ಕ್ರಿಮಿನಲ್ ಕಾನೂನುಗಳು
ಕ್ರಿಮಿನಲ್ ಕಾನೂನುಗಳು 
ಸುದ್ದಿಗಳು

ಮೂರು ಕ್ರಿಮಿನಲ್ ಕಾನೂನು ಮಸೂದೆಗಳನ್ನು ಹಿಂಪಡೆದು ಮರಳಿ ಮಂಡಿಸಿದ ಕೇಂದ್ರ ಸರ್ಕಾರ

Bar & Bench

ಭಾರತೀಯ ನ್ಯಾಯ (ದ್ವಿತೀಯ) ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ (ದ್ವಿತೀಯ) ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ (ದ್ವಿತೀಯ) ಅಧಿನಿಯಮ- 2023 ಎಂಬ ಮೂರು ಕ್ರಿಮಿನಲ್ ಕಾನೂನು ಮಸೂದೆಗಳನ್ನು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿನಲ್ಲಿ ಮರು ಮಂಡನೆ ಮಾಡಿದೆ.

ಈ ಮೂರು ಕ್ರಿಮಿನಲ್ ಕಾನೂನು ಮಸೂದೆಗಳನ್ನು ಕೇಂದ್ರ ಸರ್ಕಾರ ಸೋಮವಾರ ಹಿಂಪಡೆದಿತ್ತು. ಸಂಸದೀಯ ಸ್ಥಾಯಿ ಸಮಿತಿ ಶಿಫಾರಸಿನಂತೆ ಬದಲಾವಣೆಗಳನ್ನು ಮಾಡಿ ಬಳಿಕ ಮಸೂದೆಗಳನ್ನು ಮತ್ತೆ ಮಂಡಿಸಲಾಗುವುದು ಎಂದು ಸರ್ಕಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿತ್ತು.

ಭಾರತೀಯ ದಂಡ ಸಂಹಿತೆ (ಐಪಿಸಿ)- 1860, 1973ರ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಹಾಗೂ 1872ರ ಭಾರತೀಯ ಸಾಕ್ಷ್ಯ ಕಾಯಿದೆ ಬದಲಿಸಲು ಹೊಸ ಕ್ರಿಮಿನಲ್ ಕಾನೂನು ಮಸೂದೆಗಳನ್ನು ಆಗಸ್ಟ್‌ನಲ್ಲಿ ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಮಂಡಿಸಲಾಗಿತ್ತು.

ಒಟ್ಟು18 ರಾಜ್ಯಗಳು, 7 ಕೇಂದ್ರಾಡಳಿತ ಪ್ರದೇಶಗಳು, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳು, 22 ಕಾನೂನು ವಿಶ್ವವಿದ್ಯಾಲಯಗಳು, 142 ಸಂಸದರು, 270 ಶಾಸಕರು ಹಾಗೂ ವಿವಿಧ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ಮೂರು ಕಾಯಿದೆಗಳನ್ನು ರೂಪಿಸುವ ಪ್ರಕ್ರಿಯೆ ನಡೆದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯನ್ನುದ್ದೇಶಿಸಿ ಹೇಳಿದ್ದರು. ಇದಕ್ಕಾಗಿ ನಾಲ್ಕು ವರ್ಷಗಳ ಕಾಲ ಒಟ್ಟು 158 ಸಭೆಗಳನ್ನು ನಡೆಸಲಾಗಿತ್ತು ಎಂದು ಮಾಹಿತಿ ನೀಡಿದ್ದರು.

ಐಪಿಸಿಯಿಂದ ಎರವಲು ಪಡೆದ 175 ಸೆಕ್ಷನ್‌ಗಳು (ಅವುಗಳಲ್ಲಿ ಕೆಲವು ಬದಲಾವಣೆಗೆ ಒಳಗಾಗಿವೆ) ಸೇರಿದಂತೆ ಭಾರತೀಯ ನ್ಯಾಯ ಸಂಹಿತೆ 356 ಸೆಕ್ಷನ್‌ಗಳನ್ನು ಒಳಗೊಂಡಿದೆ. ಐಪಿಸಿಯ 22 ಸೆಕ್ಷನ್‌ಗಳನ್ನು ರದ್ದುಪಡಿಸಲಾಗಿದ್ದು ಹೊಸದಾಗಿ 9 ಸೆಕ್ಷನ್‌ಗಳನ್ನು ಸೇರಿಸಲಾಗಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಲ್ಲಿ 533 ಸೆಕ್ಷನ್‌ಗಳಿದ್ದು ಅದರಲ್ಲಿ 150 ಸೆಕ್ಷನ್‌ಗಳನ್ನು ಸಿಆರ್‌ಪಿಸಿಯಿಂದ ಪರಿಷ್ಕರಿಸಲಾಗಿದೆ 22 ಸೆಕ್ಷನ್‌ಗಳು ರದ್ದಾಗಿದ್ದು 9 ಹೊಸದಾಗಿ ಸೇರ್ಪಡೆಯಾಗಿವೆ.

ಭಾರತೀಯ ಸಾಕ್ಷ್ಯ ಅಧಿನಿಯಮ 170 ಸೆಕ್ಷನ್‌ಗಳನ್ನು ಒಳಗೊಂಡಿದೆ. ಇವುಗಳಲ್ಲಿ, ಸಾಕ್ಷ್ಯ ಕಾಯಿದೆಯಿಂದ ಪಡೆದ 23 ಸೆಕ್ಷನ್‌ಗಳನ್ನು ತಿದ್ದುಪಡಿ ಮಾಡಲಾಗಿದೆ, 1 ಸೆಕ್ಷನ್‌ ಸಂಪೂರ್ಣ ಹೊಸದಾಗಿದ್ದು 5 ಸೆಕ್ಷನ್‌ಗಳನ್ನು ತೆಗೆದುಹಾಕಲಾಗಿದೆ.