fake news 
ಸುದ್ದಿಗಳು

ಪರಿಷ್ಕೃತ ಐಟಿ ನಿಯಮಾವಳಿ ತಿದ್ದುಪಡಿ: ಪಿಐಬಿ ಪರಿಶೀಲಿಸಿದ ಸುಳ್ಳು ಸುದ್ದಿಗಳ ನಿರ್ಬಂಧಕ್ಕೆ ಕೇಂದ್ರದ ಒತ್ತು

ಕರಡು ತಿದ್ದುಪಡಿಗಳ ಕುರಿತು ಪ್ರತಿಕ್ರಿಯೆ ನೀಡಲು ಅನುವಾಗುವಂತೆ ಕೊನೆಯ ದಿನಾಂಕ ವಿಸ್ತರಿಸಿದೆ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ.

Bar & Bench

ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ಸಂಸ್ಥೆಗಳಿಗೆ ಮಾರ್ಗಸೂಚಿ ಮತ್ತು ಡಿಜಿಟಲ್‌ ಮಾಧ್ಯಮ ನೀತಿ ಸಂಹಿತೆ) ನಿಯಮಾವಳಿ 2021ರ ನಿಬಂಧನೆಗಳಿಗೆ ಪರಿಷ್ಕೃತ ತಿದ್ದುಪಡಿಗಳನ್ನು ಕೇಂದ್ರ ಸರ್ಕಾರ ಮಂಗಳವಾರ ಪ್ರಸ್ತಾಪಿಸಿದೆ. ಇದರೊಂದಿಗೆ ಪತ್ರಿಕಾ ಸೂಚನಾ ಕಾರ್ಯಾಲಯ (ಪಿಐಬಿ) ವಾಸ್ತವಾಂಶ ಪರಿಶೀಲಿಸಿ (ಫ್ಯಾಕ್ಟ್‌ ಚೆಕ್‌) ಸುಳ್ಳು ಸುದ್ದಿಗಳು ಎಂದು ತೀರ್ಮಾನಿಸಿದ ಸುದ್ದಿ, ಮಾಹಿತಿಯ ಪ್ರಸರಣವನ್ನು ನಿಷೇಧಿಸಲು ತಿದ್ದುಪಡಿ ಅನುವು ಮಾಡಿಕೊಡುತ್ತದೆ.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಕರಡು ಅಧಿಸೂಚನೆಯನ್ನು ಪ್ರಕಟಿಸಿದ್ದು ಐಟಿ ನಿಯಮಾವಳಿ  2021ರ ನಿಬಂಧನೆ 3ರಲ್ಲಿ ಮಧ್ಯಸ್ಥ ಸಂಸ್ಥೆಗಳು ಎಚ್ಚರಿಕೆಯಿಂದ ಗಮನ ಹರಿಸುವ ಅಗತ್ಯತೆಯನ್ನು ಒತ್ತಿ ಹೇಳುವ ಪ್ಯಾರಾ ಒಂದನ್ನು ಸೇರಿಸಲು ಮುಂದಾಗಿದೆ. ಆ ಪ್ಯಾರಾ ಹೀಗಿದೆ:

ಮಧ್ಯಸ್ಥ ವೇದಿಕೆಗಳು ತಮ್ಮ ನಿಯಮಾವಳಿಗಳು, ಗೋಪ್ಯತಾ ನೀತಿ ಮತ್ತು ಬಳಕೆದಾರರ ಒಪ್ಪಂದದ ಮಾಹಿತಿಯನ್ನು ಇಂಗ್ಲಿಷ್ ಅಥವಾ ಇನ್ನಾವುದೇ ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿ ಹೇಳಲಾಗಿರುವ ಭಾಷೆಯಲ್ಲಿ ಒದಗಿಸಬೇಕು. ಅಲ್ಲದೆ, ಹಾದಿ ತಪ್ಪಿಸುವಂತಹ, ಸುಳ್ಳು ಸುದ್ದಿ, ಮಾಹಿತಿಯನ್ನು ತನ್ನ ಕಂಪ್ಯೂಟರ್‌ ಸಂಪನ್ಮೂಲವನ್ನು ಬಳಸಿಕೊಂಡು ಪ್ರಚಾರ ಮಾಡಲು, ಪ್ರದರ್ಶಿಸಲು, ಅಪ್‌ಲೋಡ್‌ ಮಾಡಲು, ಪ್ರಕಟಿಸಲು, ಪ್ರಚುರ ಪಡಿಸಲು ಮುಂತಾಗಿ ಬಳಸದಂತೆ ತಡೆಯಲು ಸಮುಚಿತ ಕ್ರಮ ಕೈಗೊಳ್ಳಬೇಕು.

ಮಾಹಿತಿ ಮತ್ತು ಪ್ರಚಾರ  ಇಲಾಖೆಯ ಪತ್ರಿಕಾ ಸೂಚನಾ ಕಾರ್ಯಾಲಯವು (ಪಿಐಬಿ) ಸುಳ್ಳು ಎಂದು ಗುರುತಿಸಿದ ಅಥವಾ ಕೇಂದ್ರ ಸರ್ಕಾರವು ಸತ್ಯಾಸತ್ಯತೆಯನ್ನು ಪತ್ತೆ ಹಚ್ಚಲು ನಿಯುಕ್ತಿ ಮಾಡಿರುವ ಪ್ರಾಧಿಕಾರದಿಂದ ಗುರುತಿಸಲ್ಪಟ್ಟ ಅಥವಾ ಇದೇ ತರಹದ ಇತರ ನಿಬಂಧನೆಗಳಿಗೆ ಒಳಪಟ್ಟಂತೆ ಸೂಕ್ತ ಪ್ರಾಧಿಕಾರದಿಂದ ಗುರುತಿಸಲ್ಪಟ್ಟ ಸುಳ್ಳು ಸುದ್ದಿಗಳನ್ನು ತಡೆಯಲು ಸಮುಚಿತ ಪ್ರಯತ್ನ ಮಾಡುವುದು.

ಈ ಹಿಂದೆ ಇದ್ದ ಷರತ್ತು, ಸುದ್ದಿ ಮೂಲದ ಬಗ್ಗೆ ಓದುಗರನ್ನು ಮೋಸಗೊಳಿಸುವುದು ಅಥವಾ ತಪ್ಪು ದಾರಿಗೆಳೆಯುವುದು ಇಲ್ಲವೇ ಉದ್ದೇಶಪೂರ್ವಕವಾಗಿ ಯಾವುದೇ ತಪ್ಪು ಮಾಹಿತಿ ಅಥವಾ ವಿವರವನ್ನು ಸಂಪೂರ್ಣ ಸುಳ್ಳು ಮತ್ತು ಅಸತ್ಯ ಅಥವಾ ತಪ್ಪು ದಾರಿಗೆಳೆಯುವಂಥದ್ದನ್ನು ಮಾತ್ರ ಗುರಿಯಾಗಿಸಿಕೊಂಡಿತ್ತು. ಹೊಸ ನಿಯಮಾವಳಿ ಮಧ್ಯಸ್ಥ ಸಂಸ್ಥೆಗಳು ಸಹ ಸುಳ್ಳು ಸುದ್ದಿಯ ಪ್ರಸರಣವನ್ನು ತಡೆಯುವಲ್ಲಿ ಹೆಚ್ಚು ಗಮನಹರಿಸಲು ಅನುವು ಮಾಡುತ್ತದೆ.

ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿದಂತೆ 2021ರ ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಕರಡು ತಿದ್ದುಪಡಿ ಮಾಡುವ ಕುರಿತು ಪ್ರತಿಕ್ರಿಯೆ ನೀಡಲು ಅನುವಾಗುವಂತೆ ಕೊನೆಯ ದಿನಾಂಕವನ್ನು ಜನವರಿ 25, 2023ರವರೆಗೆ ವಿಸ್ತರಿಸಲಾಗಿದೆ. ಜನವರಿ 3 ರಂದು ತಿದ್ದುಪಡಿಗಳನ್ನು ಪರಿಚಯಿಸಿದ್ದ ಸಚಿವಾಲಯ ಜನವರಿ 17ರವರೆಗೆ ಸಾರ್ವಜನಿಕರ ಪ್ರತಿಕ್ರಿಯೆ ಆಹ್ವಾನಿಸಿತ್ತು.