ಸುದ್ದಿಗಳು

ಆಮ್ಲಜನಕ ಹೆಚ್ಚಳ ಕುರಿತಂತೆ ಕರ್ನಾಟಕ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಕೇಂದ್ರದ ವಾದವೇನು?

Bar & Bench

ರಾಜ್ಯದ ಕೋವಿಡ್‌ ರೋಗಿಗಳಿಗಾಗಿ ಪ್ರತಿನಿತ್ಯ ನೀಡುತ್ತಿರುವ ದ್ರವೀಕೃತ ವೈದ್ಯಕೀಯ ಆಮ್ಲಜನಕದ (ಎಲ್‌ಎಂಒ) ಪ್ರಮಾಣವನ್ನು 1,200 ಮೆಟ್ರಿಕ್ ಟನ್‌ಗೆ ಹೆಚ್ಚಿಸಬೇಕೆಂದು ಬುಧವಾರ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದೆ.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರ ಅನುಮತಿ ಮೇರೆಗೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರಿದ್ದ ಪೀಠದ ಎದುರು ಪ್ರಕರಣವನ್ನು ಮಂಡಿಸಿದರು. ಆದಾಗ್ಯೂ, ನ್ಯಾಯಾಲಯ ಪ್ರಕರಣದ ಕಡತಗಳನ್ನು ಪರಿಶೀಲಿಸಿ ನಂತರ ವಿಚಾರಣೆಗಾಗಿ ಪಟ್ಟಿ ಮಾಡಲು ಸುಪ್ರೀಂಕೋರ್ಟ್‌ ರೆಜಿಸ್ಟ್ರಿಗೆ ಆದೇಶಿಸಿತು.

ಕೇಂದ್ರ ಸರ್ಕಾರದ ವಾದವೇನು?

  • ಪ್ರತಿ ರಾಜ್ಯಕ್ಕೆ ನಿರ್ದಿಷ್ಟ ಪ್ರಮಾಣದ ಆಮ್ಲಜನಕ ಹಂಚುವುದರ ಹಿಂದಿನ ತಾರ್ಕಿಕತೆಯನ್ನು ಅರ್ಥ ಮಾಡಿಕೊಳ್ಳಲು ಹೈಕೋರ್ಟ್ ವಿಫಲವಾಗಿದೆ.

  • ಹೈಕೋರ್ಟ್‌ ನಿರ್ದೇಶನದಂತೆ ಬೆಂಗಳೂರಿಗೆ ಮಾತ್ರ ಆಮ್ಲಜನಕ ಪೂರೈಸಿದರೆ ಉಳಿದೆಡೆ ಅಭಾವ ತಲೆದೋರಿ ಎರಡನೇ ಅಲೆ ವಿರುದ್ಧದ ಹೋರಾಟ ಸಂಪೂರ್ಣ ಅಸ್ತವ್ಯಸ್ತವಾಗುತ್ತದೆ.

  • ಹೈಕೋರ್ಟ್‌ ಆದೇಶ ಸಂಪನ್ಮೂಲದ ಅಸಮರ್ಪಕ ನಿರ್ವಹಣೆಗೆ ಕಾರಣವಾಗಿ ಈಗಾಗಲೇ ಭಾರವಾಗಿರುವ ವ್ಯವಸ್ಥೆಯಲ್ಲಿ ಇನ್ನಷ್ಟು ಗೊಂದಲ ಸೃಷ್ಟಿಸುತ್ತದೆ.

  • ಸೀಮಿತ ಸಂಪನ್ಮೂಲಕ್ಕಾಗಿ ಉಳಿದ ರಾಜ್ಯಗಳಲ್ಲಿ ಪೈಪೋಟಿ ಉಂಟಾಗುತ್ತದೆ.

  • ಬಿಕ್ಕಟ್ಟನ್ನು ಎದುರಿಸಲು ಸಮಗ್ರ ರಾಷ್ಟ್ರೀಯ ವಿಧಾನದ ಮೊರೆ ಹೋಗಬೇಕಿರುವುದರಿಂದ ಸುಪ್ರೀಂಕೋರ್ಟ್‌ ಇದನ್ನು ಪರಿಶೀಲಿಸಬೇಕಾಗುತ್ತದೆ.

ಬುಧವಾರ ನಡೆದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ರಾಜ್ಯಕ್ಕೆ ಅಗತ್ಯವಾದ ಆಮ್ಲಜನಕವನ್ನು ಕೇಂದ್ರ ಸರ್ಕಾರ ಪೂರೈಸುತ್ತಿಲ್ಲ ಎಂಬುದನ್ನು ಗಮನಿಸಿತ್ತು. ಚಾಮರಾಜನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಆಮ್ಲಜನಕ ದೊರೆಯದೆ ಭಾನುವಾರ ರಾತ್ರಿ 24 ಮಂದಿ ಸಾವನ್ನಪ್ಪಿದ್ದರು.