ಸುದ್ದಿಗಳು

ಆರು ವಕೀಲರನ್ನು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಿ ಅಧಿಸೂಚನೆ ಪ್ರಕಟಿಸಿದ ಕೇಂದ್ರ ಸರ್ಕಾರ

ಜೂನ್‌ 2ರಂದು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಆರು ವಕೀಲರ ಹೆಸರನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳ ಹುದ್ದೆಗೆ ಶಿಫಾರಸ್ಸು ಮಾಡಿತ್ತು.

Bar & Bench

ಕರ್ನಾಟಕ ಹೈಕೋರ್ಟ್‌ಗೆ ಆರು ನೂತನ ಹೆಚ್ಚುವರಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಕೇಂದ್ರ ಸರ್ಕಾರವು ಶುಕ್ರವಾರ ಅಧಿಸೂಚನೆ ಪ್ರಕಟಿಸಿದೆ.

ವಕೀಲರಾದ ರಾಘವೇಂದ್ರ ಸೀತಾರಾಮ್ ಶ್ರೀವತ್ಸ, ಹೇಮಾ ಕುಲಕರ್ಣಿ, ಸುಬ್ರಹ್ಮಣ್ಯ ರಂಗರಾವ್, ಟಿ ಪಿ ವಿವೇಕಾನಂದ, ಬಿ ಪ್ರಮೋದ್, ಎಚ್‌ ಶಾಂತಿಭೂಷಣ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿಗಳ ಆದೇಶದ ಮೇರೆಗೆ ಕೇಂದ್ರ ಕಾನೂನು ಮತ್ತು ನ್ಯಾಯ ಇಲಾಖೆಯ ಜಂಟಿ ಕಾರ್ಯದರ್ಶಿ ಜಗನ್ನಾಥ ಶ್ರೀನಿವಾಸನ್ ಅವರು ಆದೇಶ ಹೊರಡಿಸಿದ್ದಾರೆ.

ನೇಮಕವಾದ ಎಲ್ಲ ನ್ಯಾಯಮೂರ್ತಿಗಳು ತಾವು ಅಧಿಕಾರ ವಹಿಸಿಕೊಳ್ಳುವ ದಿನಾಂಕದಿಂದ ಎರಡು ವರ್ಷಗಳ ಅವಧಿಗೆ ಹೆಚ್ಚುವರಿ ನ್ಯಾಯಮೂರ್ತಿಗಳಾಗಿರಲಿದ್ದಾರೆ.

ಜೂನ್‌ 2ರಂದು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಆರು ವಕೀಲರ ಹೆಸರನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳ ಹುದ್ದೆಗೆ ಶಿಫಾರಸ್ಸು ಮಾಡಿತ್ತು.

ವಕೀಲರಾದ ರಾಘವೇಂದ್ರ ಶ್ರೀವತ್ಸ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ಹಲವು ಮಹತ್ವದ ಪ್ರಕರಣಗಳಲ್ಲಿ ವಾದಿಸಿದ್ದಾರೆ. ಉಡುಪಿಯ ಶಿರೂರು ಮಠಕ್ಕೆ 16 ವರ್ಷದ ಅಪ್ರಾಪ್ತರನ್ನು ಮುಖ್ಯ ಮಠಾಧಿಪತಿಯನ್ನಾಗಿ ನೇಮಿಸಿರುವುದರ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿದ್ದ ಪ್ರಕರಣದಲ್ಲಿಯೂ ರಾಘವೇಂದ್ರ ಶ್ರೀವತ್ಸ ಅವರು ವಾದ ಮಂಡನೆ ಮಾಡಿದ್ದರು.

ಎಚ್‌ ಶಾಂತಿಭೂಷಣ್‌ ಅವರನ್ನು ಕೇಂದ್ರ ಸರ್ಕಾರವು 2021ರಲ್ಲಿ ಸಹಾಯಕ ಸಾಲಿಸಿಟರ್‌ ಜನರಲ್‌ ಆಗಿ ನೇಮಕ ಮಾಡಿತ್ತು. ಆನಂತರ ಡೆಪ್ಯೂಟಿ ಸಾಲಿಸಿಟರ್ ಜನರಲ್‌ ಆಗಿ ಪದೋನ್ನತಿ ಹೊಂದಿದ್ದ ಅವರು, ಇಂದಿನವರೆಗೂ ಆ ಹುದ್ದೆಯಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದರು.

Notification 06 Bar_0001.pdf
Preview