ವಕೀಲ ತಾಜ್ ಅಲಿ ಮೌಲಾಸಾಬ್ ನದಾಫ್ ಅವರನ್ನು ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ಫೆಬ್ರವರಿ 12ರಂದು ನೇಮಕ ಮಾಡಿ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದೆ.
“ಸಂವಿಧಾನದ 224ನೇ ವಿಧಿಯ ಕಲಂ (1)ರ ಪ್ರಕಾರ ತಾಜ್ ಅಲಿ ಮೌಲಾಸಾಬ್ ನದಾಫ್ ಅವರನ್ನು ಅವರು ಅಧಿಕಾರವಹಿಸಿಕೊಳ್ಳುವ ದಿನದಿಂದ ಅನ್ವಯವಾಗುವಂತೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
2023ರ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ನದಾಫ್ ಸೇರಿ ಮೂವರು ವಕೀಲರ ಹೆಸರನ್ನು ನ್ಯಾಯಮೂರ್ತಿ ಹುದ್ದೆಗೆ ಶಿಫಾರಸ್ಸು ಮಾಡಿತ್ತು.
ಕರ್ನಾಟಕ ಹೈಕೋರ್ಟ್‌ನಲ್ಲಿ ಒಟ್ಟು 62 ನ್ಯಾಯಮೂರ್ತಿಗಳ ಹುದ್ದೆಗಳಿದ್ದು, 2025ರ ಫೆಬ್ರವರಿ 1ಕ್ಕೆ ಕೊನೆಗೊಂಡಂತೆ 49 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 13 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇವೆ.