ಕಾಂಗ್ರೆಸ್ ಪಕ್ಷದ ಚಿಹ್ನೆ
ಕಾಂಗ್ರೆಸ್ ಪಕ್ಷದ ಚಿಹ್ನೆ 
ಸುದ್ದಿಗಳು

ಚುನಾವಣೆ ಮುಗಿಯುವವರೆಗೂ ಕಾಂಗ್ರೆಸ್ ವಿರುದ್ಧ ಕ್ರಮ ಇಲ್ಲ: ಸುಪ್ರೀಂಗೆ ಕೇಂದ್ರದ ಸ್ಪಷ್ಟನೆ

Bar & Bench

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಪಕ್ಷದಿಂದ ಸುಮಾರು 3,500 ಕೋಟಿ ರೂ.ಗಳ ಆದಾಯ ತೆರಿಗೆ ಬಾಕಿ ವಸೂಲಿ ಸಂಬಂಧ ಮುಂಬರುವ ಸಾರ್ವತ್ರಿಕ ಚುನಾವಣೆ ಮುಗಿಯುವವರೆಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ.

ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರಿದ್ದ ಪೀಠದೆದುರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಭರವಸೆ ನೀಡಿದರು.

ಈ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ಉದ್ಭವಿಸುವ ಸಮಸ್ಯೆಗಳ ಬಗ್ಗೆ ಇನ್ನಷ್ಟೇ ತೀರ್ಪು ನೀಡಬೇಕಾಗಿದೆಯಾದರೂ ಈಗಿನ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಇಲಾಖೆ ಪ್ರಕರಣವನ್ನು ಚುರುಕುಗೊಳಿಸಲು ಹೋಗುತ್ತಿಲ್ಲ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಜೊತೆಗೆ ಅಂದಾಜು 3,500 ಕೋಟಿ ರೂಪಾಯಿ ತೆರಿಗೆ ಬೇಡಿಕೆಗೆ ಸಂಬಂಧಿಸಿದಂತೆ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳುತ್ತಿಲ್ಲ‌ ಎಂದು ಅದು ಹೇಳುತ್ತಿದೆ ಎಂದ ನ್ಯಾಯಾಲಯ ಜುಲೈ ಎರಡನೇ ವಾರದಲ್ಲಿ ಪ್ರಕರಣವನ್ನು ವಿಚಾರಣೆ ನಡೆಸುವುದಾಗಿ ತಿಳಿಸಿತು.

ಆದಾಯ ತೆರಿಗೆ ಬೇಡಿಕೆಗಳ ವಿರುದ್ಧ ಕಾಂಗ್ರೆಸ್ ಪಕ್ಷ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಇದು 2016 ರ ತೀರ್ಪಿನೊಂದಿಗೆ ನಂಟು ಹೊಂದಿದೆ ಎಂದು ಎಸ್‌ ಜಿ ತುಷಾರ್ ಮೆಹ್ತಾ ಮಾಹಿತಿ ನೀಡಿದರು.

ಕಾಂಗ್ರೆಸ್ ಪಕ್ಷವು ಈ ವರ್ಷ ಸುಮಾರು 134 ಕೋಟಿ ರೂ.ಗಳ ಆದಾಯ ತೆರಿಗೆ ಬಾಕಿ ಪಾವತಿಸಿದ್ದರೆ, ಈ ಹಿಂದೆ ನಿಗದಿಪಡಿಸಿದ ಮಾನದಂಡಗಳ ಆಧಾರದ ಮೇಲೆ ಈಗ ಅದು ರೂ 1,700 ಕೋಟಿ ಪಾವತಿಸಬೇಕಾಗುತ್ತದೆ ಎಂದು ಮೆಹ್ತಾ ಹೇಳಿದರು.

ಮುಂದಿನ ಲೋಕಸಭಾ ಚುನಾವಣೆ ಮುಗಿಯುವವರೆಗೆ ಬಾಕಿ ವಸೂಲಾತಿ ಕ್ರಮ ಕೈಗೊಳ್ಳುವುದಿಲ್ಲ ಎಂದು ಅವರು ಈ ವೇಳೆ ಭರವಸೆ ನೀಡಿದರು.

ಕೇಂದ್ರ ಸರ್ಕಾರ ನೀಡಿದ ವಿನಾಯಿತಿ ಬಗ್ಗೆ ಕಾಂಗ್ರೆಸ್ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ ಅಚ್ಚರಿ ವ್ಯಕ್ತಪಡಿಸಿದರು.

"ನೀವು (ಕಾಂಗ್ರೆಸ್) ಯಾವಾಗಲೂ ಯಾರ ಬಗ್ಗೆಯೂ ನಕಾರಾತ್ಮಕ ಗ್ರಹಿಕೆ ಹೊಂದಬಾರದು!" ಎಂದು ನ್ಯಾಯಮೂರ್ತಿ ನಾಗರತ್ನ ಮೌಖಿಕವಾಗಿ ಅಭಿಪ್ರಾಯಪಟ್ಟರು.

"ನನಗೆ ಮಾತುಗಳೇ ಹೊರಡುತ್ತಿಲ್ಲ ಮತ್ತು ಕೆಲವೇ ಕೆಲವು ಸಂದರ್ಭಗಳಲ್ಲಿ ನನಗೆ ಹೀಗಾಗುತ್ತದೆ" ಎಂದು ಸಿಂಘ್ವಿ ಹೇಳಿದರು.

ಮಾರ್ಚ್ 27, 28, 29 ರಂದು ವಿಭಾಗೀಯ ಮೌಲ್ಯಮಾಪನವಿತ್ತು ಆದಾಯ ತೆರಿಗೆ ಅಧಿಕಾರಿಗಳು ಕಾಂಗ್ರೆಸ್‌ನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ₹ 135 ಕೋಟಿ ಸಂಗ್ರಹಿಸಿದ್ದಾರೆ, ಕಾಂಗ್ರೆಸ್‌ ಲಾಭ ಗಳಿಸುವ ಸಂಸ್ಥೆಯಲ್ಲ ಬದಲಿಗೆ ಕೇವಲ ರಾಜಕೀಯ ಪಕ್ಷ ಎಂದು ಅವರು ಹೇಳಿದರು.

ಈ ಹಂತದಲ್ಲಿ ಮೆಹ್ತಾ ಚುನಾವಣೆ ಮುಗಿಯುವವರೆಗೆ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಮೆಹ್ತಾ ಹೇಳಿದರು. ಅವರ ವಾದ ದಾಖಲಿಸಿಕೊಂಡ ನ್ಯಾಯಾಲಯ ಪ್ರಕರಣವನ್ನು ಜುಲೈಗೆ ಮುಂದೂಡಿತು.

2014-15, 2015-16 ಮತ್ತು 2016-17 ಮತ್ತು 2017-18, 2018-19, 2019-20 ಮತ್ತು 2020-21ರ ತೆರಿಗೆ ಮೌಲ್ಯಮಾಪನ ವರ್ಷಗಳಿಗೆ ಸಂಬಂಧಿಸಿದಂತೆ ಪಕ್ಷದ ವಿರುದ್ಧ ಮೌಲ್ಯಮಾಪನ ಪ್ರಕ್ರಿಯೆ ಪುನರಾರಂಭಿಸುವಂತೆ ಆದಾಯ ತೆರಿಗೆ ಇಲಾಖೆ ನಿರ್ಧಾರದ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿತ್ತು. ಇದಕ್ಕೂ ಮೊದಲು, ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ಸಂಬಂಧಿತ ವಿಷಯಗಳಲ್ಲಿ ಕಾಂಗ್ರೆಸ್‌ಗೆ ಯಾವುದೇ ಪರಿಹಾರ ನೀಡಲು ನಿರಾಕರಿಸಿತ್ತು.