Pegasus, MEITY  
ಸುದ್ದಿಗಳು

ಪೆಗಸಸ್ ಹಗರಣದ ತನಿಖೆಗಾಗಿ ತಜ್ಞರ ಸಮಿತಿ ರಚಿಸುವುದಾಗಿ ಸುಪ್ರೀಂಕೋರ್ಟ್‌ಗೆ ತಿಳಿಸಿದ ಕೇಂದ್ರ: ಆರೋಪಗಳ ನಿರಾಕರಣೆ

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮೂಲಕ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕೇಂದ್ರದ ವಿರುದ್ಧದ ಆರೋಪಗಳನ್ನು ಖಡಾಖಂಡಿತವಾಗಿ ಅಲ್ಲಗಳೆಯಲಾಗಿದೆ.

Bar & Bench

ಪೆಗಸಸ್ ಹಗರಣದ ತನಿಖೆಗಾಗಿ ತಜ್ಞರ ಸಮಿತಿ ರಚಿಸುವುದಾಗಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರ ಬಹಿರಂಗಪಡಿಸಿದೆ. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮೂಲಕ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕೇಂದ್ರದ ವಿರುದ್ಧದ ಎಲ್ಲಾ ಆರೋಪಗಳನ್ನು ಖಡಾಖಂಡಿತವಾಗಿ ಅಲ್ಲಗಳೆಯಲಾಗಿದೆ.

"… ಕೆಲ ಪಟ್ಟಭದ್ರ ಹಿತಾಸಕ್ತಿಗಳಿಂದ ಹರಡಿರುವ ತಪ್ಪು ಮಾಹಿತಿಯನ್ನು ಹೋಗಲಾಡಿಸುವ ದೃಷ್ಟಿಯಿಂದ ಮತ್ತು ಪ್ರಸ್ತಾಪಿಸಿದ ಸಮಸ್ಯೆಗಳನ್ನು ಸರ್ವ ರೀತಿಯಲ್ಲಿ ತನಿಖೆ ಮಾಡುವ ಉದ್ದೇಶದಿಂದ, ಭಾರತದ ಒಕ್ಕೂಟವು ಇದಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿಯನ್ನು ರಚಿಸುತ್ತದೆ" ಎಂದು ಅಫಿಡವಿಟ್‌ ತಿಳಿಸಿದೆ.

ಜೊತೆಗೆ "ಮುಖ್ಯ ಅರ್ಜಿಯ ಮತ್ತು ಇತರ ಸಂಬಂಧಿತ ಅರ್ಜಿಗಳನ್ನು ಕೇವಲ ಪರಿಶೀಲಿಸಿದರೆ ಸಾಕು ಇವು ಊಹೆ ಅಥವಾ ಕಪೋಲಕಲ್ಪಿತ ಇಲ್ಲವೇ ಆಧಾರರಹಿತ ಮಾಧ್ಯಮ ವರದಿಗಳು ಅಥವಾ ಅಪೂರ್ಣ ಇಲ್ಲವೇ ದೃಢೀಕರಿಸದ ವಿಚಾರಗಳನ್ನು ಆಧರಿಸಿವೆ ಎಂಬದು ಸ್ಪಷ್ಟವಾಗುತ್ತದೆ. ಗೌರವಾನ್ವಿತ ನ್ಯಾಯಾಲಯ ರಿಟ್‌ ನ್ಯಾಯವ್ಯಾಪ್ತಿ ಆಧರಿಸಲು ಇದೇ ಆಧಾರವಾಗಿರಬಾರದು” ಎಂದು ಹೇಳಲಾಗಿದೆ.

ಪೆಗಸಸ್‌ ಹಗರಣದಲ್ಲಿ ಕೇಂದ್ರ ಭಾಗಿಯಾಗಿರುವುದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಈಗಾಗಲೇ ರೈಲ್ವೆ, ಸಂವಹನ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ಕೂಡ ಕೇಂದ್ರ ತಿಳಿಸಿದೆ. ಕೇಂದ್ರವು ಅರ್ಜಿಗಳಿಗೆ ಪ್ಯಾರಾಗಳಲ್ಲಿ ಉತ್ತರ ಸಲ್ಲಿಸಿಲ್ಲ ಆದರೆ ಅದನ್ನೇ ಸತ್ಯ ಒಪ್ಪಿಕೊಂಡಂತೆ ಅಥವಾ ಅಥವಾ ಅರ್ಜಿಗಳ ವಾದ ಮನ್ನಿಸಿದಂತೆ ಎಂದು ಪರಿಗಣಿಸಬಾರದು ಎಂಬುದಾಗಿ ಅಫಿಡವಿಟ್‌ ಕೋರಿದೆ.

ಪೆಗಸಸ್‌ ಹಗರಣದ ತನಿಖೆಗೆ ವಿಶೇಷ ತನಿಖಾ ತಂಡ ನೇಮಕ ಮಾಡಬೇಕು, ನ್ಯಾಯಾಂಗ ತನಿಖೆ ನಡೆಸಬೇಕು, ಹಾಗೂ ನಾಗರಿಕರ ಮೇಲೆ ಬೇಹು ತಂತ್ರಾಂಶ ಬಳಸಿದ ಬಗ್ಗೆ ಸರ್ಕಾರ ಮಾಹಿತಿ ಬಹಿರಂಗಪಡಿಸಬೇಕು ಎಂದು ಕೋರಿ ಸಲ್ಲಿಸಿರುವ ವಿವಿಧ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ಈ ಹಿಂದಿನ ವಿಚಾರಣೆ ವೇಳೆ ಪೆಗಸಸ್‌ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಆರೋಪಗಳು ನಿಜವೇ ಆಗಿದ್ದರೆ ಇದು ಗಂಭೀರವಾದ ಪ್ರಕರಣ. ಆದರೆ, ಇದರಿಂದ ಬಾಧಿತರಾದವರು ನ್ಯಾಯಾಲಯದ ಮೆಟ್ಟಿಲೇರುವುದಕ್ಕೂ ಮುನ್ನ ಪೊಲೀಸರಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸುವ ಪ್ರಯತ್ನ ಮಾಡಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿತ್ತು.