Supreme Court of India
Supreme Court of India 
ಸುದ್ದಿಗಳು

ಮತಾಂತರಗೊಂಡ ದಲಿತರಿಗೆ ಪರಿಶಿಷ್ಟ ಜಾತಿ ಸೌಲಭ್ಯ ಕಲ್ಪಿಸುವುದಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ವಿರೋಧ

Bar & Bench

ದಲಿತ ಕ್ರಿಶ್ಚಿಯನ್ನರು ಅಥವಾ ದಲಿತ ಮುಸ್ಲಿಮರು ದಲಿತ ಹಿಂದೂಗಳಂತೆ ದಬ್ಬಾಳಿಕೆ  ಎದುರಿಸುತ್ತಿದ್ದಾರೆ ಎನ್ನುವ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಹೀಗಾಗಿ ಪರಿಶಿಷ್ಟ ಜಾತಿಗಳಿಗೆ ಮೀಸಲಾದ ಸವಲತ್ತು ಪಡೆಯಲು ಮತಾಂತರಗೊಂಡ ದಲಿತರಿಗೆ ಅವಕಾಶ ನೀಡಬಾರದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ಸಿಪಿಐಎಲ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ]

ಹಿಂದೂ, ಬೌದ್ಧ ಅಥವಾ ಸಿಖ್ ಧರ್ಮಕ್ಕೆ ಸೇರಿದ ಸಮುದಾಯಗಳಿಗೆ ಮಾತ್ರ ಪರಿಶಿಷ್ಟ ಜಾತಿಯ ಸ್ಥಾನಮಾನ  ನೀಡುವ 1950ರ ಸಂವಿಧಾನದ (ಪರಿಶಿಷ್ಟ ಜಾತಿಗಳು) ಆದೇಶ ಅಸಾಂವಿಧಾನಿಕವಲ್ಲ ಎಂದು ಅದು ತಿಳಿಸಿತು.

ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವ ದಲಿತ ಸಮುದಾಯಗಳ ಜನರಿಗೆ ಮೀಸಲಾತಿ ಮತ್ತು ಇತರ ಪ್ರಯೋಜನಗಳನ್ನು ವಿಸ್ತರಿಸಲು ಕೋರಿ ಸಲ್ಲಿಸಲಾದ ಮನವಿಗೆ ಪ್ರತಿಕ್ರಿಯೆಯಾಗಿ  ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಅಫಿಡವಿಟ್ ಸಲ್ಲಿಸಿದೆ.

ದಲಿತ ಹಿಂದೂಗಳಂತೆಯೇ ಇತರ ಧರ್ಮದ ದಲಿತರೂ ಸಹ ಅದೇ ತೆರನಾದ ಹಿನ್ನಡೆ ಅನುಭವಿಸುತ್ತಿದ್ದಾರೆ ಎಂದು ನ್ಯಾ. ರಂಗನಾಥ್ ಮಿಶ್ರಾ ಆಯೋಗದ ವರದಿಯಲ್ಲಿ ತಿಳಿಸಿರುವುದನ್ನು ಮನವಿಯಲ್ಲಿ ಉಲ್ಲೇಖಿಸಲಾಗಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು ಎಂದು ಅರ್ಜಿದಾರರು ಹೇಳಿದ್ದಾರೆ. ನ್ಯಾಯಮೂರ್ತಿಗಳಾದ ಎಸ್‌ ಕೆ ಕೌಲ್, ಅಭಯ್ ಎಸ್ ಓಕಾ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠ ಈ ಸಂಬಂಧ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿತ್ತು. ಈ ಸಂಬಂಧ ಕೇಂದ್ರ ಈ ಅಫಿಡವಿಟ್‌ ಸಲ್ಲಿಸಿದೆ.

ಅಫಿಡವಿಟ್‌ನ ಪ್ರಮುಖಾಂಶಗಳು

  • ಹಿಂದೂ ಸಮಾಜದಲ್ಲಿ ನೂರಾರು ವರ್ಷಗಳಿಂದ ಇದ್ದ ದಬ್ಬಾಳಿಕೆಯ ವಾತಾವರಣವು ಕ್ರೈಸ್ತರು ಅಥವಾ ಮುಸ್ಲಿಂ ಸಮಾಜದಲ್ಲಿಯೂ ಅಸ್ತಿತ್ವದಲ್ಲಿದೆ ಎನ್ನುವ ಯಾವುದೇ ಅಧಿಕೃತ ಮಾಹಿತಿ ಇಲ್ಲ.

  • ಕೆಲವು ಹಿಂದೂ ಜಾತಿಗಳ ಆರ್ಥಿಕ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಗೆ ಕಾರಣವಾಗುವ ಅಸ್ಪೃಶ್ಯತೆಯ ವ್ಯವಸ್ಥೆ ಕ್ರೈಸ್ತ ಅಥವಾ ಇಸ್ಲಾಂ ಧರ್ಮದಲ್ಲಿ ಇಲ್ಲ. ಹೀಗಾಗಿ 1950 ರ ಆದೇಶ  ಯಾವುದೇ ಅಸಂವಿಧಾನಿಕತೆಯಿಂದ ಕೂಡಿಲ್ಲ.

  • ಹಿಂದೂ ಧರ್ಮದ ಸಾಮಾಜಿಕ ಕ್ರಮದಲ್ಲಿ ಎದುರಾದ ದಬ್ಬಾಳಿಕೆಯನ್ನು ಕ್ರೈಸ್ತಧರ್ಮ ಅಥವಾ ಇಸ್ಲಾಂ ವಾತಾವರಣದಲ್ಲಿ ದಲಿತರು ಅನುಭವಿಸುತ್ತಿದ್ದಾರೆ ಎಂದು ಹೇಳುವ ಯಾವುದೇ ದಾಖಲಿತ ಸಂಶೋಧನೆ ಮತ್ತು ನಿಖರ ಅಧಿಕೃತ ಮಾಹಿತಿ ಲಭ್ಯವಿಲ್ಲ.

  • ಕ್ರೈಸ್ತರು ಮತ್ತು ಮುಸ್ಲಿಮರು ಒಬಿಸಿಯ ಶೇ 27ರಷ್ಟು ಮೀಸಲಾತಿಯನ್ನಷ್ಟೇ ಪಡೆಯುತ್ತಿಲ್ಲ ಬದಲಿಗೆ ಒಬಿಸಿ ವರ್ಗಗಳ ಅಭಿವೃದ್ಧಿ ಯೋಜನೆಗಳಡಿ ಒದಗಿಸಲಾಗುವ  ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಹಾಸ್ಟೆಲ್‌ಗಳ ಸೌಲಭ್ಯ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ ಸೃಜಿಸುವ ಆದಾಯ ತರುವಂತಹ ಇತರೆ ಚಟುವಟಿಕೆಗಳಿಗೆ ಕೂಡ ಅರ್ಹರು.

  • ಅಲ್ಪಸಂಖ್ಯಾತರಿಗಾಗಿ ಸರ್ಕಾರ ಜಾರಿಗೊಳಿಸುತ್ತಿರುವ ಯೋಜನೆಗಳು ಮತ್ತು ಕಾರ್ಯಕ್ರಮಗಳ ಸವಲತ್ತು ಕ್ರೈಸ್ತ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿಯವರಿಗೂ ತಲುಪುತ್ತಿದೆ.

  • ದಲಿತ ಮುಸ್ಲಿಮರು ಮತ್ತು ದಲಿತ ಕ್ರೈಸ್ತರನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವುದಕ್ಕಾಗಿ ತ್ರಿಸದಸ್ಯ ಆಯೋಗವೊಂದನ್ನು ನೇಮಿಸಲಾಗಿದ್ದು ಅದು ಮುಸ್ಲಿಮರು ಅಥವಾ ಕ್ರೈಸ್ತರು ಎಷ್ಟರ ಮಟ್ಟಿಗೆ ಅಲ್ಲಿ ಶೋಷಣೆ ಅನುಭವಿಸುತ್ತಿದ್ದಾರೆ ಎಂಬ ಬಗ್ಗೆ ಅಧ್ಯಯನ ಮಾಡಬೇಕಿರುವುದರಿಂದ ಅರ್ಜಿದಾರರು ಆಯೋಗದ ವರದಿ ಬರುವವರೆಗೆ ಕಾಯಬೇಕು.