Lalu Prasad Yadav 
ಸುದ್ದಿಗಳು

ಮೇವು ಹಗರಣ: ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್‌ಗೆ ಜಾರ್ಖಂಡ್ ಹೈಕೋರ್ಟ್‌ನಿಂದ ಜಾಮೀನು; ಹೊರಬರುವರೇ ಲಾಲು?

ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ಲಾಲೂ ಪ್ರಸಾದ್ ಯಾದವ್ ಅವರು 1992-93ರಲ್ಲಿ ಚಾಯ್‌ಬಾಸ ಖಜಾನೆಯಿಂದ ₹33.67 ಕೋಟಿಯನ್ನು ಹಿಂಪಡೆದಿದ್ದ ಹಗರಣ ಇದಾಗಿದೆ.

Bar & Bench

ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಲಾಲೂ ಪ್ರಸಾದ್ ಯಾದವ್ ಅವರಿಗೆ ಮೇವು ಹಗರಣದ ಪೈಕಿ ಒಂದಾದ ಚಾಯ್‌ಬಾಸ ಖಜಾನೆ ಹಗರಣದಲ್ಲಿ ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಲಾಲೂ ಪ್ರಸಾದ್ ಯಾದವ್ ಮುಖ್ಯಮಂತ್ರಿಯಾಗಿದ್ದಾಗ 1992-93ರಲ್ಲಿ ಚಾಯ್‌ಬಾಸ ಖಜಾನೆಯಿಂದ ₹33.67 ಕೋಟಿಯನ್ನು ಹಿಂಪಡೆದಿದ್ದ ಹಗರಣ ಇದಾಗಿದೆ. ಮೇವು ಹಗರಣದ ಪೈಕಿ ಮತ್ತೊಂದು ಪ್ರಕರಣವಾದ ದುಮ್ಕಾ ಖಜಾನೆ ಹಗರಣಕ್ಕೆ ಸಂಬಂಧಿಸಿದಂತೆ ಜಾಮೀನು ದೊರೆಯಬೇಕಿರುವುದರಿಂದ ಲಾಲೂ ಅವರು ಸದ್ಯದ ಮಟ್ಟಿಗೆ ಜೈಲಿನಲ್ಲೇ ಉಳಿಯಲಿದ್ದಾರೆ.

ಮೇವು ಹಗರಣದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120ಬಿ ಒಳಗೊಂಡು ಸೆಕ್ಷನ್ 420, 467, 468 471, 477 (A) ಮತ್ತು ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 13(i)(c)(d) ಅಡಿ ಅಪರಾಧಿ ಎಂದು ಘೋಷಿಸಲ್ಪಟ್ಟ ಲಾಲೂ ಯಾದವ್ ಅವರಿಗೆ ಡಿಸೆಂಬರ್ 2017ರಲ್ಲಿ ಒಟ್ಟು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಮೇವು ಹಗರಣಕ್ಕೆ ಸಂಬಂಧಿಸಿದ ನಾಲ್ಕು ವಿಭಿನ್ನ ಪ್ರಕರಣಗಳಲ್ಲಿ ಲಾಲೂ ಅವರು ಶಿಕ್ಷೆಗೊಳಗಾಗಿದ್ದರು. ಚಾಯ್‌ಬಾಸ ಖಜಾನೆಗೆ ಸಂಬಂಧಿಸಿದ್ದ ಎರಡು ಪ್ರಕರಣವಲ್ಲದೆ, ದಿಯೋಘರ್ ಖಜಾನೆ ಮತ್ತು ದುಮ್ಕಾ ಖಜಾನೆಗೆ ಸೇರಿದ್ದ ತಲಾ ಒಂದೊಂದು ಪ್ರಕರಣಗಳಲ್ಲಿ ಅವರನ್ನು ದೋಷಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಲಾಗಿತ್ತು. ದೊರಂಡಾ ಖಜಾನೆ ಪ್ರಕರಣದ ವಿಚಾರಣೆಯು ಇನ್ನೂ ಬಾಕಿದೆ. ದಿಯೋಘರ್ ಖಜಾನೆ ಪ್ರಕರಣದಲ್ಲಿ 1991 ಮತ್ತು 1994ರ ಅವಧಿಯಲ್ಲಿ ₹89 ಲಕ್ಷ ದುರುಪಯೋಗ ಪಡಿಸಿಕೊಂಡ ಆರೋಪದಲ್ಲಿ ಲಾಲೂ ಅವರನ್ನು ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿತ್ತು .

2019ರ ಜುಲೈನಲ್ಲಿ ದಿಯೋಘರ್ ಖಜಾನೆ ಪ್ರಕರಣದಲ್ಲಿ ಜಾರ್ಖಂಡ್ ಹೈಕೋರ್ಟ್‌ ಲಾಲೂ ಯಾದವ್ ಅವರ ಶಿಕ್ಷೆ ಅಮಾನತು ಮಾಡಿದ್ದಲ್ಲದೇ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಕೇಂದ್ರೀಯ ತನಿಖಾ ದಳವು (ಸಿಬಿಐ) ಸಲ್ಲಿಸಿದ್ದ ಮನವಿ ಆಧರಿಸಿ ಸುಪ್ರೀಂ ಕೋರ್ಟ್ ಈ ವರ್ಷದ ಫೆಬ್ರವರಿಯಲ್ಲಿ ನೋಟಿಸ್ ಜಾರಿಗೊಳಿಸಿತ್ತು.