ಸುದ್ದಿಗಳು

ಸಮರ ಯೋಧರ ಪಿಂಚಣಿ ಬಾಕಿ ಉಳಿಸಿಕೊಂಡ ಕೇಂದ್ರ ಸರ್ಕಾರದ ವಿರುದ್ಧ ಪಂಜಾಬ್ ಹೈಕೋರ್ಟ್ ಕೆಂಡಾಮಂಡಲ

ಭಾರತ- ಪಾಕಿಸ್ತಾನ ಯುದ್ಧದ ವೇಳೆ ಅಂಗವೈಕಲ್ಯಕ್ಕೆ ತುತ್ತಾದ ಪ್ರತಿಷ್ಠಿತ 'ವೀರ ಚಕ್ರ' ಪುರಸ್ಕೃತ ನಿವೃತ್ತ ಸೇನಾ ಅಧಿಕಾರಿ ಕ್ಯಾಪ್ಟನ್ ರೀತ್ ಎಂಪಿ ಸಿಂಗ್ ಹಾಗೂ ಇನ್ನಿತರ ಯೋಧರಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

Bar & Bench

ಭಾರತ- ಪಾಕಿಸ್ತಾನ ನಡುವೆ 1965ರಲ್ಲಿ ನಡೆದಿದ್ದ ಯುದ್ಧದಲ್ಲಿ ಹೋರಾಡಿ ವೀರ ಚಕ್ರ ಪುರಸ್ಕಾರಕ್ಕೆ ಭಾಜನರಾಗಿರುವ ಯೋಧರ ಪಿಂಚಣಿ ಬಾಕಿಯನ್ನು ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಆದೇಶದಂತೆ ಒಂದು ತಿಂಗಳೊಳಗೆ ಪಾವತಿಸಬೇಕು. ಇಲ್ಲದೇ ಹೋದರೆ ಶೇ 15ರಷ್ಟು ಬಡ್ಡಿ ತೆರಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಪಂಜಾಬ್‌ ಮತ್ತುಹರಿಯಾಣ ಹೈಕೋರ್ಟ್‌ ಎಚ್ಚರಿಕೆ ನೀಡಿದೆ [ಭಾರತ ಒಕ್ಕೂಟ ಸರ್ಕಾರ ಮತ್ತಿತರರು ಹಾಗೂ ಕ್ಯಾ. ರೀತ್‌ ಎಂಪಿ ಸಿಂಗ್‌ (ನಿವೃತ್ತರು) ಇನ್ನಿತರರ ನಡುವಣ ಪ್ರಕರಣ].

ಈ ಸಂಬಂಧ 2018 ರಲ್ಲಿಯೇ ತೀರ್ಪು ನೀಡಲಾಗಿದ್ದರೂ 7 ವರ್ಷಗಳಿಂದ ಬಾಕಿ ಮೊತ್ತ ಪಾವತಿಸದೆ ಇರುವ ಕೇಂದ್ರ ಸರ್ಕಾರದ ಧೋರಣೆ ಬಗ್ಗೆ ನ್ಯಾಯಮೂರ್ತಿಗಳಾದ ಸಂಜೀವ್ ಪ್ರಕಾಶ್ ಶರ್ಮಾ ಮತ್ತು ಮೀನಾಕ್ಷಿ ಐ ಮೆಹ್ತಾ ಅವರಿದ್ದ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಪರಷೋತ್ತಮ್‌ ದಾಸ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಆಧರಿಸಿ ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ (ಎಎಫ್‌ಟಿ) ಆದೇಶ ಪ್ರಶ್ನಿಸಿ ಪದೇ ಪದೇ ಅರ್ಜಿ ಸಲ್ಲಿಸಲಾಗುತ್ತಿದೆ ಎಂದು ಕೂಡ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ .

ಇದು ಎಎಫ್‌ಟಿ ಆದೇಶಗಳನ್ನು ಪ್ರಶ್ನಿಸು 226ನೇ ವಿಧಿಯಡಿ ಅರ್ಜಿಗಳನ್ನು ಆಲಿಸಲು ಹೈಕೋರ್ಟ್‌ಗಳಿಗೆ ಅಧಿಕಾರವಿಲ್ಲ ಎಂದು ತಿಳಿಸಿ ಕೇಂದ್ರ ಸರ್ಕಾರ ಮತ್ತು ಮೇಜರ್‌ ಜನರಲ್‌ ಶ್ರೀ ಕಾಂತ್‌ ಶರ್ಮಾ ಪ್ರಕರಣಕ್ಕೆ ಸಂಬಂಧಿಸಿದಂತೆ 2015ರಲ್ಲಿ ನೀಡಿದ್ದ ತೀರ್ಪನ್ನು ಆ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿತ್ತು.

 ಭಾರತ- ಪಾಕಿಸ್ತಾನ ನಡುವೆ 1965ರಲ್ಲಿ ನಡೆದಿದ್ದ ಯುದ್ಧದ ವೇಳೆ ಅಂಗವೈಕಲ್ಯಕ್ಕೆ ತುತ್ತಾದ  ಪ್ರತಿಷ್ಠಿತ 'ವೀರ ಚಕ್ರ' ಪುರಸ್ಕಾರಕ್ಕೆ ಭಾಜನರಾದ ನಿವೃತ್ತ ಸೇನಾ ಅಧಿಕಾರಿ ಕ್ಯಾಪ್ಟನ್ ರೀತ್ ಎಂಪಿ ಸಿಂಗ್ ಹಾಗೂ ಇನ್ನಿತರ ಯೋಧರಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಅವರು ಅರ್ಹರಾಗಿದ್ದ ಶೇ 100ರಷ್ಟು ಪಿಂಚಣಿ ಬದಲಿಗೆ ಕೇವಲ ಶೇ 80ರಷ್ಟು ಪಿಂಚಣಿ ನೀಡಲು ನಿರ್ಧರಿಸಲಾಗಿತ್ತು.

ಆದರೆ 2014 ರಲ್ಲಿ ಭಾರತ ಒಕ್ಕೂಟ ಸರ್ಕಾರ ಮತ್ತು ರಾಮ್‌ ಅವತಾರ್‌ ಪ್ರಕರಣದಲ್ಲಿ ಇಂತಹ ಘಟನೆಗಳಲ್ಲಿ ಅಂಗವೈಕಲ್ಯಕ್ಕೆ ತುತ್ತಾದ ಯೋಧರಿಗೆ ಶೇ100ರಷ್ಟು ಪಿಂಚಣಿ ಒದಗಿಸಬೇಕು ಎಂದು ತೀರ್ಪು ನೀಡಿತ್ತು. ಈ ತೀರ್ಪಿನ ಹಿನ್ನೆಲೆಯಲ್ಲಿ ಪೂರ್ವಾನ್ವಯವಾಗುವಂತೆ ತಮ್ಮ ಪಿಂಚಣಿಯನ್ನೂ ಪರಿಷ್ಕರಿಸಬೇಕು ಎಂದು ರೀತ್‌ ಸಿಂಗ್‌ ಕೋರಿದ್ದರು.

ಶೇ 100ರಷ್ಟು ಪಿಂಚಣಿಯನ್ನು ಸಿಂಗ್‌ ಅವರಿಗೆ ನೀಡುವಂತೆ ಸಶಸ್ತ್ರ ಪಡೆಗಳ ನ್ಯಾಯಮಂಡಳಿ (ಎಎಫ್‌ಟಿ) ಆಗಸ್ಟ್ 23, 2018 ರಂದು ತೀರ್ಪು ನೀಡಿತಾದರೂ ಅಧಿಕಾರಿಗಳು ಇದನ್ನು ಪಾಲಿಸದ ಹಿನ್ನೆಲೆಯಲ್ಲಿ ಸಿಂಗ್‌  ಹೈಕೋರ್ಟ್‌ ಮೆಟ್ಟಿಲೇರಿದ್ದರು.ಪ್ರತಿಕ್ರಿಯೆಯಾಗಿ ಎಎಫ್‌ಟಿ ನಿರ್ಧಾರ ಪ್ರಶ್ನಿಸಿ ಕೇಂದ್ರ ಸರ್ಕಾರ ಪಂಜಾಬ್‌ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿತು. 

ಹೈಕೋರ್ಟ್ ಇದೀಗ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದು, ಒಂದು ತಿಂಗಳೊಳಗೆ ಬಾಕಿ ಪಾವತಿಸುವಂತೆ ಜನವರಿ 22ರಂದು ನೀಡಿದ ಆದೇಶದಲ್ಲಿ ಕಿವಿ ಹಿಂಡಿದೆ.