Same sex marriage and Supreme Court  
ಸುದ್ದಿಗಳು

ಸಲಿಂಗ ವಿವಾಹ ವಿರೋಧಿಸಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ ಕೇಂದ್ರ ಸರ್ಕಾರ

ಸಲಿಂಗ ವಿವಾಹ ಕುರಿತಾದ ಸಾಮಾಜಿಕ ಸಂಬಂಧದ ನಿರ್ದಿಷ್ಟ ರೂಪವನ್ನು ಮಾನ್ಯ ಮಾಡುವ ಯಾವುದೇ ಮೂಲಭೂತ ಹಕ್ಕು ಇಲ್ಲ ಎಂದು ಸರ್ಕಾರ ಒತ್ತಿಹೇಳಿದೆ.

Bar & Bench

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲಿಂಗ ಮನೋಧರ್ಮದ ಜೋಡಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.

ಮದುವೆಯಾಗದೆ ಕೇವಲ ಸಂಗಾತಿಯಾಗಿ ಒಟ್ಟಿಗೆ ವಾಸಿಸುವುದು ಮತ್ತು ಸಲಿಂಗ ವ್ಯಕ್ತಿಗಳ ಲೈಂಗಿಕ ಸಂಬಂಧವನ್ನು ಜೈವಿಕ ಸ್ತ್ರೀ ಪುರುಷರ ಮದುವೆಯಿಂದ ಹುಟ್ಟುವ ಮಕ್ಕಳನ್ನು ಹೊಂದಿದ ಭಾರತೀಯ ಕುಟುಂಬ ಘಟಕದ ಪರಿಕಲ್ಪನೆಗೆ ಹೋಲಿಸಲಾಗುವುದಿಲ್ಲ ಎಂದು ಭಾನುವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಕೇಂದ್ರ ಸರ್ಕಾರ ತಿಳಿಸಿದೆ.

ಭಾರತೀಯ ಕುಟುಂಬ ಪರಿಕಲ್ಪನೆಗೆ ಜೈವಿಕ ಪುರಷ ಪತಿಯಾಗಿ, ಜೈವಿಕ ಮಹಿಳೆ ಪತ್ನಿಯಾಗಿ ಹಾಗೂ ಆ ಇಬ್ಬರ ಮಿಲನದಿಂದ ಜನಿಸಿದ ಮಗುವಿನ ಅಗತ್ಯವಿದೆ. ಎಂದು ಸರ್ಕಾರ ಹೇಳಿದೆ.

ಮದುವೆಯಾಗುವ ವ್ಯಕ್ತಿಗಳು ತಮ್ಮದೇ ಆದೇ ಸಾರ್ವಜನಿಕ ಪ್ರಾಮುಖ್ಯತೆಯ ಸಂಸ್ಥೆಯನ್ನು ರಚಿಸಲಿದ್ದು ಮದುವೆ ಎಂಬುದು ಹಲವಾರು ಹಕ್ಕುಗಳು ಮತ್ತು ಹೊಣೆಗಾರಿಕೆಗಳನ್ನು ಹರಿಯುವ ಸಾಮಾಜಿಕ ಸಂಸ್ಥೆಯಾಗಿದೆ. ಆದ್ದರಿಂದ ಶಾಸ್ತ್ರೋಕ್ತವಾಗಿ ಇಲ್ಲವೇ ನೋಂದಣಿ ಮೂಲಕ ಮದುವೆಯನ್ನು ಘೋಷಿಸುವುದು ಸರಳ ಕಾನೂನು ಮಾನ್ಯತೆಗಿಂತ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಅದು ಸಮರ್ಥಿಸಿಕೊಂಡಿದೆ.

ಸಲಿಂಗ ವಿವಾಹ ಕುರಿತಾದ ಸಾಮಾಜಿಕ ಸಂಬಂಧದ ನಿರ್ದಿಷ್ಟ ರೂಪವನ್ನು ಮಾನ್ಯ ಮಾಡುವ ಯಾವುದೇ ಮೂಲಭೂತ ಹಕ್ಕು ಇಲ್ಲ  ಎಂದು ಅದು ತಿಳಿಸಿದೆ. “ಎಲ್ಲಾ ನಾಗರಿಕರು ಸಂವಿಧಾನದ 19ನೇ ವಿಧಿಯಡಿ ಸಂಗಾತಿಗಳಾಗುವ ಹಕ್ಕು ಪಡೆದಿದ್ದಾರೆ ಎಂಬುದು ಖಂಡಿತವಾಗಿಯೂ ನಿಜವಾದರೂ ಹಾಗೆ ಸಂಗಾತಿಯಾಗುವುದಕ್ಕೆ ಪ್ರಭುತ್ವ ಅಗತ್ಯ ಕಾನೂನು ಮಾನ್ಯತೆ ನೀಡಬೇಕು ಎನ್ನುವ ಯಾವುದೇ ಹಕ್ಕು ಇಲ್ಲ. ಅಥವಾ ಸಲಿಂಗವಿವಾಹವನ್ನು ಅಂತಹ ಹಕ್ಕಿನಡಿ ತರುವುದಕ್ಕಾಗಿ ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಸಹವಾಚನ ಮಾಡಲು ಆಗುವುದಿಲ್ಲ” ಎಂದು ಅದು ಹೇಳಿದೆ.

ತಮ್ಮ ಇಚ್ಛೆಯ ವ್ಯಕ್ತಿಯ ಜೊತೆ ವಿವಾಹ ಮಾಡಿಕೊಳ್ಳುವ ಹಕ್ಕನ್ನು ಸಲಿಂಗಿ, ದ್ವಿಲಿಂಗಿ, ಮಂಗಳಮುಖಿ, ಲಿಂಗಪರಿವರ್ತಿತ, ಅಸಮ, ಅಂತರ್‌ಲಿಂಗಿ, ಅಲೈಂಗಿಕ ಮತ್ತಿತರ (ಎಲ್‌ಜಿಬಿಟಿಕ್ಯು) ಪ್ರಜೆಗಳಿಗೂ ವಿಸ್ತರಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಕೇಂದ್ರ ಈ ಪ್ರತಿಕ್ರಿಯೆ ನೀಡಿದೆ.

ಈ ಸಂಬಂಧ ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾಗಿರುವ ಎಲ್ಲಾ ಅರ್ಜಿಗಳನ್ನು ಈ ಹಿಂದೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್,  ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆಬಿ ಪರ್ದಿವಾಲಾ ಅವರಿದ್ದ ಪೀಠ ತನಗೆ ವರ್ಗಾಯಿಸಿಕೊಂಡಿತ್ತು.