SG Tushar Mehta and Supreme Court
SG Tushar Mehta and Supreme Court  
ಸುದ್ದಿಗಳು

ಕಾಶ್ಮೀರದಲ್ಲಿ ಚುನಾವಣೆಗೆ ಸಿದ್ಧ, ಆದರೆ ಪೂರ್ಣ ರಾಜ್ಯವಾಗಿಸಲು ನಿಖರ ಸಮಯ ನೀಡಲಾಗದು: ಸುಪ್ರೀಂಗೆ ತಿಳಿಸಿದ ಕೇಂದ್ರ

Bar & Bench

ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವನ್ನು ರಾಜ್ಯವಾಗಿ ಪರಿವರ್ತಿಸುವುದಕ್ಕೆ ನಿಖರ ಸಮಯ ಒದಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಆದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ಮುಂದುವರಿಯುವುದು ತಾತ್ಕಾಲಿಕ ವಿದ್ಯಮಾನ ಎಂದು ಕೇಂದ್ರ ಸರ್ಕಾರದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿಯಾದ ಸಾಲಿಸಿಟರ್‌ ಜನರಲ್‌ (ಎಸ್‌ಜಿ) ತುಷಾರ್ ಮೆಹ್ತಾ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ ಆರ್ ಗವಾಯಿ ಹಾಗೂ ಸೂರ್ಯ ಕಾಂತ್‌ ಅವರಿದ್ದ ಸಾಂವಿಧಾನಿಕ ಪೀಠಕ್ಕೆ ತಿಳಿಸಿದರು.  

ಕೇಂದ್ರ ಸರ್ಕಾರ ಚುನಾವಣೆಗೆ ಸಿದ್ಧವಿದ್ದರೂ ಚುನಾವಣೆಯ ಸಮಯ, ಅವು ಪಂಚಾಯತ್ ಅಥವಾ ಜಿಲ್ಲಾ ಮಟ್ಟದಲ್ಲಿ ಆರಂಭವಾಗಬೇಕೆ ಎಂಬುದನ್ನು ಜಮ್ಮು ಕಾಶ್ಮೀರದ ಆಡಳಿತ ಮತ್ತು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಲಿದೆ ಎಂದು ಮೆಹ್ತಾ ಸಮಜಾಯಿಷಿ ನೀಡಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಙಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದತಿಯ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಈ ವಿಚಾರ ತಿಳಿಸಿದೆ.

ಎರಡು ದಿನಗಳ ಹಿಂದೆ ಅಂದರೆ ಆಗಸ್ಟ್ 29ರಂದು ಜಮ್ಮು ಕಾಶ್ಮೀರವನ್ನು ತಾತ್ಕಾಲಿಕ ನೆಲೆಯಲ್ಲಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದ್ದು ಲಡಾಖ್‌ ಕೇಂದ್ರಾಡಳಿತ ಪ್ರದೇಶವಾಗಿ ಉಳಿಯುತ್ತದೆಯಾದರೂ ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡಲಾಗುವುದು ಎಂದು ಕೇಂದ್ರ ವಿವರಿಸಿತ್ತು.

ಆಗ ಸುಪ್ರೀಂ ಕೋರ್ಟ್‌, ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ದೊರಕಿಸಿಕೊಡಲು ಮಾರ್ಗಸೂಚಿ ರೂಪಿಸುವಂತೆ ಮತ್ತು ಕಾಲಮಿತಿ ನಿಗದಿಪಡಿಸುವ ಸಂಬಂಧ ಅಧಿಕೃತ ಹೇಳಿಕೆ ನೀಡುವಂತೆ ಕೇಂದ್ರಕ್ಕೆ ಸೂಚಿಸಿತ್ತು.