<div class="paragraphs"><p>Karnataka HC and BEML Ltd</p></div>

Karnataka HC and BEML Ltd

 
ಸುದ್ದಿಗಳು

ಬಿಇಎಂಎಲ್‌ ಖಾಸಗೀಕರಣದ ವಿರುದ್ಧದ ಪಿಐಎಲ್: ಕೇಂದ್ರಕ್ಕೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

Bar & Bench

ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ರಕ್ಷಣಾ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕ ಉದ್ದಿಮೆಯಾದ ಬಿಇಎಂಎಲ್‌ ಲಿಮಿಟೆಡ್‌ ಅನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಬಿಇಎಂಎಲ್‌ ಲಿಮಿಟೆಡ್‌ಗೆ ಮಂಗಳವಾರ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ.

ಬಿಇಎಂಎಲ್‌ ಸಿಬ್ಬಂದಿ ಸಂಘಟನೆ ಮತ್ತು ಬಿಇಎಂಎಲ್‌ ಉದ್ಯೋಗಿಗಳ ಸಂಘಟನೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ರಕ್ಷಣಾ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕ ಉದ್ದಿಮೆಯಾದ ಬಿಇಎಂಎಲ್‌ ಲಿಮಿಟೆಡ್‌ ಮಿನಿರತ್ನ ಒಂದನೇ ವಿಭಾಗಕ್ಕೆ ಸೇರಿದೆ. ಲಾಭಾಂಶದಲ್ಲಿ ಸಂಸ್ಥೆ ಮುನ್ನಡೆಯುತ್ತಿದ್ದು, ಸಮಗ್ರ ಗುರಿ ನಿರ್ದೇಶಿತ ಕ್ಷಿಪಣಿ ಅಭಿವೃದ್ಧಿ ಯೋಜನೆಗೆ ಬಿಇಎಂಎಲ್‌ ಹೆಸರುವಾಸಿಯಾಗಿದೆ. ಇಂಥ ಸಂಸ್ಥೆಯನ್ನು ಕೇಂದ್ರ ಸರ್ಕಾರವು ಖಾಸಗೀಕರಣಗೊಳಿಸುತ್ತಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಇದಕ್ಕೆ ಯಾವುದೇ ಸಕಾರಣಗಳನ್ನು ಕೇಂದ್ರ ಸರ್ಕಾರ ನೀಡಿಲ್ಲ” ಎಂದು ಪೀಠದ ಗಮನಸೆಳೆದರು.

ಮುಂದುವರಿದು “ಅರ್ಜಿದಾರರು ಕಳೆದ ಹತ್ತು ವರ್ಷಗಳಿಂದ ಬಿಇಎಂಎಲ್‌ ಅನ್ನು ಖಾಸಗೀಕರಣಗೊಳಿಸುತ್ತಿರುವುದರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಆದರೆ, ರಕ್ಷಣಾ ಇಲಾಖೆ ಇದಕ್ಕೆ ಬೆಂಬಲ ನೀಡಿಲ್ಲ. ಖಾಸಗೀಕರಣಗೊಳಿಸುವುದಕ್ಕಾಗಿ ಹಾಲಿ ಸರ್ಕಾರವು ಸಚಿವಾಲಯವನ್ನು ಸೃಷ್ಟಿಸಿದೆ. ಈ ವಿಚಾರದ ಕುರಿತು ಆ ಸಚಿವಾಲಯ ನಿರ್ಧಾರ ಕೈಗೊಳ್ಳುತ್ತದೆ. ಸೂಕ್ತ ಆಸಕ್ತ ಸಂಸ್ಥೆಗಳಿಂದ ತಮ್ಮ ಉಮೇದನ್ನು ವಿವರಿಸುವ ಇಚ್ಛಾ ಅಭಿವ್ಯಕ್ತಿಗೆ (ಎಕ್ಸ್‌ಪ್ರೆಷನ್ ಆಫ್‌ ಇಂಟರೆಸ್ಟ್‌) ಆಹ್ವಾನ ನೀಡಲಾಗಿದೆ. ಅದಕ್ಕೆ ತಡೆ ನೀಡಬೇಕು. ಬಿಇಎಂಎಲ್‌ ಅನ್ನು ಖಾಸಗೀಕರಣಗೊಳಿಸಲು ಕೈಗೊಂಡಿರುವ ಹರಾಜು ವಿವರಗಳಿಗೆ ಸಂಬಂಧಿಸಿದ ದಾಖಲೆಗಳ ಸಲ್ಲಿಕೆಗೆ ಆದೇಶಿಸಬೇಕು. ಹೀಗಾಗಿ, ನ್ಯಾಯಾಲಯವು ಯಥಾಸ್ಥಿತಿ ಕಾಪಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು” ಎಂದು ಕೋರಿದರು.

ಇದಕ್ಕೆ ಒಪ್ಪದ ಪೀಠವು “ಪ್ರತಿವಾದಿಗಳು ತಮ್ಮ ನಿಲುವನ್ನು ಅಧಿಕೃತವಾಗಿ ಸ್ಪಷ್ಟಪಡಿಸಲಿ” ಎಂದು ಹೇಳಿತು. ಕೇಂದ್ರ ಸರ್ಕಾರದ ಪರವಾಗಿ ವಕೀಲೆ ಮಾನಸಿ ಕುಮಾರ್‌ ನೋಟಿಸ್‌ ಪಡೆದುಕೊಂಡರು. ಪ್ರಕರಣದ ವಿಚಾರಣೆಯನ್ನು ಪೀಠವು ಫೆಬ್ರವರಿ 10ಕ್ಕೆ ಮುಂದೂಡಿತು. ಅರ್ಜಿದಾರರ ಪರವಾಗಿ ವಕೀಲೆ ಪ್ರಿಯಾಂಕಾ ಯಾವಗಲ್‌ ಮನವಿ ಸಿದ್ಧಪಡಿಸಿದ್ದಾರೆ.