದೆ. ಸಂಬಂಧಿತ ಆರೋಪಗಳನ್ನು ಎದುರಿಸಲು ಪರಿಣಾಮಕಾರಿ ಅವಕಾಶವನ್ನು ನೀಡುವುದನ್ನು ಸಹ ಇದು ಒಳಗೊಳ್ಳುತ್ತದೆ ಎಂಬುದು ಇತ್ಯರ್ಥವಾದ ಅಂಶವಾಗಿದೆ. ಇದು, ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಲು ಕಾರಣವಾದ ಅಂಶಗಳ ಬಗ್ಗೆ ತಿಳಿಸುವ ಹಕ್ಕನ್ನು ಸಹ ಒಳಗೊಂಡಿರುತ್ತದೆ,”ಎಂದು ತಿಳಿಸಿದ್ದಾರೆ.
ವಿದೇಶಿಯರ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಕಪ್ಪುಪಟ್ಟಿಗೆ ಸೇರಿಸುವುದು ಎಲ್ಲಾ ರೀತಿಯ ವೀಸಾಗಳಿಗೂ ಅನ್ವಯವಾಗುತ್ತದೆ, ಇದರಲ್ಲಿ ಅರ್ಹ ವಿದೇಶಿ ಪ್ರಜೆಗಳಿಗೆ ನೀಡಲಾಗುವ ಜೀವಮಾನ ಪರ್ಯಂತ ಅನ್ವಯವಾಗುವ ಒಸಿಐ ವೀಸಾ ಕೂಡಾ ಸೇರುತ್ತದೆ ಎಂಬ ಸರ್ಕಾರದ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.
ಕಪ್ಪುಪಟ್ಟಿಗೆ ಸೇರಿಸುವ ವಿಚಾರದಲ್ಲಿ ಸಂಬಂಧಿತ ವ್ಯಕ್ತಿಯನ್ನು ಆಲಿಸುವುದಿರಲಿ ಅವರಿಗೆ ಕಾರಣ ತಿಳಿಸಬೇಕಾದ ಹೊಣೆಗಾರಿಕೆಯೂ ಸರ್ಕಾರದ ಮೇಲಿಲ್ಲ ಎಂದು ಸರ್ಕಾರವು ಪ್ರಬಲವಾಗಿ ವಾದಿಸಿತ್ತು. ಆದರೆ. ಇದು ಈ ಹಿಂದೆ ಹೈಕೋರ್ಟ್ ನೀಡಿರುವ ಖಾಲಿದ್ ಜಹಾಂಗೀರ್ ಖಾಜಿ ಅವರ ಪರವಾಗಿ ಪವರ್ ಆಫ್ ಅಟಾರ್ನಿ ಮೂಲಕ ಶ್ರೀಮತಿ ಫರೀದಾ ಸಿದ್ದಿಕಿ ವರ್ಸಸ್ ಭಾರತ ಒಕ್ಕೂಟ ಪ್ರಕರಣದಲ್ಲಿ ಹೈಕೋರ್ಟ್‌ನ ಹಿಂದಿನ ತೀರ್ಪಿಗೆ ಈ ವಾದಗಳು ವಿರುದ್ಧವಾಗಿವೆ ಎಂದು ನ್ಯಾಯಮೂರ್ತಿ ದತ್ತ ಹೇಳಿದರು.
"1946 ರ ವಿದೇಶಿಯರ ಕಾಯ್ದೆಯ ಸೆಕ್ಷನ್ 3 ಸ್ಪಷ್ಟವಾಗಿ ವಿಚಾರಣೆಗೆ ಅವಕಾಶ ನೀಡದಿದ್ದರೂ, ಪೌರತ್ವ ಕಾಯ್ದೆಯ ಸೆಕ್ಷನ್ 7-D ಅಡಿಯಲ್ಲಿನ ಕಾರ್ಯವಿಧಾನದ ಸುರಕ್ಷತಾ ಕ್ರಮಗಳನ್ನು ಒಸಿಐ ಕಾರ್ಡ್‌ದಾರರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಹೊಂದಾಣಿಕೆಯಿಂದ ಓದಬೇಕು ಎಂದು ಈ ನ್ಯಾಯಾಲಯವು (ಖಾಲಿದ್ ಜಹಾಂಗೀರ್ ಅವರ ಲೇಖನದಲ್ಲಿ) ಪುನರುಚ್ಚರಿಸಿದೆ. ವಿಶೇಷವಾಗಿ ಅವರನ್ನು (ಒಸಿಐ ಕಾರ್ಡ್‌ದಾರರನ್ನು) ಕಪ್ಪುಪಟ್ಟಿಗೆ ಸೇರಿಸುವುದರಿಂದ ಪೌರತ್ವ ಕಾಯ್ದೆಯಡಿಯಲ್ಲಿ ಅವರ ಹಕ್ಕುಗಳು ಪರಿಣಾಮಕಾರಿಯಾಗಿ ನಿರಾಕರಿಸಲ್ಪಡುತ್ತವೆ. ಒಸಿಐ ಚೌಕಟ್ಟಿನಲ್ಲಿ ಹುದುಗಿರುವ ಕಾರ್ಯವಿಧಾನದ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಲು ವಿದೇಶಿಯರ ಕಾಯ್ದೆಯನ್ನು ಬಳಸದಂತೆ ನ್ಯಾಯಾಲಯವು ಎಚ್ಚರಿಕೆ ನೀಡಿತು," ಎಂದು ನ್ಯಾಯಮೂರ್ತಿ ದತ್ತಾ ವಿವರಿಸಿದರು.
ಜಾನ್ ರಾಬರ್ಟ್ ರಫ್ಟನ್ III ಎಂಬುವರು ಕ್ರೈಸ್ತ ಧರ್ಮ ಮತಪ್ರಚಾರದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಹೇಳಿ ಅವರ ಒಸಿಐ ಕಾರ್ಡ್ ಅನ್ನು ರದ್ದುಗೊಳಿಸಿ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರನ್ನು ಗಡೀಪಾರು ಮಾಡಿದ್ದ ಸರ್ಕಾರದ ನಿರ್ಧಾರದ ವಿರುದ್ಧ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸುವಾಗ ನ್ಯಾಯಾಲಯವು ಈ ಅವಲೋಕನಗಳನ್ನು ಮಾಡಿತು.
ಅಂತಿಮವಾಗಿ ನ್ಯಾಯಾಲಯವು, ಅರ್ಜಿದಾರ ರಫ್ಟನ್ ಅವರನ್ನು ಕಪ್ಪು ಪಟ್ಟಿಗೆ ಸೇರಿಸುವುದರ ಸಂಬಂಧ ಮೊದಲು ಅವರಿಗೆ ಶೋಕಾಸ್ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ಅವರ ಪ್ರತಿಕ್ರಿಯೆಯನ್ನು ಪಡೆದು, ಅವರಿಗೆ ವಿಚಾರಣೆಯ ಅವಕಾಶವನ್ನು ಕಲ್ಪಿಸಿದ ನಂತರ ಆದೇಶವನ್ನು ಹೊರಡಿಸುವಂತೆ ಆದೇಶಿಸಿತು.