High Court of Karnataka 
ಸುದ್ದಿಗಳು

ವೀಸಾ ಅವಧಿ ವಿಸ್ತರಿಸಲು ಕೇಂದ್ರ ಸರ್ಕಾರ ನಕಾರ: ಚೀನಿ ಮಹಿಳೆ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್‌

Bar & Bench

ವೀಸಾ ಅವಧಿ ಮುಗಿದ ನಂತರವೂ ರಾಜ್ಯದಲ್ಲೇ ನೆಲೆಸಿದ್ದ ಚೀನಿ ಮಹಿಳೆ, ತನ್ನ ವೀಸಾ ಅವಧಿ ವಿಸ್ತರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್‌ನ ಈಚೆಗೆ ವಜಾಗೊಳಿಸಿದೆ.

ಚೀನಾದ ಲೀ ಡಾಂಗ್ ಎಂಬ 44 ವರ್ಷದ ಮಹಿಳೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು, ಮೇಲ್ಮನವಿದಾರೆ 2023ರ ಮಾರ್ಚ್‌ 3ರಂದು ಭಾರತ ಬಿಟ್ಟು ಕೆರೆಬಿಯನ್ ಸಮುದ್ರದ ಪೂರ್ವ ಭಾಗದಲ್ಲಿರುವ ದ್ವೀಪಕ್ಕೆ ತೆರಳಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನು ಪರಿಗಣಿಸಿದ ಪೀಠವು ಮೇಲ್ಮನವಿ ವಜಾಗೊಳಿಸಿದೆ.

ಉದ್ಯಮ ವೀಸಾದಲ್ಲಿ 2019ರ ಜೂನ್‌ನಲ್ಲಿ ಭಾರತಕ್ಕೆ ಬಂದು ರಾಜ್ಯದ ಶ್ರೀರಂಗಪಟ್ಟಣದಲ್ಲಿ ನೆಲೆಸಿದ್ದ ಲೀ ಡಾಂಗ್ ಅವರ ವೀಸಾ ಅವಧಿ 2020ರ ಜುಲೈಗೆ ಮುಗಿದಿತ್ತು. ಆದ ಕಾರಣ ಭಾರತ ಬಿಟ್ಟು ತೆರಳುವಂತೆ ಕೇಂದ್ರ ಸರ್ಕಾರ 2019ರ ಅಕ್ಟೋಬರ್‌ 30ರಂದು ನೋಟಿಸ್ ನೀಡಿತ್ತು. ನಂತರ ಕೋವಿಡ್-19ರ ಕಾರಣ ಪರಿಗಣಿಸಿ ವೀಸಾ ಅವಧಿಯನ್ನು 2021ರ ಸೆಪ್ಟೆಂಬರ್‌ 30ರವರೆಗೆ ವಿಸ್ತರಿಸಲಾಗಿತ್ತು. ತದನಂತರವೂ ಅವರು ಇಲ್ಲೇ ನೆಲೆಸಲು ವೀಸಾ ವಿಸ್ತರಣೆ ಕೋರಿದ್ದರು.

ಆ ಕೋರಿಕೆ ನಿರಾಕರಿಸಿದ್ದರಿಂದ ಲೀ ಡಾಂಗ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅದನ್ನು ವಜಾಗೊಳಿಸಿದ್ದ ಏಕಸದಸ್ಯ ಪೀಠವು ಚೀನಾದ ವಿಮಾನಯಾನ ಪುನರ್ ಆರಂಭವಾಗುತ್ತಿದ್ದಂತೆಯೇ ಮೊದಲ ವಿಮಾನಕ್ಕೆ ಮಹಿಳೆಯನ್ನು ಹತ್ತಿಸುವಂತೆ ಕೇಂದ್ರ ಸರ್ಕಾರಕ್ಕೆ 2021ರ ಡಿಸೆಂಬರ್‌ 3ರಂದು ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಲೀ ಡಾಂಗ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.