Government - North South Block  
ಸುದ್ದಿಗಳು

ಸಕಾಲಿಕ ತೀರ್ಪಿಗೆ ಉತ್ತೇಜನ, ಅನಗತ್ಯ ಮೊಕದ್ದಮೆಗೆ ಅಂಕುಶ: ಮಾರ್ಗಸೂಚಿ ಸಿದ್ಧಪಡಿಸಿದ ಕೇಂದ್ರ ಸರ್ಕಾರ

ಈ ಮಾರ್ಗಸೂಚಿಗಳಿಗೆ 'ಮೊಕದ್ದಮೆಗಳ ದಕ್ಷ ಮತ್ತು ಪರಿಣಾಮಕಾರಿ ನಿರ್ವಹಣೆಗಾಗಿ ಭಾರತ ಸರ್ಕಾರದ ನಿರ್ದೇಶನ' ಎಂಬ ಶೀರ್ಷಿಕೆ ನೀಡಲಾಗಿದೆ.

Bar & Bench

ದಾವೆ ಹೂಡಿದ ಪ್ರಕರಣಗಳ ತೀರ್ಪು ಸಕಾಲದಲ್ಲಿ ಪ್ರಕಟಗೊಳ್ಳುವುದಕ್ಕಾಗಿ ಮತ್ತು ಅನಗತ್ಯ ಮೊಕದ್ದಮೆಗಳು ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗುವುದನ್ನು ತಡೆಯುವುದಕ್ಕಾಗಿ ಕೇಂದ್ರ ಕಾನೂನು ಸಚಿವಾಲಯ  ಭಾರತ ಸರ್ಕಾರದ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ವಿವಿಧ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಅನಗತ್ಯ ಮೊಕದ್ದಮೆಗಳನ್ನು ತಡೆಗಟ್ಟಲು ಮತ್ತು ಮೊಕದ್ದಮೆಗಳಲ್ಲಿ ಅಂತರ-ಇಲಾಖೆಯ ಸಮನ್ವಯವನ್ನು ಸುಗಮಗೊಳಿಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನ ಸಹಾಯ ಮಾಡುತ್ತದೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ಹೊರಡಿಸಿದ ಕಚೇರಿ ಜ್ಞಾಪನಾ ಪತ್ರದಲ್ಲಿ ತಿಳಿಸಲಾಗಿದೆ.

ಈ ಮಾರ್ಗಸೂಚಿಗಳಿಗೆ ' ಮೊಕದ್ದಮೆಗಳ ದಕ್ಷ ಮತ್ತು ಪರಿಣಾಮಕಾರಿ ನಿರ್ವಹಣೆಗಾಗಿ ಭಾರತ ಸರ್ಕಾರದ ನಿರ್ದೇಶನ' ಎಂಬ ಶೀರ್ಷಿಕೆ ನೀಡಲಾಗಿದೆ.

"2047 ರ ವೇಳೆಗೆʼ ವಿಕಸಿತ ಭಾರತʼದ ಗುರಿ ಸಾಧಿಸುವುದಕ್ಕಾಗಿ ಉತ್ತಮ ಆಡಳಿತಕ್ಕೆ ಪ್ರೇರಣೆ ನೀಡಲು ನ್ಯಾಯಾಲಯಗಳು, ನ್ಯಾಯಮಂಡಳಿಗಳು ಮತ್ತಿತರ ಅರೆ-ನ್ಯಾಯಾಂಗ ವೇದಿಕೆಗಳಲ್ಲಿರುವ ಕೇಂದ್ರ ಸರ್ಕಾರದ ಸಚಿವಾಲಯಗಳು/ಇಲಾಖೆಗಳು ಮತ್ತು ಅವುಗಳ ಅಧೀನ ಕಚೇರಿಗಳು ಹಾಗೂ ಸ್ವಾಯತ್ತ ಸಂಸ್ಥೆಗಳಿಗೆ ಸಂಬಂಧಿಸಿದ ಮೊಕದ್ದಮೆಗಳ ಪರಿಣಾಮಕಾರಿ, ಸಂಘಟಿತ ನಿರ್ವಹಣೆಗಾಗಿ ಈ ನಿರ್ದೇಶನ ನೀಡಲಾಗಿದೆ" ಎಂದು ಕಾನೂನು ವ್ಯವಹಾರಗಳ ಇಲಾಖೆ ಕೇಂದ್ರ ಸರ್ಕಾರದ ಕಾರ್ಯದರ್ಶಿಗಳಿಗೆ ಹೊರಡಿಸಿದ ಜ್ಞಾಪನಾಪತ್ರದಲ್ಲಿ ತಿಳಿಸಿದೆ.

ಮಾರ್ಗಸೂಚಿಯ ಪ್ರಮುಖಾಂಶಗಳು

  • ಪ್ರಕರಣಗಳನ್ನು ಸಾಮಾನ್ಯ, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರಕರಣಗಳೆಂದು ವಿಂಗಡಣೆ ಮಾಡುವುದು.

  • ರಾಷ್ಟ್ರೀಯ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ, ನೀತಿ ಅಥವಾ ಗಮನಾರ್ಹ ಆರ್ಥಿಕ ಪಾಲನ್ನು ಒಳಗೊಂಡ ಅತ್ಯಂತ ಸೂಕ್ಷ್ಮ ಪ್ರಕರಣಗಳನ್ನು ಸಂಬಂಧಪಟ್ಟ ಕಾರ್ಯದರ್ಶಿಗಳು ಸೂಕ್ತ ಕ್ರಮಕ್ಕಾಗಿ ಪರಿಶೀಲಿಸಬೇಕು.

  • ಕಾರ್ಯತಂತ್ರ ರೂಪಿಸಲು ಕಾರ್ಯದರ್ಶಿ ಎಲ್ಲಾ ಸಂಬಂಧಿತ ಅಧಿಕಾರಿಗಳೊಂದಿಗೆ ಸಭೆ ಕರೆಯಬಹುದು.

  • ಸಂವಿಧಾನದ 136ನೇ ವಿಧಿಯಡಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅನುಮತಿ ಅರ್ಜಿಗಳನ್ನು (ಎಸ್‌ಎಲ್‌ಪಿ) ಅಸಾಧಾರಣ ಮತ್ತು ವಿಶೇಷ ಸಂದರ್ಭಗಳಲ್ಲಿ ಮಾತ್ರವೇ ಸಲ್ಲಿಸಬೇಕು.

  • ಗಮನಾರ್ಹ ದೇಶೀಯ ಅಥವಾ ಅಂತರರಾಷ್ಟ್ರೀಯ ಪರಿಣಾಮ ಬೀರುವ ಪ್ರಕರಣಗಳು, ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದಂತೆ ಗಣನೀಯ ಪ್ರಾಮುಖ್ಯತೆ ಇರುವ ಪ್ರಕರಣಗಳು ಸಾಮಾನ್ಯ ಸಾರ್ವಜನಿಕ ನೀತಿ ಅಥವಾ ಸಂವಿಧಾನದ ವ್ಯಾಖ್ಯಾನದ ಕಾನೂನು ಪ್ರಶ್ನೆಗೆ ಸಂಬಂಧಿಸಿದ ಪ್ರಕರಣದಂತಹ ದಾವೆಗಳ ಕುರಿತಾಗಿಯಷ್ಟೇ ಎಸ್‌ಎಲ್‌ಪಿ ಸಲ್ಲಿಸಬೇಕು.

  • ಪ್ಯಾನೆಲ್‌ ವಕೀಲರನ್ನು ನಿಯೋಜಿಸಬೇಕು ಹಾಗೂ ಅವರ ಕಾರ್ಯಕ್ಷಮತೆಯನ್ನು ಕಾಲಕಾಲಕ್ಕೆ ಪರಾಮರ್ಶಿಸಬೇಕು.

  • ಕಾನೂನು ಕೋಶ ರಚನೆ, ಕಾನೂನು ಪದವಿ ಪಡೆದಿರುವ ನೋಡಲ್‌ ಅಧಿಕಾರಿಗಳು ಕಿರಿಯ ವಕೀಲರು, ತಜ್ಞರು ಮುಂತಾದವರ ನೇಮಕಾತಿ ಮೂಲಕ ಮೂಲಕ ಸಾಮರ್ಥ್ಯ ವೃದ್ಧಿಗೊಳಿಸಿಕೊಳ್ಳಬೇಕು.  

  • ಮಧ್ಯಸ್ಥಿಕೆ ಮೂಲಕ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳಲು ಉತ್ತೇಜನ ನೀಡಬೇಕು.  

  • ಗಮನಾರ್ಹ ಪರಿಣಾಮ ಬೀರುವ ಹೊಸ ಕಾನೂನುಗಳು, ನಿಯಮಾವಳಿ ಅಥವಾ ನೀತಿ ರೂಪಿಸಿದ ಸಂದರ್ಭಗಳಲ್ಲಿ ಅವುಗಳನ್ನು ಪ್ರಶ್ನಿಸಿ ಅನಿರೀಕ್ಷಿತ/ಅನಗತ್ಯ ಮೊಕದ್ದಮೆ ಹೂಡುವುದನ್ನು ಕಡಿಮೆ ಮಾಡಲು ಸಂಭಾವ್ಯ ವ್ಯಾಜ್ಯಗಳ ಸಾಧ್ಯತೆಯನ್ನು ನಿರ್ಣಯಿಸಲು ಸ್ವತಂತ್ರ ಪರೀಕ್ಷೆ ನಡೆಸಬಹುದು.

  • ವ್ಯಾಜ್ಯಗಳಿಗೆ ಕಾರಣವಾಗುವ ಸಮಸ್ಯೆ ಗುರುತಿಸುವುದಕ್ಕಾಗಿ ಅಧೀನ ಶಾಸನಗಳ (ಶಾಸಕಾಂಗಕೇತರ ಸಂಸ್ಥೆಗಳು ರೂಪಿಸಿದ ಕಾನೂನುಗಳು) ನಿಯತಕಾಲಿಕ ಪರಿಶೀಲನೆ ನಡೆಸಬೇಕು. 

  • ಅಧೀನ ಶಾಸನದ ಮೇಲೆ ಪರಿಣಾಮ ಬೀರುವ ನೀತಿ ರೂಪಿಸುವಾಗ, ಅಸ್ಪಷ್ಟ ಸೆಕ್ಷನ್‌ಗಳು, ಕಾರ್ಯವಿಧಾನದ ಕೊರತೆ ಮತ್ತು ಕಾರ್ಯಾಚರಣೆಯ ಸವಾಲುಗಳನ್ನು ತೆಗೆದುಹಾಕುವ ಬಗ್ಗೆ ವಿಶೇಷ ಒತ್ತು ನೀಡಬಹುದು.

  • ಪ್ರಮುಖ ಪ್ರಕರಣಗಳ ಕುರಿತಂತೆ ಎಲ್ಲಾ ಪ್ರಮುಖ ಕಚೇರಿ ಜ್ಞಾಪನಾ ಪತ್ರಗಳು/ ಮಾರ್ಗಸೂಚಿಗಳು/ ಸುತ್ತೋಲೆಗಳನ್ನು ಮಾಸ್ಟರ್ ಸುತ್ತೋಲೆಯಾಗಿ ಸಂಕಲಿಸಿ ಆಯಾ ಸಚಿವಾಲಯಗಳ ಜಾಲತಾಣದಲ್ಲಿ ಪ್ರದರ್ಶಿಸಬಹುದು.

  • ಆಡಳಿತ ಮಟ್ಟದಲ್ಲಿ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬ ತಪ್ಪಿಸಲು ಶಿಸ್ತು ಕ್ರಮ ಕೈಗೊಳ್ಳುವುದಕ್ಕಾಗಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ತಿದ್ದುಪಡಿ ಅಥವಾ ಮಾರ್ಗಸೂಚಿ ಜಾರಿಗೆ ತರಬಹುದು.

  • ಬಹು ಸಚಿವಾಲಯಗಳು/ಇಲಾಖೆಗಳಲ್ಲಿ ವಿಚಾರಣೆ ನಡೆಸಲು ವಿಚಾರಣಾ ಅಧಿಕಾರಿ (ಐಪಿಒ) ಅಥವಾ ಪ್ರಸ್ತುತಿ ಅಧಿಕಾರಿ (ಪಿಒ) ಆಗಿ ಕಾರ್ಯನಿರ್ವಹಿಸಲು ನಿವೃತ್ತ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬಹುದು.

  • ಒಂದೇ ರೀತಿಯ ಕಾನೂನು ಪ್ರಶ್ನೆಗಳನ್ನು ಒಳಗೊಂಡ ಪ್ರಕರಣಗಳನ್ನು ಸಾಮಾನ್ಯ ತೀರ್ಪು ಪಡೆಯಬೇಕಿರುವ ಅರ್ಜಿಯೊಂದಿಗೆ ಲಗತ್ತಿಸಬೇಕು. 

  • ಇಲಾಖೆಗಳು ಅಥವಾ ಸಚಿವಾಲಯಗಳ ನಡುವೆ ಸಮನ್ವಯ ಸಾಧಿಸುವುದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವ ಇಲಾಖೆ ಅಥವಾ ಸಚಿವಾಲಯ ಮುನ್ನಡೆಸಬೇಕು ಎಂಬುದರ ಕುರಿತು ಸಂಘರ್ಷ ಉಂಟಾದರೆ ಕಾನೂನು ವ್ಯವಹಾರಗಳ ಇಲಾಖೆಯ ಕದ ತಟ್ಟಬಹುದು.

  • ಪ್ರಕರಣಗಳ ಮುಂದೂಡಿಕೆ ಕಡಿಮೆ ಮಾಡಲು ಕ್ರಮ ಕೈಗೊಳ್ಳುವುದು.

  • ಕಾನೂನು ಮಾಹಿತಿ ನಿರ್ವಹಣೆ ಮತ್ತು ಬ್ರೀಫಿಂಗ್ ವ್ಯವಸ್ಥೆಗೆ (ಎಲ್‌ಐಎಂಬಿಎಸ್‌) ಸಂಬಂದಿಸಿದ ತಂತ್ರಾಶವನ್ನು ಪ್ರಕರಣದ ಪ್ರಗತಿಯನ್ನು ದಾಖಲಿಸಲು, ಪ್ರಕರಣದ ಶುಲ್ಕ ಪಾವತಿ ಪ್ರಕ್ರಿಯೆಗೆ ಸಮರ್ಥವಾಗಿ ಬಳಸಿಕೊಳ್ಳಬೇಕು.

  • ಭಾರತ ಸರ್ಕಾರದ ಹಿತಾಸಕ್ತಿಯ ಮೇಲೆ ಪರಿಣಾಮ ಬೀರಬಹುದಾದ ಪ್ರಕರಣಗಳ ಮೇಲೆ ಕಣ್ಗಾವಲು ಇರಿಸಬೇಕು.

  • ಪ್ರಮುಖ ಪ್ರಕರಣಗಳ ಮೂಲ ಕಾರಣ ವಿಶ್ಲೇಷಣೆಗೆ ಸರ್ಕಾರ ಯೋಜನೆ ರೂಪಿಸಬೇಕು. ನೀತಿ ನಿರೂಪಣೆಗೆ ಸಂಬಂಧಿಸಿದ ವಿಚಾರಗಳಲ್ಲದ ಹೊರತು ಏಕಪಕ್ಷೀಯ ಮಧ್ಯಂತರ ಆದೇಶಗಳ ವಿರುದ್ಧ ಮೇಲ್ಮನವಿ ಸಲ್ಲಿಸುವಂತಿಲ್ಲ.

  • ಕೇಂದ್ರ ಆಡಳಿತ ನ್ಯಾಯಮಂಡಳಿಗಳು (ಸಿಎಟಿ) ಅಥವಾ ಹೈಕೋರ್ಟ್‌ನ ಆದೇಶಗಳನ್ನು ಪ್ರಶ್ನಿಸುವ ಸಂದರ್ಭಗಳಲ್ಲಿ ಮರುಪರಿಶೀಲನಾ ಅರ್ಜಿ ಅಥವಾ ಮೇಲ್ಮನವಿ ಸಲ್ಲಿಸಲು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯೊಂದಿಗೆ ಸಮಾಲೋಚಿಸುವ ಅಗತ್ಯವಿಲ್ಲ.

  • ಸಾರ್ವಜನಿಕ ಹಿತಾಸಕ್ತಿಯ ಮೇಲೆ ಪರಿಣಾಮ ಬೀರದ ಮತ್ತು ಪುರಸಭೆಯ ಕಾನೂನುಗಳಂತಹ ತೆರಿಗೆ/ಹಣಕಾಸೇತರ ಕಾನೂನುಗಳ ವ್ಯಾಜ್ಯ ಇತ್ಯರ್ಥಕ್ಕಾಗಿ ಕ್ಷಮಾದಾನ ಯೋಜನೆ ರೂಪಿಸಬೇಕು.

[ಜ್ಞಾಪನಾ ಪತ್ರದ ಪ್ರತಿ]

Directive_Efficient_and_Effective_Management_Litigation_GoI.pdf
Preview