ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಭಾರತದ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ಅಧಿಸೂಚನೆ ಹೊರಡಿಸಿದ್ದಾರೆ.
ಸಿಜೆಐ ಚಂದ್ರಚೂಡ್ ಅವರು ಶಿಫಾರಸ್ಸು ಮಾಡಿದ್ದ ನ್ಯಾ. ಸಂಜೀವ್ ಖನ್ನಾ ಅವರ ಹೆಸರನ್ನು ಕೇಂದ್ರ ಸರ್ಕಾರವು ಒಪ್ಪಿದ ಬೆನ್ನಿಗೇ ರಾಷ್ಟ್ರಪತಿ ಭವನದಿಂದ ಅಧಿಕೃತವಾಗಿ ನೇಮಕಾತಿ ಅಧಿಸೂಚನೆ ಹೊರಬಿದ್ದಿದೆ.
ಕಾನೂನು ಮತ್ತು ನ್ಯಾಯ ಇಲಾಖೆಯ ಸ್ವತಂತ್ರ ಉಸ್ತುವಾರಿ ಅರ್ಜುನ್ ಮೇಘವಾಲ್ ಎಕ್ಸ್‌ನಲ್ಲಿ ಈ ಬೆಳವಣಿಗೆಯನ್ನು ಹಂಚಿಕೊಂಡಿದ್ದಾರೆ.
ಹಾಲಿ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ನವೆಂಬರ್ 10ರಂದು ನಿವೃತ್ತಿ ಹೊಂದಲಿದ್ದು, 51ನೇ ಸಿಜೆಐ ಆಗಿ ನ್ಯಾಯಮೂರ್ತಿ ಖನ್ನಾ ಅವರು ನವೆಂಬರ್ 11ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಖನ್ನಾ ಅವರ ಅಧಿಕಾರ ಅವಧಿಯು 183 ದಿನಗಳಿರಲಿದ್ದು, 2025ರ ಮೇ 13ಕ್ಕೆ ನಿವೃತ್ತಿ ಹೊಂದಲಿದ್ದಾರೆ.
ನ್ಯಾ. ಖನ್ನಾ ಅವರು 1983ರಲ್ಲಿ ತೆರಿಗೆ, ಸಾಂವಿಧಾನಿಕ ಕಾನೂನು, ಮಧ್ಯಸ್ಥಿಕೆ, ವಾಣಿಜ್ಯ ಮತ್ತು ಪರಿಸರ ಸಂಬಂಧಿ ವಿಚಾರಗಳಲ್ಲಿ ಕಾನೂನು ಪ್ರಾಕ್ಟೀಸ್ ಆರಂಭಿಸಿದ್ದರು. 2004ರಲ್ಲಿ ರಾಷ್ಟ್ರ ರಾಜಧಾನಿ ವ್ಯಾಪ್ತಿಯ ದೆಹಲಿಯಲ್ಲಿ ಸಿವಿಲ್ ಪ್ರಕರಣಗಳನ್ನು ನಡೆಸಲು ರಾಜ್ಯ ಸರ್ಕಾರದ ವಕೀಲರಾಗಿ ನೇಮಕಗೊಂಡಿದ್ದರು. 2005ರಲ್ಲಿ ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ನ್ಯಾ. ಖನ್ನಾ ಅವರನ್ನು ಮರು ವರ್ಷ ಕಾಯಂಗೊಳಿಸಲಾಗಿತ್ತು. 2019ರ ಜನವರಿ 18ರಂದು ಖನ್ನಾ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿತ್ತು.
ನ್ಯಾ. ಸಂಜೀವ್ ಖನ್ನಾ ಅವರು ಎಡಿಎಂ ಜಬಲ್‌ಪುರ ಪ್ರಕರಣದಲ್ಲಿ ಭಿನ್ನ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹನ್ಸ್‌ರಾಜ್ ಖನ್ನಾ ಅವರ ಸಂಬಂಧಿಯಾಗಿದ್ದಾರೆ.
ನ್ಯಾ. ಖನ್ನಾ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಮಾನ್ಯತೆ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ಎತ್ತಿ ಹಿಡಿದ ಹಾಗೂ ಚುನಾವಣಾ ಬಾಂಡ್ ರದ್ದುಗೊಳಿಸಿದ್ದ ಮಹತ್ವದ ಸಾಂವಿಧಾನಿಕ ಪೀಠಗಳ ಭಾಗವಾಗಿದ್ದರು.
ವಿವಿಪ್ಯಾಟ್ ಸ್ಲಿಪ್ ಮತ್ತು ಇವಿಎಂ ಮತ ಹೊಂದಾಣಿಕೆಗೆ ಕೋರಿದ್ದ ಅರ್ಜಿಯನ್ನು ನ್ಯಾ. ಖನ್ನಾ ನೇತೃತ್ವದ ವಿಭಾಗೀಯ ಪೀಠ ತಿರಸ್ಕರಿಸಿತ್ತು. ಅಲ್ಲದೇ, ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಚುನಾವಣಾ ಆಯುಕ್ತರನ್ನಾಗಿ ಐಎಎಸ್ ಅಧಿಕಾರಿಗಳಾದ ಜ್ಞಾನೇಶ್ ಕುಮಾರ್ ಮತ್ತು ಡಾ. ಸುಖ್ಬೀರ್ ಸಿಂಗ್ ಸಂಧು ಅವರ ನೇಮಕಾತಿಗೆ ತಡೆ ನೀಡಲು ನಿರಾಕರಿಸಿತ್ತು.
ದೆಹಲಿ ಅಬಕಾರಿ ನೀತಿಯ ಭಾಗವಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜುಲೈ 12ರಂದು ನ್ಯಾ. ಖನ್ನಾ ಅವರ ನೇತೃತ್ವದ ಪೀಠವು ಜಾಮೀನು ಮಂಜೂರು ಮಾಡಿತ್ತು. ಇದೇ ಪ್ರಕರಣದಲ್ಲಿ ಆಪ್ ನಾಯಕ, ಸಂಸದ ಸಂಜಯ್ ಸಿಂಗ್ ಅವರಿಗೂ ಜಾಮೀನು ನೀಡಲಾಗಿತ್ತು.
2019ರಲ್ಲಿ ತಮ್ಮನ್ನು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ನೀಡಿದ್ದು ತಮಗೆ ಅಚ್ಚರಿ ತಂದಿದೆ ಎಂದು ನ್ಯಾ ಖನ್ನಾ ಹೇಳಿದ್ದರು.
ಒಬ್ಬ ನ್ಯಾಯಮೂರ್ತಿಯಾಗಿ ತಮ್ಮ ತತ್ವವು ಕಾನೂನು ಪಾಲಕನಾಗಿರುವುದಾಗಿದೆಯೇ ಹೊರತು ಕಾನೂನು ಸೃಷ್ಟಿಸುವುದಲ್ಲ ಎಂದು ಅವರು ಹೇಳಿದ್ದರು. ಅತಿ ಉತ್ಸಾಹವು ನ್ಯಾಯಮೂರ್ತಿಯ ಗುಣವಲ್ಲ ಎಂದು ಅಭಿಪ್ರಾಯಪಟ್ಟಿದ್ದರು.