ಶೌಚಗುಂಡಿ ಹಾಗೂ ಒಳಚರಂಡಿ ಸ್ವಚ್ಚತೆಗೆ ಮಾನವ ಬಳಕೆಯನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಸಲುವಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹದಿನಾಲ್ಕು ಪ್ರಮುಖ ನಿರ್ದೇಶನಗಳನ್ನು ನೀಡಿದೆ [ಡಾ. ಬಲರಾಮ್ ಸಿಂಗ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಶೌಚಗುಂಡಿ ಹಾಗೂ ಒಳಚರಂಡಿ ಸ್ವಚ್ಚತೆಗೆ ಮಾನವ ಬಳಕೆ ವಿರುದ್ಧದ ಹೋರಾಟವು ಸಂಪತ್ತಿನ ಕುರಿತಾದ ಹೋರಾಟವಲ್ಲ ಬದಲಿಗೆ ಮಾನವ ಘನತೆಗೆ ಸಂಬಂಧಿಸಿ ಹೋರಾಟ ಎಂದು ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಅರವಿಂದ್ ಕುಮಾರ್ ಅವರಿದ್ದ ಪೀಠ ಹೇಳಿದೆ.
"ನಮ್ಮದು ಸಂಪತ್ತಿಗಾಗಿ ನಡೆಸುತ್ತಿರುವ ಹೋರಾಟ ಅಲ್ಲ, ಬದಲಿಗೆ ಮಾನವ ಘನತೆಗಾಗಿ ನಡೆದಿರುವ ಹೋರಾಟ. ಸಂವಿಧಾನ ರಚನಾಕಾರರು ನೀಡಿದ ಬದ್ಧತೆ ಇದಾಗಿದ್ದು ನಾವೆಲ್ಲರೂ ಪಾಲಿಸಬೇಕು. ಒಕ್ಕೂಟ (ಕೇಂದ್ರ ಸರ್ಕಾರ) ಮತ್ತು ರಾಜ್ಯಗಳು ಶೌಚಗುಂಡಿಗಳು, ಒಳಚರಂಡಿ ಸ್ವಚ್ಚತೆಗೆ ಮಾನವ ಬಳಕೆ ಸಂಪೂರ್ಣ ನಿರ್ಮೂಲನೆಯಾಗುವಂತೆ ನೋಡಿಕೊಳ್ಳಬೇಕಿದೆ" ಎಂದು ನ್ಯಾಯಾಲಯ ನುಡಿದಿದೆ.
ಹಕ್ಕುಗಳನ್ನು ಕೇವಲ ಭ್ರಮೆಯಾಗಲು ಬಿಡದೆ ನಿಜವಾದ ಸಹೋದರತೆ ಅಳವಡಿಸಿಕೊಳ್ಳಬೇಕಿರುವುದು ಜನರ ಕರ್ತವ್ಯ ಎಂದು ಕೂಡ ನ್ಯಾಯಾಲಯ ಈ ಸಂದರ್ಭದಲ್ಲಿ ತಿಳಿಸಿತು.
ಶೌಚಗುಂಡಿ ಸ್ವಚ್ಛಗೊಳಿಸುವ ವೇಳೆ ಮೃತಪಡುವವರ ಕುಟುಂಬಕ್ಕೆ ₹ 30 ಲಕ್ಷ, ಅಂಗವೈಕಲ್ಯಕ್ಕೀಡಾಗುವವರಿಗೆ ₹ 20 ಲಕ್ಷ, ಗಾಯಗೊಂಡವರಿಗೆ ಕನಿಷ್ಠ ₹ 10 ಲಕ್ಷ ಪರಿಹಾರ ನೀಡುವಂತೆ ತಾನು ನೀಡಿರುವ ಹದಿನಾಲ್ಕು ನಿರ್ದೇಶನಗಳನ್ನು ಪಾಲಿಸಲು ನ್ಯಾಯಾಲಯ ಸೂಚಿಸಿದೆ.
"ಸರ್ಕಾರದ ಎಲ್ಲಾ ಅಂಗಗಳು ಸಮನ್ವಯ ಸಾಧಿಸಬೇಕು. ಇಂತಹ ಪ್ರಕರಣಗಳ ಮೇಲ್ವಿಚಾರಣೆಯಿಂದ ಹೈಕೋರ್ಟ್‌ಗಳು ದೂರ ಇರುವಂತಿಲ್ಲ" ಎಂದು ನ್ಯಾಯಾಲಯ ಹೇಳಿತು.