ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ 'ಸಾಮಾನ್ಯ ಪ್ರವೇಶ ಪರೀಕ್ಷೆ -2021'ರ ಅಡಿ ಸರ್ಕಾರಿ ಹಾಗೂ ಸೂಪರ್‌ನ್ಯೂಮರರಿಯೇತರ ಕೋಟಾದಡಿ ಸೀಟು ಪಡೆಯಲು ಒಸಿಐ ಗುರುತಿನ ಚೀಟಿ ಹೊಂದಿರುವವರು ಅರ್ಹತೆ ಹೊಂದಿಲ್ಲ ಎನ್ನುವ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿದ್ದ 'ಭಾರತದ ವಿದೇಶಿ ನಾಗರಿಕರು' ವಿಭಾಗದಡಿ ಬರುವ ವಿದ್ಯಾರ್ಥಿಗಳ ಮನವಿಯನ್ನು ಈಚೆಗೆ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಕೇಂದ್ರ ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಭಾರತೀಯ ಹಿನ್ನೆಲೆಯ ವಿದೇಶಿ ಪೌರತ್ವ ಹೊಂದಿರುವ ಮತ್ತು ಅನಿರ್ದಿಷ್ಟಾವಧಿಗೆ ಭಾರತದಲ್ಲಿ ಉಳಿದು, ಕೆಲಸ ಮಾಡಲು ಗುರುತಿನ ಚೀಟಿ ಹೊಂದಿರುವ 'ಭಾರತದ ವಿದೇಶಿ ನಾಗರಿಕರು' (ಓವರ್‌ಸೀಸ್ ಸಿಟಿಜನ್ಸ್ ಆಫ್ ಇಂಡಿಯಾ) ಗುರುತಿನ ಚೀಟಿ ಹೊಂದಿರುವ ವಿದ್ಯಾರ್ಥಿಗಳು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ನಿಗದಿಯಾಗಿರುವ ಕೋಟಾ ಮತ್ತು ಸೂಪರ್‌ನ್ಯೂಮರರಿ ಸೀಟುಗಳನ್ನು ಹೊರತುಪಡಿಸಿ ಭಾರತೀಯ ನಾಗರಿಕರಿಗೆ ವಿಶೇಷವಾಗಿ ಮೀಸಲಾಗಿರುವ ಸೀಟುಗಳ ಅಡಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ -2021ರ ಅಡಿ ಪ್ರವೇಶ ಪಡೆಯಲು ಒಸಿಐ ಗುರುತಿನ ಚೀಟಿ ಹೊಂದಿರುವವರು ಅರ್ಹತೆ ಹೊಂದಿಲ್ಲ ಎಂದು ಕೇಂದ್ರ ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.
ಅರ್ಹತೆ ಮತ್ತು ವಿದ್ಯಾರ್ಹತೆ ನಿಬಂಧನೆಗೆ ಒಳಪಟ್ಟು ಪ್ರಕರಣದ ವಿಶೇಷ ಪರಿಸ್ಥಿತಿಯನ್ನು ಪರಿಗಣಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠವು ಅರ್ಜಿದಾರರ ಪರವಾಗಿ ಮಧ್ಯಂತರ ಆದೇಶ ನೀಡಲಾಗಿದ್ದರಿಂದ ಪ್ರವೇಶಾತಿಗೆ ಅವಕಾಶ ಮಾಡಿಕೊಟ್ಟಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮುಂದೆ ಅಗತ್ಯ ದಾಖಲೆ ಸಲ್ಲಿಸಲು ಅರ್ಜಿದಾರರಿಗೆ ಹತ್ತು ದಿನಗಳ ಕಾಲಾವಕಾಶವನ್ನು ಪೀಠವು ನೀಡಿದೆ.
2021ರ ಮಾರ್ಚ್ 4ರ ಕೇಂದ್ರ ಸರ್ಕಾರದ ಅಧಿಸೂಚನೆಯ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ರಾಜ್ಯದಲ್ಲಿ ಶಿಕ್ಷಣ ಪಡೆಯುತ್ತಿರುವ ಅರ್ಜಿದಾರ ವಿದ್ಯಾರ್ಥಿಗಳು ಅಡಕತ್ತರಿಗೆ ಸಿಲುಕಿದ್ದರು. ಅರ್ಜಿದಾರರು ಭಾರತೀಯ ಪೌರತ್ವ ಹೊಂದಿಲ್ಲ ಎಂದು ಸರ್ಕಾರದ ಸೀಟು ಮತ್ತು ಸೂಪರ್ ನ್ಯೂಮರರಿಯೇತರ ಸೀಟುಗಳ ಅಡಿಯಲ್ಲಿ ಪ್ರವೇಶ ನೀಡಲು ಕೆಇಎ ನಿರಾಕರಿಸಿತ್ತು. 2021ರ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯು 2005, 2007 ಮತ್ತು 2009ರ ಅಧಿಸೂಚನೆಗಳಲ್ಲಿ ಒಸಿಐ ಗುರುತಿನ ಚೀಟಿ ಹೊಂದಿರುವವರಿಗೆ ನೀಡಿರುವ ಶೈಕ್ಷಣಿಕ ಹಕ್ಕುಗಳನ್ನು ಕಸಿಯುತ್ತಿದೆ ಎಂದು ಅರ್ಜಿದಾರರು ತಕರಾರು ಎತ್ತಿದ್ದರು.
“ಒಸಿಐ ಗುರುತಿನ ಚೀಟಿ ಹೊಂದಿರುವವರು ಮತ್ತು ಎನ್‌ಆರ್‌ಐಗಳ ನಡುವೆ ಸ್ಪರ್ಧಾತ್ಮಕವಾಗಿ ಮುನ್ನಡೆ ಹೊಂದಿಲ್ಲದ ದೇಶವಾಸಿಗಳ ಹಿತಾಸಕ್ತಿಯನ್ನು ಪ್ರಜ್ಞಾಪೂರ್ವಕವಾಗಿ ಅಧಿಸೂಚನೆಯ ಮೂಲಕ ರಕ್ಷಿಸಲಾಗಿದೆ” ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ ಬಿ ನರಗುಂದ ಹೇಳಿದ್ದಾರೆ.
“ಒಸಿಐ ಮತ್ತು ಎನ್‌ಆರ್‌ಐ ವರ್ಗಗಳನ್ನು ದೇಶವಾಸಿಗಳ ಜೊತೆ ಇಟ್ಟು ತೂಗಿದರೆ ಮೊದಲಿನ ಎರಡು ವರ್ಗಗಳ ವಿದ್ಯಾರ್ಥಿಗಳ ಹುಟ್ಟು ಮತ್ತು ವಿದೇಶದಲ್ಲಿ ಬೆಳೆದಿರುವುದರಿಂದ ಲೋಕಜ್ಞಾನ ಹೆಚ್ಚಿರುತ್ತದೆ. ಈ ವಿಚಾರದಲ್ಲಿ ದೇಶವಾಸಿಗಳಿಗೆ ಆ ಅನುಕೂಲ ಇರುವುದಿಲ್ಲ. ಸ್ಥಳೀಯರು ಮತ್ತು ಒಸಿಐ ಹಾಗೂ ಎನ್‌ಆರ್‌ಐಗಳ ನಡುವಿನ ವರ್ಗೀಕರಣವನ್ನು ಸಮಾನತೆಯ ಷರತ್ತನ್ನು ಅನ್ವಯಿಸುವ ಮೂಲಕ ಎಡವಲಾಗುವುದಿಲ್ಲ” ಎಂದು ನ್ಯಾಯಮೂರ್ತಿ ದೀಕ್ಷಿತ್ ಹೇಳಿದ್ದಾರೆ.
2005, 2009 ಮತ್ತು 2021ರ ಅಧಿಸೂಚನೆಯಲ್ಲಿ ಒಸಿಐ ಗುರುತಿನ ಚೀಟಿ ಹೊಂದಿರುವ ಎಲ್ಲರೂ ವಿದೇಶಿಗಳಾಗಿದ್ದಾರೆ. ಆದರೆ, ಎಲ್ಲಾ ವಿದೇಶಿಯರು ಒಸಿಐ ಗುರುತಿನ ಚೀಟಿ ಹೊಂದಿದವರಲ್ಲ ಎಂದು ಪೀಠ ಬೆರಳು ಮಾಡಿದೆ.