ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಅವರನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಿಸಿ ಕೇಂದ್ರ ಸರ್ಕಾರವು ಅಧಿಸೂಚನೆ ಪ್ರಕಟಿಸಿದೆ.
ಮೇ 26ರಂದು ನಡೆದಿದ್ದ ಸುಪ್ರೀಂ ಕೋರ್ಟ್ ಕೊಲಿಜಿಯಂ ಸಭೆಯಲ್ಲಿ ನ್ಯಾ. ಬ್ಯಾನರ್ಜಿ ಅವರ ಹೆಸರು ಶಿಫಾರಸ್ಸು ಮಾಡಲಾಗಿತ್ತು.
1987ರಲ್ಲಿ ಅಲಾಹಾಬಾದ್ ವಿಶ್ವವಿದ್ಯಾಲಯದ ಸಿಎಂಪಿ ಪದವಿ ಕಾಲೇಜಿನಲ್ಲಿ ನ್ಯಾ. ಬ್ಯಾನರ್ಜಿ ಅವರು ಕಾನೂನು ಪದವಿ ಪೂರ್ಣಗೊಳಿಸಿದ್ದರು. 1989ರ ಜನವರಿ 8ರಂದು ವಕೀಲರಾಗಿ ಅವರು ನೋಂದಣಿ ಮಾಡಿಸಿದ್ದರು. ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಅವರು ಪ್ರಮುಖವಾಗಿ ಸಿವಿಲ್ ವಿಚಾರಗಳಲ್ಲಿ ಪ್ರಾಕ್ಟೀಸ್ ನಡೆಸಿದ್ದರು.
2017ರ ಸೆಪ್ಟೆಂಬರ್ 22ರಂದು ನ್ಯಾ. ಬ್ಯಾನರ್ಜಿ ಅವರನ್ನು ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿತ್ತು. 2019ರ ಸೆಪ್ಟೆಂಬರ್ 6ರಂದು ಕಾಯಂ ನ್ಯಾಯಮೂರ್ತಿಯಾಗಿ ಪ್ರಮಾಣ ಸ್ವೀಕರಿಸಿದ್ದರು.